

ಹುಬ್ಬಳ್ಳಿ: ಕ್ರಿಪ್ಟೊ ಕರೆನ್ಸಿಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಗಳಿಸಬಹುದೆಂದು ನಂಬಿಸಿದ ವಂಚಕರು, ನಗರದ ವ್ಯಕ್ತಿಯೊಬ್ಬರಿಂದ ಬರೋಬ್ಬರಿ 1.30 ಕೋಟಿ ರೂ. ಆನ್‌ಲೈನ್ ಮೂಲಕ ವರ್ಗಾಯಿಸಿಕೊಂಡು ವಂಚಿಸಿದ್ದಾರೆ.
ನಗರದ ಅಬ್ರಾಹಂ ಜೆ. ಎಂಬುವವರಿಗೆ ದಿಯಾ ಖಾನ್ ಎಂಬುವರು ವಂಚಿಸಿದ್ದಾರೆ. ಫೇಸ್‌ಬುಕ್ ನೋಡುತ್ತಿದ್ದಾಗ ದಿಯಾ ಖಾನ್ ಎಂಬುವವರ ಪರಿಚಯವಾಗಿ ಮೆಸೆಂಜರ್ ಮೂಲಕ ಚಾಟ್ ಮಾಡಿದ್ದಾರೆ. ನಂತರ ವಾಟ್ಸ್‌ಆ್ಯಪ್ ನಂಬರ್ ಪಡೆದು ಕ್ರಿಪ್ಟೊ ಕರೆನ್ಸಿಯಲ್ಲಿ ಹೂಡಿಕೆ ಮಾಡಿದರೆ ನಿಮಗೆ ಶೇ. 10ರಷ್ಟು ಲಾಭ ಬರುತ್ತದೆ. ನಂತರ ಹೆಚ್ಚು ಹೂಡಿಕೆ ಮಾಡಿದರೆ ಶೇ. 30 ರಿಂದ 50ರಷ್ಟು ಲಾಭ ಬರುತ್ತದೆಂದು ಹೇಳಿ ವಾಟ್ಸ್‌ಆ್ಯಪ್‌ಗೆ ಲಿಂಕ್ ಕಳುಹಿಸಿದ್ದಾರೆ.
ಅದನ್ನು ಕ್ಲಿಕ್ ಮಾಡಿ ರಿಜಿಸ್ಟರ್ ಮಾಡಿಕೊಂಡಿದ್ದು, ನಂತರ ‘ಐ ವಾಂಟ್ ಟು ಬುಯ್ಯಿ ಯುಎಸ್‌ಡಿಟಿ’ ಅಂತಾ ಕಳುಹಿಸಿದ್ದು, ಅದಕ್ಕೆ ಇಂಡಿಯನ್‌ರುಪಿಯಲ್ಲಿ 1 ಲಕ್ಷ ರೂ. ಎಂದು ಹೇಳಿದ್ದಾರೆ. ನಂತರ ಯುಎಸ್‌ಡಿಟಿ 110:1 ಎಂದು ಕಳುಹಿಸಿದ್ದಾರೆ. ಮೊದಲು ವೆಬ್‌ಸೈಟ್‌ನಲ್ಲಿ ಲಾಭ ತೋರಿಸಿ ಹಂತ ಹಂತವಾಗಿ 1,30,50,000 ರೂ. ವರ್ಗಾಯಿಸಿಕೊಂಡು ಮೋಸ ಮಾಡಿದ್ದಾರೆ. ಸಿಇಎನ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.