1.74 ಕೋಟಿ ರೂ. ಮೌಲ್ಯದ ಮಾಲು ವಶ, ಆನೇಕಲ್ ಉಪವಿಭಾಗದ ಪೊಲೀಸರ ಕಾರ್ಯಾಚರಣೆ, ಮಾಲೀಕರಿಗೆ ವಸ್ತುಗಳ ಹಸ್ತಾಂತರ

14ank news and photos 01
Published on

ಆನೇಕಲ್: ಆನೇಕಲ್ ಉಪವಿಭಾಗದ ಪೊಲೀಸರು 37 ಪ್ರಕರಣ ಭೇದಿಸಿ 56 ಮಂದಿಯನ್ನು ಬಂಧಿಸಿದ್ದು, ಸುಮಾರು 1.74 ಕೋಟಿ ರೂ. ಗೂ ಹೆಚ್ಚು ಮೌಲ್ಯದ 100ಕ್ಕೂ ಹೆಚ್ಚು ಬೈಕ್, ನೂರಾರು ಮೊಬೈಲ್, ಕೆಜಿ ಚಿನ್ನಾಭರಣ, ಲಕ್ಷಾಂತರ ನಗದು ವಶಪಡಿಸಿಕೊಂಡು ಬುಧವಾರ ಮಾಲೀಕರಿಗೆ ಹಸ್ತಾಂತರಿಸಿದರು.

ಹೆೆಬ್ಬಗೋಡಿಯ ಎಸ್.ಎ್.ಎಸ್. ಕಾಲೇಜು ಕ್ರೀಡಾಂಗಣದಲ್ಲಿ ಬುಧವಾರ ಕೇಂದ್ರ ವಲಯ ಪೊಲೀಸ್ ಮಹಾನಿರೀಕ್ಷಕ ಚಂದ್ರಶೇಖರ್, ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀಗಣೇಶ್ ಸಮ್ಮುಖದಲ್ಲಿ ಹಲವು ವಸ್ತುಗಳನ್ನು ಮಾಲೀಕರಿಗೆ ಹಸ್ತಾಂತರಿಸಲಾಯಿತು. ಅಪರಾಧ ಪ್ರಕರಣ ಭೇದಿಸಿದ ಪೊಲೀಸರಿಗೆ ಪ್ರಶಂಸನಾ ಪತ್ರ ನೀಡಿ ಗೌರವಿಸಲಾಯಿತು. ಈ ಕಾರ‌್ಯಕ್ಕೆ ಕೇಂದ್ರ ವಲಯ ಪೊಲೀಸ್ ಮಹಾನಿರೀಕ್ಷಕ ಚಂದ್ರಶೇಖರ್ ಮೆಚ್ಚುಗೆ ವ್ಯಕ್ತಪಡಿಸಿದರು.

ಮಾಧ್ಯಮಗಳಲ್ಲಿ ಕಳ್ಳತನ, ವಂಚನೆಯನ್ನಷ್ಟೆ ಬಿತ್ತರಿಸುತ್ತಾರೆ. ಆದರೆ ಪೊಲೀಸರು, ಕಳ್ಳರನ್ನು ಬಂಧಿಸಿ ಜೈಲಿಗೆ ಕಳುಹಿಸಿ, ಸಾಮಾನ್ಯ ಜನರ ವಸ್ತುಗಳನ್ನು ಹಿಂತಿರುಗಿಸುವ ವರದಿಗಳನ್ನು ಪ್ರಕಟಿಸಿ, ಬಿತ್ತರಿಸಿ, ಪೊಲೀಸರ ಕಾರ್ಯವನ್ನು ಪ್ರೋತ್ಸಾಹಿಸಬೇಕು ಎಂದರು.

ಠಾಣಾವಾರು ಭೇದಿಸಲಾದ ಪ್ರಕರಣ ವಿವರ: ಹೆಬ್ಬಗೋಡಿ ಠಾಣೆಯಲ್ಲಿ 25 ದ್ವಿಚಕ್ರ ವಾಹನ, 3 ಸುಲಿಗೆ, ಮೂರು ಮನೆ ಕಳ್ಳತನ ಪ್ರಕರಣದಲ್ಲಿ ಒಟ್ಟು 51 ಲಕ್ಷ ರೂ. ವಶ, ಜಿಗಣಿ ಠಾಣೆಯಲ್ಲಿ 100 ಮೊಬೈಲ್,15 ದ್ವಿಚಕ್ರ ವಾಹನ, 2 ಸುಲಿಗೆ, 2 ಡಕಾಯಿತಿ, 2 ಮನೆ ಕಳ್ಳತನ ಪ್ರಕರಣದಲ್ಲಿ ಒಟ್ಟು 47 ಲಕ್ಷ ರೂ. ವಶಪಡಿಸಿಕೊಳ್ಳಲಾಗಿದೆ.

ಸೂರ್ಯನಗರ ಠಾಣೆಯಲ್ಲಿ 59 ಲಕ್ಷ ರೂ. ಮೌಲ್ಯದ 1.30 ಕೆ.ಜಿ. ಚಿನ್ನ, ಅತ್ತಿಬೆಲೆ ಠಾಣೆಯಲ್ಲಿ 25 ಮೊಬೈಲ್, 9 ಬೈಕ್, 1 ಸುಲಿಗೆ ಪ್ರಕರಣದಲ್ಲಿ ಒಟ್ಟು 5.25 ಲಕ್ಷ ರೂ. ಮಾಲು ವಶ, ಬನ್ನೇರುಘಟ್ಟ ಠಾಣೆಯಲ್ಲಿ 2 ದ್ವಿಚಕ್ರ ವಾಹನ, 1 ಮನೆ ಕಳ್ಳತನ ಪ್ರಕರಣದಲ್ಲಿ ಒಟ್ಟು 6 ಲಕ್ಷ ರೂ. ಮೌಲ್ಯದ ಮಾಲು ವಶ, ಸರ್ಜಾಪುರ ಠಾಣೆಯಲ್ಲಿ 18 ದ್ವಿಚಕ್ರ ವಾಹನ, 2 ಸುಲಿಗೆ ಪ್ರಕರಣದಲ್ಲಿ 11 ಲಕ್ಷ ರೂ. ಮೌಲ್ಯದ ಮಾಲು ವಶ ಹಾಗೂ ಆನೇಕಲ್ ಠಾಣಾ ವ್ಯಾಪ್ತಿಯಲ್ಲಿ ಎರಡು ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದು, ಮಾಲೀಕರಿಗೆ ಹಸ್ತಾಂತರಿಸಲಾಗುತ್ತಿದೆ.

ಡಿವೈಎಸ್ಪಿ ಮಹದೇವಪ್ಪ, ಪೊಲೀಸ್ ವೃತ್ತ ನಿರೀಕ್ಷಕರಾದ ಕೆ.ವಿಶ್ವನಾಥ್, ಮಹಾನಂದ, ಗೌತಮ್, ಬಿ.ಕೆ.ಶೇಖರ್, ಸಬ್ ಇನ್‌ಸ್ಪೆಕ್ಟರ್‌ಗಳಾದ ಗೋವಿಂದ್, ಮಧುಸೂದನ್, ಹರೀಶ್‌ರೆಡ್ಡಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net