

ಯಳಂದೂರು: ಯಳಂದೂರು ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ(ಟಿಎಪಿಸಿಎಂಎಸ್)ದಲ್ಲಿ ಕಳೆದ ಅವಧಿಯಲ್ಲಿ 1,30,30,320 ರೂ. ಅವ್ಯವಹಾರ ನಡೆದಿದೆ ಎಂದು ಸಂಘದ ಅಧ್ಯಕ್ಷ ಹಾಗೂ ಮಾಜಿ ಶಾಸಕ ಎಸ್. ಬಾಲರಾಜು ಹೇಳಿದರು.
ಪಟ್ಟಣದ ಟಿಎಪಿಸಿಎಂಎಸ್ ಕಚೇರಿ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಸಂಘದ ಸಭೆಯಲ್ಲಿ 6 ನಿರ್ದೇಶಕರು ಮಾತ್ರ ಹಾಜರಾಗಿದ್ದರಿಂದ ಕೋರಂ ಇಲ್ಲದ ಕಾರಣ ಸಭೆ ನಡೆಯಲಿಲ್ಲ. ನಂತರ ಅವರು ಸುದ್ದಿಗಾರರ ಜತೆ ಮಾತನಾಡಿದರು.
ಕಳೆದ ಅವಧಿಯಲ್ಲಿ ಸಂಘದ ಪ್ರಭಾರ ಕಾರ್ಯದರ್ಶಿಯಾಗಿದ್ದ ಮಲಾರಪಾಳ್ಯ ಮಹೇಶ್ 1,25,30,320 ರೂ. ಹಾಗೂ ಈ ಅವಧಿಯಲ್ಲಿ ಅಧ್ಯಕ್ಷರಾಗಿದ್ದ ವಡಗೆರೆ ದಾಸ್ ಅವರು 5 ಲಕ್ಷ ರೂ. ಅವ್ಯವಹಾರ ಮಾಡಿದ್ದಾರೆ ಎಂಬ ಆರೋಪವಿದೆ. ಈ ಬಗ್ಗೆ 2024ರ ಜುಲೈ 24 ರಂದು ಸಹಕಾರ ಇಲಾಖೆ ಉಪನಿಬಂಧಕರಿಗೆ ದೂರು ನೀಡಲಾಗಿದೆ. ಇದಕ್ಕೆ ಸಂಬಂಧಪಟ್ಟಂತೆ ಯಳಂದೂರು ಪೊಲೀಸ್ ಠಾಣೆಯಲ್ಲೂ ಇದೇ ಮಾರ್ಚ್ 30ರಂದು ಮೊಕದ್ದಮೆ ಸಂಖ್ಯೆ 62/2025 ರಂತೆ ವಂಚನೆ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ತಿಳಿಸಿದರು.
ಸಂಘದ ವತಿಯಿಂದ ವಿವಿಧ ಸಂಸ್ಥೆಗಳಿಗೆ 1,35,07,761 ರೂ.ಗಳನ್ನು ಪಾವತಿಸಬೇಕಾಗಿದೆ. ಇಲ್ಲಿ ಒಟ್ಟು 12 ಜನರು ಸದಸ್ಯರಿದ್ದಾರೆ. ಇವತ್ತೂ ಸೇರಿ ನಾಲ್ಕು ಬಾರಿ ನಾನು ಸಭೆ ಕರೆದಿದ್ದೇನೆ. ಆದರೆ ಕೆಲ ಸದಸ್ಯರು ಬೇಕೆಂತಲೇ ಗೈರಾಗುತ್ತಿದ್ದಾರೆ. ಸಭೆಯ ಸಾಮಾನ್ಯ ಸಭೆಯನ್ನು ಕರೆದು ಹೊಸ ನಿರ್ಣಯ ಮಾಡಲು ಸಾಧ್ಯವಾಗುತ್ತಿಲ್ಲ. 6 ಜನರು ಮಾತ್ರ ಸಭೆಗೆ ಹಾಜರಾಗುತ್ತಿರುವುದರಿಂದ ಕೋರಂ ಕೊರತೆಯಾಗಿದೆ ಎಂದು ಹೇಳಿದರು.
