1.82 ಲಕ್ಷ ಮಕ್ಕಳು ಶಾಲೆಗೆ ಹೋಗ್ತಿಲ್ಲ: ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆ

Child
Published on

ಬೆಂಗಳೂರು: ರಾಜ್ಯದಲ್ಲಿ ಒಟ್ಟು 1,82,865 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದು, ಇದರಲ್ಲಿ ಗ್ರಾಮೀಣ ಭಾಗಗಳಲ್ಲಿನ 3ರಿಂದ 6 ವರ್ಷದೊಳಗಿನ 1.26 ಲಕ್ಷ ಮಕ್ಕಳೂ ಸೇರಿದ್ದಾರೆ ಎಂದು ರಾಜ್ಯ ಸರ್ಕಾರ ಬುಧವಾರ ಹೈಕೋರ್ಟ್​ಗೆ ಸಮೀಕ್ಷಾ ವರದಿ ಸಲ್ಲಿಸಿದೆ.

ಶಾಲೆಯಿಂದ ಹೊರಗುಳಿದಿರುವ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವ ವಿಚಾರವಾಗಿ ದಾಖಲಿಸಿ ಕೊಂಡಿರುವ ಸ್ವಯಂಪ್ರೇರಿತ ಪಿಐಎಲ್ ಅನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ನೇತೃತ್ವದ ವಿಭಾಗೀಯ ಪೀಠ ಬುಧವಾರ ವಿಚಾರಣೆ ನಡೆಸಿತು. ಈ ಅರ್ಜಿಯಲ್ಲಿ ಕೋರ್ಟ್ ಸಹಾಯಕರಾಗಿರುವ (ಅಮಿಕಸ್ ಕ್ಯೂರಿ) ಹಿರಿಯ ವಕೀಲ ಕೆ.ಎನ್. ಫಣೀಂದ್ರ ವರದಿ ಸಲ್ಲಿಸಿ, ಈ ಮಾಹಿತಿ ನೀಡಿದ್ದಾರೆ.

1.82 ಲಕ್ಷ ಮಕ್ಕಳು ಹೊರಗೆ: ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್​ರಾಜ್ ಇಲಾಖೆಯ ಅಧಿಕಾರಿಗಳ ಮಾಹಿತಿ ಪ್ರಕಾರ, ಗ್ರಾಮೀಣ ಪ್ರದೇಶಗಳಲ್ಲಿ ಸಮೀಕ್ಷೆ ನಡೆಸಿ 18 ವರ್ಷದೊಳಗಿನ 34,55,656 ಮಕ್ಕಳನ್ನು ಗುರುತಿಸಲಾಗಿದೆ. ಅವರಲ್ಲಿ 6ರಿಂದ 18 ವರ್ಷದೊಳಗಿನ 32,14,257 ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆ. 3 ರಿಂದ 6 ವರ್ಷದೊಳಗಿನ 1,26,245 ಮಕ್ಕಳು ಹಾಗೂ 6ರಿಂದ 18 ವಯೋಮಾನದ 33,344 ಮಕ್ಕಳು ಶಾಲೆಗೆ ಹೋಗುತ್ತಿಲ್ಲ. 9,716 ಮಕ್ಕಳು ಶಾಲೆಗಳಿಗೆ ಪ್ರವೇಶವನ್ನೇ ಪಡೆದಿಲ್ಲ. ಇನ್ನು 72,094 ಮಕ್ಕಳು 3 ವರ್ಷಕ್ಕಿಂತ ಕಡಿಮೆ ವಯೋಮಾನದವರಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ನಗರಾಭಿವೃದ್ಧಿ ಇಲಾಖೆಯ ಮಾಹಿತಿ ಪ್ರಕಾರ, ನಗರ ಪ್ರದೇಶಗಳಲ್ಲಿ 12,28,052 ಮಕ್ಕಳನ್ನು ಗುರುತಿಸಲಾಗಿದ್ದು, ಅವರಲ್ಲಿ 6ರಿಂದ 18 ವರ್ಷದೊಳಗಿನ 9,25,820 ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆ. ಇದೇ ವಯೋಮಾನದ 8,718 ಮಕ್ಕಳು ಶಾಲೆಗಳಿಂದ ಹೊರಗುಳಿದಿದ್ದು, 4,848 ಮಕ್ಕಳು ಶಾಲೆಗೆ ದಾಖಲಾತಿಯೇ ಆಗಿಲ್ಲ ಎಂದು ವರದಿಯಲ್ಲಿ ವಿವರಿಸಲಾಗಿದೆ.

ಸಮೀಕ್ಷೆ ಆರಂಭಿಸದ ಬಿಬಿಎಂಪಿ: ನಗರರಾಭಿವೃದ್ಧಿ ಇಲಾಖೆ ವ್ಯಾಪ್ತಿಗೆ ಬರುವ ಬಿಬಿಎಂಪಿ ಮನೆ ಮನೆ ಸಮೀಕ್ಷೆಯನ್ನೇ ಆರಂಭಿಸಿಲ್ಲ. ಕೋವಿಡ್ ಸಾಂಕ್ರಾಮಿಕದ ಕಾರಣದಿಂದ ಸಮೀಕ್ಷೆ ಕಾರ್ಯ ಆರಂಭಿಸಲು ವಿಳಂಬವಾಗಿದೆ ಎಂಬ ಕಾರಣವನ್ನು ಅಧಿಕಾರಿಗಳು ನೀಡಿದ್ದಾರೆ. ಸರ್ವೆ ಆರಂಭಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಬಿಬಿಎಂಪಿಗೆ ನೋಟಿಸ್ ಜಾರಿಗೊಳಿಸಿ, ಉತ್ತರಿಸುವಂತೆ ಸೂಚಿಸಿದ ಪೀಠ, ಕೂಡಲೇ ಮನೆ ಮನೆ ಸರ್ವೆ ನಡೆಸುವಂತೆ ಬಿಬಿಎಂಪಿಗೆ ನಿರ್ದೇಶಿಸಬೇಕು ಎಂದು ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗೆ ನಿರ್ದೇಶಿಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net