

ಮಂಡ್ಯ: ಜಿಲ್ಲೆಯಲ್ಲಿ ಡಿಸೆಂಬರ್‌ನಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಚಾರಕ್ಕೆ 1.30 ಕೋಟಿ ರೂ ತಾತ್ಕಾಲಿಕ ಬಜೆಟ್ ಮಂಡನೆ ಮಾಡಲಾಗಿದೆ. ಮುಖ್ಯವಾಗಿ ಪ್ರಚಾರದ ವೆಚ್ಚವು ಪಾರದರ್ಶಕವಾಗಿರಲಿ ಎಂದು ಮೇಲುಕೋಟೆ ಶಾಸಕರೂ ಆದ ಪ್ರಚಾರ ಸಮಿತಿ ಅಧ್ಯಕ್ಷ ದರ್ಶನ್ ಪುಟ್ಟಣ್ಣಯ್ಯ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರಚಾರ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಉಪ ಸಮಿತಿಗಳು ಪ್ರಚಾರಕ್ಕೆ ಸಂಬಂಧಿಸಿದಂತೆ ಸಭೆ ಸೇರುವ ಮೂಲಕ ಕಾರ್ಯಭಾರವನ್ನು ನಿರ್ವಹಿಸಬೇಕು. ಬಸ್‌ಗಳ ಮೇಲೆ ಪ್ರಚಾರದ ಫೋಸ್ಟರ್‌ಗಳಲ್ಲಿ ಮುಖ್ಯವಾಗಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುವ ದಿನಾಂಕ, ಸ್ಥಳವನ್ನು ಬರೆದಿರಬೇಕು. ಜತೆಗೆ ಹಾಸನಾಂಬ ಜಾತ್ರೆಯಲ್ಲಿಯೂ ಕೂಡ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಚಾರವನ್ನು ನಡೆಸಬೇಕು ಎಂದರು.
ಉಪ ಸಮಿತಿಯವರು ಈಗಾಗಲೇ ಪ್ರತ್ಯೇಕವಾಗಿ ಸಭೆ ನಡೆಸಿ ಆಯಾಯ ಸಮಿತಿಯಲ್ಲಿ ಪ್ರಚಾರಕ್ಕೆ ಸಂಬಂಧಪಟ್ಟಂತೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಇಲ್ಲಿಯವರೆಗೆ ನಡೆದಿರುವ ರೂಪುರೇಷೆಯ ಕ್ರಿಯಾಯೋಜನೆ ಹಾಗೂ ಬಜೆಟ್ ವಿವರ ತಿಳಿಸಲಾಗಿದೆ. ಪ್ರಚಾರ ಹಿನ್ನೆಲೆಯಲ್ಲಿ ಮನೆಗಳ ಮೇಲೆ, ಆಟೋ, ಕಾರ್ ಸ್ಟಿಕ್ಕರ್, ಗೋಡೆ ಬರಹ, ಸರ್ಕಾರಿ ಹೋರ್ಡಿಂಗ್ಸ್‌ಗಳಲ್ಲಿ ಪ್ರಮುಖ ವೃತ್ತಗಳಲ್ಲಿ ರಿಂಗ್ಸ್ ಹಾಗೂ ಇತರೆ ಫ್ಲೆಕ್ಸ್ ಅಳವಡಿಕೆ ಜತೆಗೆ ಡಿಜಿಟಲ್ ಹಾಗೂ ಸಾಮಾಜಿಕ ಜಾಲತಾಣ, ಮುದ್ರಣ ಮಾಧ್ಯಮಗಳಲ್ಲಿ ಹೆಚ್ಚು ಪ್ರಚಾರ ಮಾಡುವ ಬಗ್ಗೆ ಗಮನಹರಿಸಬೇಕು ಎಂದರು.
ಜಿಲ್ಲೆಯ ಜನರು ಸಮ್ಮೇಳನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಪರಿಣಾಮಕಾರಿ ಪ್ರಚಾರದ ಅವಶ್ಯಕವಿದೆ. ಸುತ್ತಮುತ್ತಲಿನ ಹಳ್ಳಿ, ನಗರ ಪ್ರದೇಶದ ಜನರು ಸಮ್ಮೇಳನದಲ್ಲಿ ಭಾಗವಹಿಸುವಂತೆ ಮಾಡುವುದು ಪ್ರಚಾರ ಸಮಿತಿಯ ಜವಾಬ್ದಾರಿ. ಎಲ್ಲರೂ ವ್ಯವಸ್ಥಿತ ಹಾಗೂ ಕ್ರಿಯಾಶೀಲತೆಯಿಂದ ಕಾರ್ಯ ನಿರ್ವಹಿಸೋಣ. ಸಾಮಾಜಿಕ ಜಾಲತಾಣದಲ್ಲಿ ಸಮ್ಮೇಳನದ ಪ್ರಚಾರ ಮಾಡಲು 15 ಲಕ್ಷ ರೂ ನಿಗದಿಪಡಿಸಲಾಗಿದೆ. ಇರುವ ವೆಚ್ಚದಲ್ಲಿಯೇ ಬಹಳ ಚುರುಕಾಗಿ ಪ್ರಚಾರ ನಡೆಯಬೇಕು ಎಂದು ತಿಳಿಸಿದರು.
