ಯಂತ್ರೋಪಕರಣಗಳ ಕಳ್ಳತನ

mkg1a
Published on

ಜಗಳೂರು: ಬೋರ್‌ವೆಲ್ ಗೋದಾಮಿನಲ್ಲಿ ಸಂಗ್ರಹಿಸಿದ್ದ ಡ್ರಿಲ್ಲಿಂಗ್ ಬಿಡ್, ವರ್ಕಿಂಗ್ ಬಿಡ್ ಸೇರಿದಂತೆ ಯಂತ್ರೋಪಕರಣಗಳನ್ನು ಕಳ್ಳತನ ಮಾಡಿರುವ ಘಟನೆ ಜಗಳೂರಿನ ಹೊರಕೆರೆಯಲ್ಲಿ ಗುರುವಾರ ರಾತ್ರಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಪಟ್ಟಣದ ಹೊರವಲಯದ ಪಪಂ ಸದಸ್ಯ ಎಸ್. ಮಂಜುನಾಥ್ ಎಂಬುವವರಿಗೆ ಸೇರಿದ ಬೋರ್‌ವೆಲ್ ಗೋದಾಮಿನಲ್ಲಿ ಬೋರ್‌ವೆಲ್‌ನ ಬಿಡಿ ಭಾಗಗಳಾದ ಪೈಪ್, ಡ್ರಿಲ್ಲಿಂಗ್ ಬಿಡ್ ಸೇರಿದಂತೆ 39ಕ್ಕೂ ಹೆಚ್ಚು ಬೋರ್‌ವೆಲ್ ಕಬ್ಬಿಣದ ಬಿಡ್‌ಗಳನ್ನು ಇರಿಸಿದ್ದರು.

ಜು. 27ರಂದು ಮಧ್ಯರಾತ್ರಿ ನುಗ್ಗಿದ ಕಳ್ಳರು ಕಬ್ಬಿಣದ ಬೃಹತ್ ಬಿಡ್‌ಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. ಕಳ್ಳರ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಂದಾಜು 1.35 ಲಕ್ಷ ರೂ. ಮೌಲ್ಯದ ವಸ್ತು ಕಳುವಾಗಿದೆ.

ಜು. 28ರಂದು ಬೆಳಗ್ಗೆ ಗೋದಾಮು ತೆರೆದಾಗ ಪ್ರಕರಣ ಬಯಲಿಗೆ ಬಂದಿದ್ದು ಈ ಕುರಿತು ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಕಳೆದ ಎರಡು ವರ್ಷಗಳಲ್ಲಿ ಇದೇ ಗೋದಾಮಿನಲ್ಲಿ ನಡೆದಿರುವ 3ನೇ ಕಳ್ಳತನ ಪ್ರಕರಣ ಇದಾಗಿದ್ದು, ತಕ್ಷಣ ಪತ್ತೆ ಮಾಡುವಂತೆ ಗೋದಾಮಿನ ಮಾಲೀಕ ಎಸ್. ಮಂಜುನಾಥ್ ಪೊಲೀಸರಿಗೆ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net