

ಮೈಸೂರು: ರಾಜ್ಯ ಸರ್ಕಾರ ಬೌದ್ಧ ಸಮುದಾಯದ ಜತೆಯಿದ್ದು, ಸಮುದಾಯದ ಬೇಡಿಕೆಗಳಿಗೆ ಸ್ಪಂದಿಸಲಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ಹೇಳಿದರು.
ನಗರದ ಸರಸ್ವತಿಪುರಂನ ಮಹಾಬೋಧಿ ಮೈತ್ರಿ ಮಂಡಲವು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ನೀಡಲಾದ ಒಂದು ಕೋಟಿ ರೂ. ಅನುದಾನದಲ್ಲಿ ನಿರ್ಮಿಸಲಾದ ಸಮುದಾಯ ಭವನ ಉದ್ಘಾಟಿಸಿ ಮಾತನಾಡಿ, ಬೌದ್ಧ ಸಮುದಾಯ ಶಿಕ್ಷಣ ಕ್ಷೇತ್ರದಲ್ಲೂ ಉತ್ತಮ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ಶಿಕ್ಷಣಕ್ಕಾಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಯಾವುದೇ ರೀತಿಯ ನೆರವು ನೀಡಲು ಸಿದ್ದ ಎಂದು ಹೇಳಿದರು.
ಈ ಸಂದರ್ಭ ಮಹಾಬೋಧಿ ಮೈತ್ರಿಮಂಡಲದ ಸರಸ್ವತಿಪುರಂ, ಹುಣಸೂರು, ಬೈಲಕುಪ್ಪೆ, ತಿ.ತಿರಸೀಪುರ ಶಾಖೆಗಳ ಶಿಕ್ಷಣ ಸಂಸ್ಥೆ ಕಟ್ಟಡ ನಿರ್ಮಾಣ ಹಾಗೂ ಇತರೆ ಸೌಲಭ್ಯಕ್ಕೆ ನೀಡಲಾದ 1.62 ಕೋಟಿ ರೂ. ಅನುದಾನದ ಚೆಕ್‌ಅನ್ನು ಸಚಿವರು ಆನಂದ ಬಂತೇಜಿ ಅವರಿಗೆ ಹಸ್ತಾಂತರ ಮಾಡಿದರು.
ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕಾಗಿ ಅಗತ್ಯವಾದ ಲ್ಯಾಪ್‌ಟಾಪ್, ಡೆಸ್ಕ್ ಟಾಪ್ ಖರೀದಿಸಲು 2 ಲಕ್ಷ ರೂ. ನೆರವನ್ನು ವೈಯಕ್ತಿಕವಾಗಿ ನೀಡಿದರು.
ಎನ್‌ಸಿಸಿ ವಿದ್ಯಾರ್ಥಿಗಳು ಉನ್ನತ ವ್ಯಾಸಂಗ ಪಡೆಯಲು ಇಲಾಖೆಯಿಂದ ನೆರವು ಕೊಡಿಸಲಾಗುವುದು. ಸಾಧ್ಯವಾಗದಿದ್ದರೆ ವೈಯಕ್ತಿಕ ವಾಗಿ ನೀಡಲಾಗುವುದು ಎಂದು ತಿಳಿಸಿದರು. ಈ ಸಂದರ್ಭ ಗುರುಗಳಾದ ಆನಂದ ಬಂತೇಜಿ, ಇತ್ತೀಕಾ ಮಹಾಧೀರಾ, ಸಿದ್ದಾರ್ಥ್ ವಾಟ್ಸಾಯನ್ ಇದ್ದರು.