ಈ ಸಂಘ 1949ರಲ್ಲಿ ಆರಂಭವಾಗಿದ್ದು, ಜಿಲ್ಲೆಯ ಅತೀ ಹಳೆಯ ಸಹಕಾರ ಸಂಘಗಳಲ್ಲಿ ಒಂದಾಗಿದೆ. ಇದು ಲಾಭದಲ್ಲಿದ್ದ ಒಂದು ಸಹಕಾರ ಸಂಸ್ಥೆಯಾಗಿತ್ತು. ನಾನು 20 ವರ್ಷಗಳ ಹಿಂದೆ ಇಲ್ಲಿಗೆ ನಿರ್ದೇಶಕನಾಗಿ ಆಯ್ಕೆಯಾದ ಬಳಿಕ ನನಗೆ ರಾಜಕೀಯ ಹುಟ್ಟು ಕೊಟ್ಟ ಸಂಸ್ಥೆ ಇದಾಗಿದೆ. ಹಾಗಾಗಿ ಇದರ ಬಗ್ಗೆ ನನಗೆ ಅಭಿಮಾನವಿದ್ದ ಕಾರಣ ಇದನ್ನು ಉಳಿಸಿಕೊಳ್ಳುವ ಉದ್ದೇಶದಿಂದ ನಾನು ಮತ್ತೆ ನಿರ್ದೇಶಕನಾಗಿ, ಅಧ್ಯಕ್ಷನಾಗಿ ಆಯ್ಕೆಯಾದೆ. ಆದರೆ ಇಲ್ಲಿರುವ ಕೆಲ ನಿರ್ದೇಶಕರು ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಸಹಕಾರ ಕ್ಷೇತ್ರದಲ್ಲಿ ಸೇವೆಯೇ ಪ್ರಮುಖ. ಇಲ್ಲಿಗೆ ಬರುವರು ರಾಜಕೀಯವನ್ನು ಬಿಟ್ಟು ಬರಬೇಕು. ರೈತರ, ಬಡವರ ಅಭಿವೃದ್ಧಿಗೆ ಇರುವ ಈ ಸಂಸ್ಥೆಯನ್ನು ಬೆಳೆಸುವ ಪ್ರಾಮಾಣಿಕ ಉದ್ದೇಶ ಇರಬೇಕು. ಸಮಸ್ಯೆ ಇದ್ದಲ್ಲಿ ಸಭೆಯಲ್ಲಿ ಭಾಗವಹಿಸಿ ಚರ್ಚೆಗೆ ಬರಬೇಕು, ಇದು ಬಿಟ್ಟು ಸಭೆಗೆ ಬಾರದಿರುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ಈ ಹಿಂದೆ ನಾನು ಶಾಸಕನಾಗಿದ್ದ ಕಾಲದಲ್ಲಿ ಇದನ್ನು ರದ್ದುಗೊಳಿಸಲು ಶಿಫಾರಸು ಮಾಡಲಾಗಿತ್ತು. ಆದರೆ ನಾನು ಇದನ್ನು ಉಳಿಸಿಕೊಳ್ಳಲು ಹೋರಾಟ ಮಾಡಿದ್ದೇನೆ. ಈಗಲೂ ಇದರ ಉಳಿವಿಗೆ ಎಲ್ಲರೂ ಸಹಕಾರ ನೀಡಬೇಕು. ಮತ್ತೆ ಇದನ್ನು ಲಾಭದತ್ತ ಕೊಂಡೊಯ್ಯಲು ಶ್ರಮಿಸಬೇಕು ಎಂದರು.
ನಿರ್ದೇಶಕರಾದ ವೈ.ಎಸ್. ನಂಜಶೆಟ್ಟಿ, ಕಂದಹಳ್ಳಿ ಮಹೇಶ್‌ಕುಮಾರ್, ಬೂದಿತಿಟ್ಟು ನಾಗರಾಜು, ರಾಜಮ್ಮ, ಅಂಬಿಕಾ ಪ್ರಭಾರ ಕಾರ್ಯದರ್ಶಿ ರಮೇಶ್, ಪುಟ್ಟಮಲ್ಲಪ್ಪ ಇದ್ದರು.