ಮಾದಪ್ಪನ ಸನ್ನಿಧಿಯಲ್ಲಿ 1.70 ಕೋಟಿ ರೂ. ಸಂಗ್ರಹ

18 HANUR 4 (1)
ಮಲೆಮಹದೇಶ್ವರ ಬೆಟ್ಟದಲ್ಲಿ ಗುರುವಾರ ಹುಂಡಿ ಹಣ ಎಣಿಕೆ ನಡೆಯಿತು. ಪ್ರಾಧಿಕಾರದ ಕಾರ್ಯದರ್ಶಿ ಎ.ಈ ರಘು, ಉಪ ಕಾರ್ಯದರ್ಶಿ ಚಂದ್ರಶೇಖರ್, ಮರಿಸ್ವಾಮಿ, ಭಾಗ್ಯಮ್ಮ ಮಹದೇವ ಇತರರು ಇದ್ದರು.
Published on

ಹನೂರು: ತಾಲೂಕಿನ ಪ್ರಸಿದ್ಧ ಧಾರ್ಮಿಕ ಯಾತ್ರಸ್ಥಳ ಮಲೆಮಹದೇಶ್ವರ ಬೆಟ್ಟದಲ್ಲಿ ಗುರುವಾರ ನಡೆದ ಹುಂಡಿ ಎಣಿಕೆಯಲ್ಲಿ ಈ ಬಾರಿ 29 ದಿನದ ಅವಧಿಯಲ್ಲಿ 1.70 ಕೋಟಿ ರೂ ಸಂಗ್ರಹವಾಗಿದೆ.

ಬೆಳಗ್ಗೆ 7ರ ವೇಳೆಯಲ್ಲಿ ಸಾಲೂರು ಬೃಹನ್ಮಠದ ಪೀಠಾಧಿಪತಿ ಡಾ. ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರ ಸಮ್ಮುಖದಲ್ಲಿ ದೇಗುಲದಲ್ಲಿ ಹುಂಡಿಗಳನ್ನು ತೆರೆಯಲಾಯಿತು. ಸಂಗ್ರಹವಾಗಿದ್ದ ಹಣ, ಚಿನ್ನ ಹಾಗೂ ಬೆಳ್ಳಿ ಪದಾರ್ಥಗಳನ್ನು ಚೀಲದಲ್ಲಿರಿಸಿ ಬಸ್ ನಿಲ್ದಾಣದ ವಾಣಿಜ್ಯ ಸಂಕೀರ್ಣದ ವಿಶಾಲ ಕೊಠಡಿಗೆ ರವಾನಿಸಲಾಯಿತು. ಬಳಿಕ ಸಿಸಿ ಕ್ಯಾಮರಾ ಕಣ್ಗಾವಲಿನಲ್ಲಿ ಸೂಕ್ತ ಬಂದೋಬಸ್ತ್‌ನೊಂದಿಗೆ ಎಣಿಕೆ ಕಾರ್ಯ ಆರಂಭಿಸಲಾಯಿತು. ಎಣಿಕೆ ಕಾರ್ಯವು ಸಂಜೆ 4.20 ರವರೆಗೆ ನಡೆಯಿತು.

ಈ ಬಾರಿ ಬೆನಕನ ಅಮಾವಾಸ್ಯೆ, ಗೌರಿ, ಗಣೇಶ ಹಬ್ಬ, ವಾರಂತ್ಯ ರಜೆ ಹಾಗೂ ಇನ್ನಿತರ ದಿನಗಳಂದು ಮ.ಬೆಟ್ಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿದ್ದರು. ಇದರಲ್ಲಿ ಹರಕೆ ಹೊತ್ತ ಭಕ್ತರು ದೇಗುಲ, ದಾಸೋಹ ಭವನ ಸೇರಿದಂತೆ ವಿವಿಧೆಡೆಯಲ್ಲಿ ಇರಿಸಿದ್ದ ಹುಂಡಿಗಳಲ್ಲಿ ಹಣ, ಚಿನ್ನ ಹಾಗೂ ಬೆಳ್ಳಿ ಪದಾರ್ಥಗಳನ್ನು ಹಾಕಿದ್ದರು. ಜತೆಗೆ ಇ ಹುಂಡಿಯ ಮೂಲಕವೂ ಹಣವನ್ನು ಪಾವತಿ ಮಾಡಿದ್ದರು. ನಡೆದ ಹುಂಡಿ ಎಣಿಕೆಯಲ್ಲಿ ಇ ಹುಂಡಿ ಹಣ 3,92,123 ರೂ. ಸೇರಿದಂತೆ 1,70,16,820 ರೂ. ನಗದು, 30 ಗ್ರಾಂ ಚಿನ್ನ ಹಾಗೂ 1 ಕೆ.ಜಿ 100 ಗ್ರಾಂ ಬೆಳ್ಳಿ ಸಂಗ್ರಹವಾಗಿದೆ. ಹಾಗೆಯೇ ಚಲಾವಣೆಯಲ್ಲಿ ಇಲ್ಲದ 2 ಸಾವಿರ ಮುಖಬೆಲೆಯ 3 ನೋಟು ದೊರೆತಿದೆ. ಕಳೆದ ಬಾರಿ ಆ.20 ರಂದು ನಡೆದ ಹುಂಡಿ ಎಣಿಕೆಯಲ್ಲಿ 33 ದಿನದ ಅವಧಿಗೆ 2,20,22,454 ರೂ. ನಗದು, 55 ಗ್ರಾಂ ಚಿನ್ನ ಹಾಗೂ 1 ಕೆ.ಜಿ 627 ಗ್ರಾಂ ಬೆಳ್ಳಿ ಸಂಗ್ರಹವಾಗಿತ್ತು.

ಎಣಿಕೆ ಸಂದರ್ಭದಲ್ಲಿ ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಈ ರಘು, ಉಪ ಕಾರ್ಯದರ್ಶಿ ಚಂದ್ರಶೇಖರ್, ನಾಮನಿರ್ದೇಶಿತ ಸದಸ್ಯರಾದ ಮರಿಸ್ವಾಮಿ, ಭಾಗ್ಯಮ್ಮ, ಹಣಕಾಸು ಮತ್ತು ಲೆಕ್ಕಪತ್ರ ಸಲಹೆಗಾರ ಸಿ. ಮಹದೇವ, ಲೆಕ್ಕಾಧೀಕ್ಷಕ ಗುರುಮಲ್ಲಯ್ಯ, ಜಿಲ್ಲಾಡಳಿತ ಕಚೇರಿಯ ಸಂಗೀತಾ, ಕೊಳ್ಳೇಗಾಲ ಬ್ಯಾಂಕ್ ಆಫ್ ಬರೋಡ ನೌಕರರು ಹಾಗೂ ಪ್ರಾಧಿಕಾರದ ಸಿಬ್ಬಂದಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net