

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:
ಧಾರವಾಡದ ಕೋಟೂರ ಗ್ರಾಮದಲ್ಲಿನ ಇನ್ಸ್ಟಾಕಾರ್ಟ್ ಸರ್ವಿಸಸ್ ಪ್ರೖೆವೇಟ್ ಲಿಮಿಟೆಡ್ನ ಎರಡು ಗೋದಾಮಿನ ಮೇಲೆ ಶುಕ್ರವಾರ ದಾಳಿ ಕಾರ್ಯಾಚರಣೆ ನಡೆಸಿದ ಭಾರತೀಯ ಮಾನಕ ಸಂಸ್ಥೆ (ಬಿಐಎಸ್)ಯ ಹುಬ್ಬಳ್ಳಿ ಶಾಖೆಯ ಅಧಿಕಾರಿಗಳು ಐಎಸ್ಐ ಗುರುತು (ಮಾರ್ಕ್) ಇಲ್ಲದ 1.3 ಕೋಟಿ ರೂ. ಮೌಲ್ಯದ ಉತ್ಪನ್ನಗಳನ್ನು ವಶಪಡಿಸಿಕೊಂಡಿದ್ದಾರೆ.
ಏರ್ ಕಂಡಿಷನರ್ಸ್, ಮಿಕ್ಸರ್, ಗ್ರೖೆಂಡರ್, ಸ್ಟೋರೇಜ್ ವಾಟರ್ ಹೀಟರ್ಸ್, ಹೊಲಿಗೆ ಯಂತ್ರ, ಪಾದರಕ್ಷೆಗಳು ಸೇರಿ 427 ಉತ್ಪನ್ನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಗೋದಾಮಿನಲ್ಲಿ ಪ್ರಮಾಣೀಕರಿಸದ ಉತ್ಪನ್ನಗಳನ್ನು ಸಂಗ್ರಹಿಸಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ಕಾರ್ಯಾಚರಣೆ ನಡೆಸಲಾಗಿತ್ತು. ಕಾರ್ಯಾಚರಣೆ ವೇಳೆ ಐಎಸ್ಐ ಗುರುತು ಇಲ್ಲದ ಉತ್ಪನ್ನಗಳನ್ನು ಸಂಗ್ರಹಿಸಿರುವುದು ಹಾಗೂ ಮಾರಾಟಕ್ಕೆ ನೀಡುತ್ತಿರುವುದು ಕಂಡು ಬಂದಿದೆ. ಅಲ್ಲದೇ ವಿವಿಧ ಗುಣಮಟ್ಟ ನಿಯಂತ್ರಣ ಆದೇಶಗಳನ್ನು ಉಲ್ಲಂಘಿಸಲಾಗಿದೆ ಎಂದು ಬಿಐಎಸ್ ಹುಬ್ಬಳ್ಳಿ ಶಾಖೆ ಉಪ ನಿರ್ದೇಶಕ ಎಂ. ಪ್ರದೀಪ ಕುಮಾರ್ ತಿಳಿಸಿದ್ದಾರೆ.
ಸಹಾಯಕ ನಿರ್ದೇಶಕ ಅಶುತೋಷ್ ಅಗರ್ವಾಲ್ ನೇತೃತ್ವದಲ್ಲಿ ಅಧಿಕಾರಿಗಳ ತಂಡವು ಕಾರ್ಯಾಚರಣೆ ನಡೆಸಿದೆ.