ಕೃಷ್ಣಾ ನದಿಗೆ 1.75 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ

1.75 lakh cusec water released to Krishna river
ಆಲಮಟ್ಟಿ ಜಲಾಶಯದ ಎಲ್ಲ 26 ಗೇಟ್‌ಗಳ ಮೂಲಕ ನದಿಪಾತ್ರಕ್ಕೆ ನೀರು ಹರಿಬಿಟ್ಟಿರುವುದು.
Published on


ಆಲಮಟ್ಟಿ: ಇಲ್ಲಿನ ಲಾಲ್‌ಬಹಾದೂರ್ ಶಾಸ್ತ್ರಿ ಸಾಗರಕ್ಕೆ ಒಳಹರಿವು ಹೆಚ್ಚಿದ್ದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಗುರುವಾರ ಸಂಜೆ 1.75 ಲಕ್ಷ ಕ್ಯೂಸೆಕ್ ನೀರು ನದಿಪಾತ್ರಕ್ಕೆ ಹರಿಬಿಡಲಾಗಿದೆ.

ಗರಿಷ್ಠ 519.60 ಮೀಟರ್ ಎತ್ತರದ ಜಲಾಶಯದಲ್ಲಿ ಗುರುವಾರ ಸಂಜೆ 6ಕ್ಕೆ 517.42 ಮೀಟರ್‌ವರೆಗೆ 89.80 ಟಿಎಂಸಿ ನೀರು ಸಂಗ್ರಹವಾಗಿದೆ. ಒಳಹರಿವು 1,65,833 ಕ್ಯೂಸೆಕ್ ಇದೆ. ಹೊರಹರಿವು 1.75 ಲಕ್ಷ ಕ್ಯೂಸೆಕ್ ಇದೆ.

1.25 ಲಕ್ಷ ಕ್ಯೂಸೆಕ್ ಇದ್ದ ಹೊರಹರಿವನ್ನು 1.50 ಲಕ್ಷ ಕ್ಯೂಸೆಕ್‌ಗೆ ನಂತರ 1.75 ಲಕ್ಷ ಕ್ಯೂಸೆಕ್ ಏರಿಸಲಾಗಿದೆ. 2.50 ಲಕ್ಷ ಕ್ಯೂಸೆಕ್ ಗೂ ಅಧಿಕ ನೀರು ಹರಿಸಿದರೆ ನದಿ ತೀರದಲ್ಲಿರುವ ಕೆಲ ಜಮೀನುಗಳು ಜಲಾವೃತ್ತಗೊಳ್ಳುವ ಸಾಧ್ಯತೆ ಇದೆ. ಹೀಗಾಗಿ ನದಿ ತೀರದಲ್ಲಿ ಜಮೀನು ಹೊಂದಿದ ರೈತರು ಆತಂಕಕ್ಕೀಡಾಗಿದ್ದಾರೆ.

ಜಲಾಶಯದ ಬಲಭಾಗದ ವಿದ್ಯುತ್ ಉತ್ಪಾದನಾ ಘಟಕದ ಮೂಲಕ 45 ಸಾವಿರ ಕ್ಯೂಸೆಕ್ ನೀರು ಬಿಡುತ್ತಿದ್ದು, 148 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ.

ಪ್ರವಾಹ, ನೀರಿನ ಮಟ್ಟ, ಮಳೆಯ ಪ್ರಮಾಣ, ಮಹಾರಾಷ್ಟ್ರ ಅಧಿಕಾರಿಗಳ ಜತೆ ಸತತ ಸಂಪರ್ಕ ಇಟ್ಟುಕೊಂಡು ಒಳಹರಿವಿನ ಅಂದಾಜು ಲೆಕ್ಕಾಚಾರ ಮಾಡಿ, ಆಲಮಟ್ಟಿ ಜಲಾಶಯದಿಂದ ನೀರು ಬಿಡುವ ಬಗ್ಗೆ ನಿರ್ಧರಿಸಲಾಗುತ್ತಿದೆ. ಇದು ಪ್ರತಿ ಗಂಟೆಗೊಮ್ಮೆ ಬದಲಾವಣೆಯಾಗುತ್ತಿದೆ. ದಿನದ 24 ಗಂಟೆಯೂ ಸತತ ನಿಗಾ ಇಡಲಾಗುತ್ತಿದೆ ಎಂದು ಅಣೆಕಟ್ಟೆ ವಲಯದ ಪ್ರಭಾರಿ ಮುಖ್ಯ ಇಂಜಿನಿಯರ್ ಡಿ.ಬಸವರಾಜ ತಿಳಿಸಿದ್ದಾರೆ. ಸದ್ಯಕ್ಕೆ ಹೊರಹರಿವು ಹೆಚ್ಚಳವಾಗುವ ಸಾಧ್ಯತೆ ಇಲ್ಲ ಎಂದರು. ಮಹಾರಾಷ್ಟ್ರದಲ್ಲಿ ಮಳೆಯ ಅಬ್ಬರ ಗುರುವಾರವೂ ಮುಂದುವರಿದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net