1.60 ಕೋಟಿ ವೆಚ್ಚದಲ್ಲಿ 32 ಕಿ.ಮೀ. ತಂತಿಬೇಲಿ : ಹಂದಿಗೊಂದಿ ಅರಣ್ಯ ರಕ್ಷಣೆ, ಒತ್ತುವರಿ ತಡೆಗೆ ಮುಂದಾದ ಅರಣ್ಯ ಇಲಾಖೆ, ಕಾಡುಪ್ರಾಣಿಗಳ ಉಪಟಳಕ್ಕೂ ಕಡಿವಾಣ

1
Published on

ವಿಭೂತಿಕೆರೆ ಶಿವಲಿಂಗಯ್ಯ ಕೈಲಾಂಚ

ಹಂದಿಗೊಂದಿ ಅರಣ್ಯ ಪ್ರದೇಶ ಒತ್ತುವರಿ ತಡೆಯಲು ಅರಣ್ಯದ ಸುತ್ತಲೂ ತಂತಿ ಬೇಲಿ ಅಳವಡಿಸುವ ಮೂಲಕ ಅರಣ್ಯ ಇಲಾಖೆ ವಿನೂತನ ಪ್ರಯೋಗಕ್ಕೆ ಕೈಹಾಕಿದ್ದು ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಕೈಲಾಂಚ ಹೋಬಳಿಯ ಹಂದಿಗೊಂದಿ ಅರಣ್ಯಪ್ರದೇಶ ಸುಮಾರು 10,900 ಹೆಕ್ಟೇರ್​ಗೂ ಹೆಚ್ಚಿದೆ. ಶ್ರೀಗಂಧ, ಬಿದಿರು ಸೇರಿ ಅಪರೂಪದ ಸಸ್ಯ ಸಂಪತ್ತಿನಿಂದ ಕೂಡಿದ್ದು, ಔಷಧೀಯ ಸಸ್ಯಗಳೂ ಹೇರಳವಾಗಿವೆ. ರಾಮನಗರದ ಸಮೀಪದ ಕನಕಪುರ ತಾಲೂಕಿನವರೆಗೂ ಅರಣ್ಯ ಪ್ರದೇಶ ಹರಡಿದೆ.

ಕರಡಿ, ಚಿರತೆ, ಜಿಂಕೆ, ಕಾಡುಹಂದಿ, ನರಿ, ಕಾಡುಕುರಿ, ಕಾಡುಕಿರುಬ, ಮೊಲ, ನವಿಲು ಸೇರಿ ಹಲವು ಪ್ರಾಣಿ&ಪಕ್ಷಿಗಳು ನೆಲೆಕಂಡಿವೆ. ವರ್ಷಕ್ಕೋ ಎರಡು ವರ್ಷಕ್ಕೋ ಬನ್ನೇರುಘಟ್ಟ, ಮಲೆ ಮಹದೇಶ್ವರ ಬೆಟ್ಟ ವನ್ಯಜಿವಿಧಾಮದಿಂದ ಬಂದು ಹೋಗುತ್ತಿದ್ದ ಆನೆಗಳನ್ನು ಕಳೆದ ವರ್ಷದಿಂದೀಚೆಗೆ ಪ್ರತಿ ದಿನ ಕಾಣಬಹುದಾಗಿದೆ. ಇಂತಹ ವಿಸ್ತಾರವಾದ ಅರಣ್ಯ ಹತ್ತಾರು ಗ್ರಾಮಗಳೊಂದಿಗೆ ಗಡಿ ಹಂಚಿಕೊಂಡಿದೆ. ಆನೆ, ಚಿರತೆ, ಕಾಡುಹಂದಿ, ಕರಡಿ, ಜಿಂಕೆ ಮತ್ತಿತರ ಕಾಡುಪ್ರಾಣಿಗಳು ನಾಡಿನತ್ತ ಹೋಗದಂತೆ ತಡೆಯಲು, ಕಾಡುಪ್ರಾಣಿ ಬೇಟೆಗಾರರು ಹಾಗೂ ಮರಗಳ್ಳರ ಹಾವಳಿ ತಪ್ಪಿಸಲು, ಅರಣ್ಯ ಪ್ರದೇಶ ಒತ್ತುವರಿ ತಡೆಯಲು, ಪ್ರಮುಖವಾಗಿ ಮರಳು, ಮಣ್ಣಿನ ದಂಧೆಗೆ ಕಡಿವಾಣ ಹಾಕಲು, ಸ್ವ ಬೀಜೋತ್ಪತ್ತಿ ಸಸ್ಯಗಳ ರಕ್ಷಣೆ, ವೃಕ್ಷ ವೃದ್ಧಿಗೆ, ಸುಲಭವಾಗಿ ಅರಣ್ಯ ಸಿಬ್ಬಂದಿ ಗಸ್ತು ನಡೆಸಲು ಹಂದಿಗೊಂದಿ ಅರಣ್ಯದ ಸುತ್ತ ಸುಮಾರು 1.60 ಕೋಟಿ ರೂ. ವೆಚ್ಚದಲ್ಲಿ 32 ಕಿ.ಮೀ. ಉದ್ದದ ತಂತಿಬೇಲಿ ಅಳವಡಿಸುವ ಮೂಲಕ ಅರಣ್ಯ ರಕ್ಷಣೆಗೆ ಇಲಾಖೆ ಮುಂದಾಗಿದೆ. ಮುಂದಿನ ದಿನಗಳಲ್ಲಿ ಚನ್ನಪಟ್ಟಣ, ಮಾಕಳಿ, ಮಾಗಡಿಯ ಒಂದು ಅರಣ್ಯ ಪ್ರದೇಶಕ್ಕೆ ಈ ಯೋಜನೆ ವಿಸ್ತಾರಗೊಳ್ಳಲಿದೆ.

