

ಹುಕ್ಕೇರಿ: ಪಟ್ಟಣ ಹೊರವಲಯದ ರಾಜನಕೋಡಿಯ ನಿವಾಸಿಗಳ ಬಹುದಿನದ ಬೇಡಿಕೆಯಾಗಿದ್ದ ರಸ್ತೆ ಕಾಮಗಾರಿಯನ್ನು ಶಾಸಕ ನಿಖಿಲ ಕತ್ತಿ ಮಂಜೂರಾತಿ ಮಾಡಿಸಿದ್ದಾರೆ. ಅದಕ್ಕಾಗಿ ಈ ಜನರ ಪರವಾಗಿ ಅಭಿನಂದಿಸುತ್ತೇನೆ ಎಂದು ಮಾಜಿ ಸಂಸದ ರಮೇಶ ಕತ್ತಿ ಹೇಳಿದರು.
ಬೆಲ್ಲದ ಬಾಗೇವಾಡಿ-ಹುಕ್ಕೇರಿ ರಸ್ತೆಯಿಂದ 1.40 ಕೋಟಿ ರೂ. ವೆಚ್ಚದ ರಾಜನಕೋಡಿ ಕೆರೆವರೆಗೆ ರಸ್ತೆ ಬಾಕ್ಸ್ ಕಲ್ವರ್ಟ್ ನಿರ್ಮಾಣ ಮತ್ತು ಸುಧಾರಣೆ ಹಾಗೂ ಡಾಂಬರೀಕರಣ ಕಾಮಗಾರಿಗೆ ಶುಕ್ರವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ರಸ್ತೆ ಸುಧಾರಣೆ ಮುನ್ನ ಅಕ್ಕಪಕ್ಕದ ಜಮೀನುಗಳ ರೈತರು ನೀರಾವರಿಗಾಗಿ ಪೈಪ್ ಅಳವಡಿಸಿಕೊಳ್ಳಬೇಕು. ರಸ್ತೆ ಕಾಮಗಾರಿ ಪೂರ್ಣಗೊಂಡ ಬಳಿಕ ಯಾವುದೇ ಕಾರಣಕ್ಕೂ ರಸ್ತೆ ಅಗೆತ ಮಾಡಬಾರದು. ಗುಣಮಟ್ಟಕ್ಕೆ ಆದ್ಯತೆ ನೀಡುವಂತೆ ಗುತ್ತಿಗೆದಾರರಿಗೆ ಸೂಚಿಸಿದರು.
ಹುಲ್ಲೋಳಿ ಹಟ್ಟಿ ಗ್ರಾಮದ ಪರಿಶಿಷ್ಟ ಜಾತಿ ಕಾಲನಿಯಲ್ಲಿ 50 ಲಕ್ಷ ರೂ. ವೆಚ್ಚದ ಚರಂಡಿ ನಿರ್ಮಾಣ, ಬಸ್ತವಾಡ ಗ್ರಾಮದಲ್ಲಿ ಹುಕ್ಕೇರಿ ಸಂಪರ್ಕ ರಸ್ತೆ 1.5 ಕೋಟಿ ರೂ. ವೆಚ್ಚದ ರಸ್ತೆ ಸುಧಾರಣೆ ಮತ್ತು ಡಾಂಬರೀಕರಣ, ಗೌಡವಾಡ ಗ್ರಾಮದಲ್ಲಿ 5 ಲಕ್ಷ ರೂ. ವೆಚ್ಚದ ಸಿಸಿ ರಸ್ತೆ ನಿರ್ಮಾಣ, ಬಡಕುಂದ್ರಿ ಗ್ರಾಮದಲ್ಲಿ 40 ಲಕ್ಷ ರೂ. ವೆಚ್ಚದ ಸಿಸಿ ರಸ್ತೆ ಸೇರಿ ಒಟ್ಟು 3.40 ಕೋಟಿ ರೂ. ವೆಚ್ಚದ ಕಾಮಗಾರಿಗೆ ಚಾಲನೆ ನೀಡಿದರು. ರಮೇಶ ಕತ್ತಿ ಅವರನ್ನು ಗ್ರಾಮಸ್ಥರು ಸನ್ಮಾನಿಸಿದರು.
ಮುಖಂಡರಾದ ಸತ್ತೆಪ್ಪ ನಾಯಿಕ, ಕೆಂಪಣ್ಣ ವಾಸೇದಾರ, ವೀರೇಶ ಗಜಬರ, ಸೋಮಶೇಖರ ಪಟ್ಟಣಶೆಟ್ಟಿ, ಅಣ್ಣಪ್ಪ ಮುದಕನ್ನವರ, ಬಸ್ತವಾಡ ಗ್ರಾಪಂ ಅಧ್ಯಕ್ಷ ದಾವಲಸಾಬ ಬಾಡಕರ, ಅಶೋಕ ಪಾಟೀಲ, ಆನಂದ ಲಕ್ಕುಂಡಿ, ನೇಮಣ್ಣ ಮಗದುಮ್ಮ, ದಯಾನಂದ ವಂಟಮೂರಿ, ಕಾಡಪ್ಪ ಮಗದುಮ್ಮ, ಭೂವನೇಶ ಪಾಟೀಲ ಇತರರು ಇದ್ದರು.