ಸಮ್ಮೇಳನದ ಸಮನ್ವಯ ಸಮಿತಿ ಅಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ ಮಾತನಾಡಿ, ಸಮ್ಮೇಳನಕ್ಕೆ ಸಂಬಂಧಿಸಿದಂತೆ ಈಗಾಗಲೇ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಪ್ರಚಾರ ಸಮಿತಿಯ ಖರ್ಚು ಹಾಗೂ ವೆಚ್ಚವನ್ನು ಹೇಗೆ ನಿಭಾಯಿಸಬೇಕು ಎಂದು ತಿಳಿಸಲಾಗಿದೆ. ಅದರಂತೆಯೇ ಎಲ್ಲರೂ ಲಭ್ಯವಿರುವ ಅನುದಾನದಲ್ಲಿ ಪರಿಣಾಮಕಾರಿ ಪ್ರಚಾರವನ್ನು ಕೈಗೊಳ್ಳಬೇಕು. ಇನ್ನೆರಡು ದಿನಗಳಲ್ಲಿ ಮೊದಲ ಕಂತಿನ ಹಣ ಬಿಡುಗಡೆಯಾಗುತ್ತದೆ ಎಂದರು.
ಬೈಸಿಕಲ್ ಜಾಥಾ, ಪ್ರತಿ ಬಸ್ ನಿಲ್ದಾಣಗಳಲ್ಲಿ ಫ್ಲೆಕ್ಸ್ ಅಳವಡಿಕೆ, ಆಟೋ ಚಾಲಕರಿಗೆ ಕನ್ನಡದ ಬಾವುಟ ಹಾಗೂ ಸ್ಟಿಕ್ಕರ್ಸ್ ನೀಡಿ ಆ ಮೂಲಕ ನವೆಂಬರ್‌ನಿಂದ ಡಿಸೆಂಬರ್‌ವರೆಗೂ ಪ್ರಚಾರ ನಡೆಸಬಹುದು. ಲಾರಿ, ಬಸ್ ಹಾಗೂ ಇತರೆ ವಾಹನಗಳ ಮಾಲೀಕರ/ಚಾಲಕರ ಸಂಘದವರಲ್ಲಿ ಮನವಿ ಮಾಡಿ, ತಮ್ಮ ವಾಹನಗಳಲ್ಲಿ ಸಮ್ಮೇಳನದ ಭಿತ್ತಿಪತ್ರ ಮತ್ತು ಸ್ಟಿಕ್ಕರ್ ಅಂಟಿಸಿ ಪ್ರಚಾರ ಮಾಡುವುದರ ಜತೆಗೆ ಎಲ್ಲರೂ ಸಹಕರಿಸುವಂತೆ ಮನವಿ ಮಾಡಬೇಕಿದೆ ಎಂದರು.
ಸಭೆಯಲ್ಲಿ ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ರಾಘವೇಂದ್ರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕಿ ಎಸ್.ಎಚ್.ನಿರ್ಮಲಾ, ಜಿಲ್ಲಾ ಕಸಾಪ ಪದಾಧಿಕಾರಿಗಳಾದ ಹರ್ಷ ಪಣ್ಣೆದೊಡ್ಡಿ, ಹೊಳಲು ಶ್ರೀಧರ್, ಜಿ.ಧನಂಜಯ ದರಸಗುಪ್ಪೆ, ಎಲ್.ಕೃಷ್ಣ, ಚಂದ್ರಲಿಂಗು, ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಪಿ.ಪ್ರಕಾಶ್, ಸಮಿತಿಯ ಸದಸ್ಯರಾದ ಸಬ್ಬನಹಳ್ಳಿ ಶಶಿಧರ, ವಿನಯ್‌ಕುಮಾರ್, ಮಂಚಶೆಟ್ಟಿ, ಚಿಕ್ಕನಾಗೇಗೌಡ ಇತರರಿದ್ದರು.