ಹಣ್ಣಿನ ಗಿಡಗಳು: ಆಹಾರ ಅರಸಿ ನಾಡಿನತ್ತ ಮುಖಮಾಡುತ್ತಿದ್ದ ಪ್ರಾಣಿಗಳನ್ನು ಅರಣ್ಯ ದಾಟದಂತೆ ಮಾಡಿರುವ ಕ್ರಮದಿಂದ ಪ್ರಾಣಿಗಳಿಗೆ ಸುಲಭವಾಗಿ ಆಹಾರ ಸಿಗುವಂತೆ ಮಾಡುವ ಉದ್ದೇಶದಿಂದ ಹಲಸು, ನೇರಳೆ, ಸೀಬೆ, ಸೀತಾಫಲ ಸೇರಿ ಕಾಡುಪ್ರಾಣಿಗಳು ತಿನ್ನುವ ಹಣ್ಣಿನ ಗಿಡಗಳನ್ನು ಬೆಳೆಸುವತ್ತ ಅರಣ್ಯ ಇಲಾಖೆ ಚಿತ್ತ ಹರಿಸಿದೆ.

ಕೆರೆ ಅಭಿವೃದ್ಧಿ: ಕಾಡು ಪ್ರಾಣಿಗಳು ನೀರು ಅರಸಿ ನಾಡಿನ ಕಡೆ ಮುಖ ಮಾಡದಿರಲೆಂದು ಮತ್ತೊಂದು ಕೆಲಸಕ್ಕೆ ಕೈಹಾಕಿರುವ ಇಲಾಖೆ ಗ್ರಾಪಂಗಳ ಸಹಕಾರದಿಂದ ನರೇಗಾ ಯೋಜನೆ ಬಳಸಿಕೊಂಡು ಅರಣ್ಯದಲ್ಲಿರುವ ಕೆರೆ-&ಕುಂಟೆ- ಕಾಲುವೆಗಳ ಅಭಿವೃದ್ಧಿಗೆ ಮುಂದಾಗಿದೆ. ಜತೆಗೆ ಕೆರೆಯಲ್ಲಿನ ಹೂಳು ತೆಗೆದು ಅಭಿವೃದ್ಧಿಪಡಿಸುವುದು, ಅಲ್ಲಲ್ಲಿ ಹೊಸಕೆರೆ ನಿಮಾರ್ಣ, ಹಳ್ಳಗಳಿಗೆ ಚೆಕ್​ಡ್ಯಾಂ ನಿರ್ಮಾಣ, ನಾಲಾ ಅಭಿವೃದ್ಧಿಗೆ ಮುಂದಾಗಿದೆ.

