1.68 ಲಕ್ಷ ಜನ ರಸ್ತೆ ಅಪಘಾತದಲ್ಲಿ ಮೃತ

Road Safety
Published on

ಚಿತ್ರದುರ್ಗ: ದೇಶದೊಳಗೆ ಕಳೆದ ಸಾಲಿನಲ್ಲಿ ಒಟ್ಟು 1.68 ಲಕ್ಷ ಜನ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದು, ಅಂಕಿ-ಅಂಶಗಳ ಪ್ರಕಾರ ಶೇ 66ರಷ್ಟು ಯುವಕರೇ ಇದ್ದಾರೆ. 4 ಲಕ್ಷಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ವಿಜಯ್ ಬೇಸರಿಸಿದರು.

ತರಾಸು ರಂಗಮಂದಿರದಲ್ಲಿ ಪೊಲೀಸ್, ಸಾರಿಗೆ ಇಲಾಖೆ, ಕಾನೂನು ಸೇವಾ ಪ್ರಾಧಿಕಾರ, ಇಂಡಿಯನ್ ರೋಡ್ ಸೇಫ್ಟಿ ಟ್ರಸ್ಟ್ನಿಂದ ಶನಿವಾರ ಹಮ್ಮಿಕೊಂಡಿದ್ದ ರಸ್ತೆ ಸುರಕ್ಷತೆ, ವಾಯುಮಾಲಿನ್ಯ ತಗ್ಗಿಸುವ ಕುರಿತು ಅರಿವು ಮೂಡಿಸುವ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ದೇಶದಲ್ಲಿ ಪ್ರತಿ 3 ನಿಮಿಷಕ್ಕೊಂದು ರಸ್ತೆ ಅಪಘಾತ ಸಂಭವಿಸುತ್ತಿದೆ. ಇದಕ್ಕೆ ಪ್ರಮುಖವಾಗಿ ಮದ್ಯಪಾನ ಮಾಡಿ ವಾಹನ ಚಲಾಯಿಸುವುದು, ಪರವಾನಗಿ ಇಲ್ಲದಿರುವುದು, ಓವರ್ ಲೋಡ್, ಸಿಗ್ನಲ್ ಜಂಪಿಂಗ್, ಅತೀ ವೇಗವಾಗಿ ಚಲಾಯಿಸುವುದು ಹೀಗೆ.. ಇತರ ಕಾರಣಗಳಿಂದಲೂ ಹೆಚ್ಚಾಗುತ್ತಿವೆ. ಆದ್ದರಿಂದ ರಸ್ತೆ ಸುರಕ್ಷತಾ ಕ್ರಮಗಳ ಕುರಿತು ಮಕ್ಕಳು, ಯುವಸಮೂಹದವರಲ್ಲಿ ಹೆಚ್ಚಿನ ಅರಿವು ಮೂಡಿಸಬೇಕಿದೆ ಎಂದು ಸಲಹೆ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್‌ಕುಮಾರ್ ಮೀನಾ ಮಾತನಾಡಿ, ಅಪಘಾತದಿಂದ ಮೃತಪಡಲು ಸಾಮಾನ್ಯವಾಗಿ ಹೆಲ್ಮೆಟ್ ಹಾಕದಿರುವುದು, ಓವರ್ ಟೇಕ್ ಮಾಡುವುದು, ಸೀಟ್ ಬೆಲ್ಟ್ ಹಾಕದಿರುವುದು, ಮದ್ಯ ಸೇವಿಸಿ ವಾಹನ ಚಲಾಯಿಸುವುದೇ ಕಾರಣಗಳಾಗಿವೆ. ಆದ್ದರಿಂದ ಸವಾರರು ಕಡ್ಡಾಯವಾಗಿ ನಿಯಮ ಪಾಲಿಸಿದಲ್ಲಿ ನಿಯಂತ್ರಿಸಬಹುದಾಗಿದೆ. ಅರಿವು ಮೂಡಿಸಲು ಅಭಿಯಾನ ಹಮ್ಮಿಕೊಂಡಿದ್ದು, ಸಾರ್ವಜನಿಕರು ಇದಕ್ಕೆ ಕೈಜೋಡಿಸಿ ಎಂದು ಮನವಿ ಮಾಡಿದರು.

ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಬಿ.ಕೆ.ಮಹೇಶ್ ಮಾತನಾಡಿ, ರಾಜ್ಯ, ರಾಷ್ಟ್ರೀಯ ಹೆದ್ದಾರಿಗಳು ವಿಶಾಲವಾಗಿದ್ದರೂ ಸರಿಯಾದ ರೀತಿಯಲ್ಲಿ ಅವುಗಳನ್ನು ಬಳಕೆ ಮಾಡಿಕೊಳ್ಳುವಲ್ಲಿ ಹಿಂದುಳಿದಿದ್ದೇವೆ. ಎಸ್ಸೆಸ್ಸೆಲ್ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ರಸ್ತೆ ಬಳಕೆ ಕುರಿತು ಅರಿವು ಮತ್ತು ಜಾಗೃತಿ ಮೂಡಿಸಿದರೆ, ಅಪಘಾತ ಪ್ರಮಾಣ ತಗ್ಗಿಸಬಹುದು ಎಂಬ ಕಾರಣಕ್ಕೆ ಟ್ರಸ್ಟ್‌ನಿಂದ ಕಳೆದ ವರ್ಷ ರಾಜಸ್ತಾನದ ಜೈಪುರದಲ್ಲಿ ಮಿಷನ್ 2030ಕ್ಕೆ ಅಪಘಾತ ಮುಕ್ತ ರಾಷ್ಟ್ರ ನಿರ್ಮಾಣದ ಪಣ ಎಂಬ ಕಾರ್ಯಕ್ರಮ ಮಾಡಲಾಗಿತ್ತು ಎಂದು ತಿಳಿಸಿದರು.

ಜಿಲ್ಲಾಸ್ಪತ್ರೆ ಮಕ್ಕಳ ತಜ್ಞ ಡಾ.ಗುರುರಾಜ್ ಅವರು ಪ್ರೊಜೆಕ್ಟರ್ ಮೂಲಕ ಪ್ರಥಮ ಚಿಕಿತ್ಸೆ ಸೇರಿ ಇತರ ಮುಂಜಾಗ್ರತಾ ಕ್ರಮಗಳ ಕುರಿತು ಮಾಹಿತಿ ನೀಡಿದರು.

ಜಾಥಾಕ್ಕೆ ಚಾಲನೆ: ಕಾರ್ಯಕ್ರಮಕ್ಕೂ ಮುನ್ನ ಧರ್ಮೇಂದರ್‌ಕುಮಾರ್ ಮೀನಾ ಅವರು ರಸ್ತೆ ಸುರಕ್ಷತೆ ಹಾಗೂ ವಾಯುಮಾಲಿನ್ಯ ತಗ್ಗಿಸುವ ಕುರಿತು ಅರಿವು ಮೂಡಿಸುವ ಜಾಥಾಕ್ಕೆ ಚಾಲನೆ ನೀಡಿದರು. ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಬಸ್‌ಗಳಿಗೆ ಸುರಕ್ಷತಾ ಕ್ರಮಗಳ ಘೋಷವಾಕ್ಯಗಳಿರುವ ಸ್ಟಿಕ್ಕರ್‌ಗಳನ್ನು ಅಂಟಿಸಿದರು. ವಿದ್ಯಾರ್ಥಿನಿಯರು ನಾಮಫಲಕ ಹಿಡಿದು ಸಾಗಿದರು.

ಎಎಸ್‌ಪಿ ಎಸ್.ಜೆ.ಕುಮಾರಸ್ವಾಮಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ಎಂ.ಭರತ್, ಟ್ರಸ್ಟ್ ಅಧ್ಯಕ್ಷ ಹೇಮಂತ್‌ಕುಮಾರ್, ಗೌರವಾಧ್ಯಕ್ಷ ಪ್ರಭುಗೌಡ ಪಾಟೀಲ್, ಪ್ರಾಚಾರ್ಯರಾದ ಪ್ರೊ.ಬಿ.ಕೃಷ್ಣಪ್ಪ, ಪ್ರೊ.ಎಚ್.ಶ್ರೀನಿವಾಸ್, ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕ ಸಿ.ಮಂಜುನಾಥ್, ಟ್ರಸ್ಟಿಗಳಾದ ವಿನಾಯಕ, ಆನಂದ, ವಾಮನಮೂರ್ತಿ, ಪ್ರಶಾಂತ್, ಪ್ರೀತಿ ವಿನಾಯಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net