ವಿಜಯವಾಣಿ ಸುದ್ದಿಜಾಲ ಬಂಟ್ವಾಳ
ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 2023-24ನೇ ಸಾಲಿನಲ್ಲಿ 445.45 ಕೋಟಿ ವ್ಯವಹಾರ ನಡೆಸಿ, 1.68 ಕೋಟಿ ರೂ.ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ತಿಳಿಸಿದರು.
ಸಿದ್ದಕಟ್ಟೆಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿ, 2023-24ನೇ ಸಾಲಿನ ವರ್ಷಾಂತ್ಯಕ್ಕೆ 54.39 ಕೋಟಿ ರೂ.ಠೇವಣಿ ಹೊಂದಿದ್ದು, 55 ಕೋಟಿ ರೂ.ಸಾಲ ವಿತರಿಸಲಾಗಿದೆ, ಹೊರಬಾಕಿ ಸಾಲ 98.24 ಕೋಟಿ ರೂ.ಆಗಿದ್ದು, ಶೇ.98ರಷ್ಟು ವಸೂಲಾತಿಯಾಗಿರುತ್ತದೆ. ಕಳೆದ ಹಲವಾರು ವರ್ಷಗಳಿಂದ ಆಡಿಟ್ ವರದಿಯಲ್ಲಿ ಎ ಗ್ರೇಡ್‌ನ್ನು ನಿರಂತರವಾಗಿ ಕಾಯ್ದುಕೊಂಡು ಬರುತ್ತಿದೆ ಎಂದರು.
1771 ರೈತರು 2037 ಎಕರೆ ಜಮೀನಿಗೆ ಸಂಬಂಧಿಸಿದಂತೆ 52.74 ಲಕ್ಷ ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಗೆ ರೈತರಿಂದ ಪ್ರೀಮಿಯಂ ಪಾವತಿಸಲಾಗಿದೆ. ಕಳೆದ ವರ್ಷ ಸಂಘದ ವ್ಯಾಪ್ತಿಯ ಸದಸ್ಯರು ಸುಮಾರು 8 ರಿಂದ 10 ಕೋಟಿ ಬೆಳೆವಿಮೆ ಪರಿಹಾರ ಪಡೆದಿರುತ್ತಾರೆ. ಇದರಿಂದ ಸಂಘವು ಜಿಲ್ಲೆಯಲ್ಲಿ ಮುಂಚೂಣಿಯಲ್ಲಿರುವ ಬೆರಳೆಣಿಕೆಯ ಸಹಕಾರಿ ಸಂಘಗಳ ಪೈಕಿ ಒಂದಾಗಿದೆ ಎಂದರು.
2023-24 ನೇ ಸಾಲಿನ ಮಹಾಸಭೆ ಸೆ.21ರಂದು ಶನಿವಾರ ಬೆಳಗ್ಗೆ 10.30ಕ್ಕೆ ಸಂಘದ ಕೇಂದ್ರ ಕಚೇರಿಯ ಬೆಳ್ಳಿಪ್ಪಾಡಿ ಕೃಷ್ಣ ರೈ ರೈತ ಸಭಾಂಗಣದಲ್ಲಿ ಜರುಗಲಿದೆ ಎಂದು ತಿಳಿಸಿದರು.
ನಿರ್ದೇಶಕರಾದ ಸಂದೇಶ್ ಶೆಟ್ಟಿ ಪೊಡುಂಬ, ರಾಜೇಶ್ ಶೆಟ್ಟಿ ಕೊನೆರಬೆಟ್ಟು, ಉಮೇಶ್ ಗೌಡ, ದೇವರಾಜ್ ಸಾಲ್ಯಾನ್, ಹರೀಶ್ ಆಚಾರ್ಯ, ಮಂದಾರತಿ ಎಸ್.ಶೆಟ್ಟಿ, ವೃತಿಪರ ನಿರ್ದೇಶಕ ಮಾಧವ ಶೆಟ್ಟಿಗಾರ್, ಮುಖ್ಯಕಾರ್ಯನಿರ್ವಹಣಾಧಿಕಾರಿ ಆರತಿ ಶೆಟ್ಟಿ ಉಪಸ್ಥಿತರಿದ್ದರು.