ತಂತಿ ಬೇಲಿ ನಿಮಾರ್ಣದಿಂದ ಅರಣ್ಯಕ್ಕೆ ಸೂಕ್ತ ಭದ್ರತೆ ಒದಗುವ ಕಾರಣ ಬೀಜೋತ್ಪತ್ತಿ ಉಂಟಾಗಿ ಅರಣ್ಯ ಪ್ರದೇಶ ವಿಸ್ತಾರಕ್ಕೆ ಕಾರಣವಾಗುತ್ತದೆ. ಜತೆಗೆ ಅರಣ್ಯ ಪ್ರದೇಶಕ್ಕೆ ಬೇಟೆಗಾರರು, ಮರಗಳ್ಳರು ನುಸುಳದಂತೆ ಸಹಕಾರಿಯಾಗುವುದಲ್ಲದೆ ಅರಣ್ಯ ಸಿಬ್ಬಂದಿ ಕಾವಲಿಗೆ ಪರಿಣಾಮಕಾರಿಯಾಗಲಿದೆ. ದೇವರಾಜು, ಡಿಎಫ್​ಒ, ರಾಮನಗರ. ಅರಣ್ಯದ ಸುತ್ತಲು ತಂತಿಬೇಲಿ ನಿಮಾರ್ಣ ಮಾಡುವುದರಿಂದ ಮುಖ್ಯವಾಗಿ ಕಾಡುಹಂದಿಗಳು ಅರಣ್ಯಬಿಟ್ಟು ರೈತರ ಜಮೀನುಗಳಿಗೆ ಲಗ್ಗೆ ಇಡುವುದು ತಪ್ಪುತ್ತದೆ. ತಂತಿ ಬೇಲಿ ನಿಮಾರ್ಣದಿಂದ ಸುಲಭವಾಗಿ ಅರಣ್ಯಪ್ರದೇಶ ಸರಹದ್ದು ತಿಳಿಯಲಿದ್ದು ಒತ್ತುವರಿಗೆ ಅವಕಾಶವೇ ಇಲ್ಲದಂತೆ ಆಗುವುದಲ್ಲದೆ ಒತ್ತುವರಿದಾರರಿಂದ ಅರಣ್ಯ ಉಳಿಸಲು ಸಹಾಯಕವಾಗಿದೆ. ಎ. ಕಿರಣ್​ಕುಮಾರ್​, ವಲಯ ಅರಣ್ಯಾಧಿಕಾರಿ, ರಾಮನಗರ ವಲಯ ಹಂದಿಗೊಂದಿ ಅರಣ್ಯ ಪ್ರದೇಶ ವಿಸ್ತಾರತೆಯಲ್ಲಿ ದೊಡ್ಡದಿರುವ ಕಾರಣ ಅರಣ್ಯ ಇಲಾಖೆ ಸಿಬ್ಬಂದಿಗೆ ಕಾಡಿನ ರಕ್ಷಣೆಯೇ ಸವಾಲಾಗಿತ್ತು, ಜತೆಗೆ ಕಾಡುಹಂದಿ ಇತರ ಕಾಡು ಪ್ರಾಣಿಗಳ ಉಪಟಳ ಕೂಡ ಹೆಚ್ಚಿತ್ತು. ತಂತಿಬೇಲಿ ನಿಮಾರ್ಣ ಇವೆಲ್ಲಕ್ಕೂ ಕಡಿವಾಣವಾಗುವ ಕಾರಣ ಅರಣ್ಯ ಇಲಾಖೆ ಕಾರ್ಯ ಉತ್ತಮವಾಗಿದೆ. ರೈತರಿಗೂ ತಂತಿ ಬೇಲಿ ಯೋಜನೆ ಸಹಕಾರಿಯಾಗಿದೆ. ವಾಸು ಪುಟ್ಟಮಾಸ್ತಿಗೌಡ, ರೈತ ಮುಖಂಡ, ಮೂಡ್ಲಳ್ಳಿದೊಡ್ಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net