

ಸೊರಬ: ಸಹಕಾರ ಸಂಘಗಳ ಬೆಳವಣಿಗೆಯಲ್ಲಿ ಷೇರುದಾರರು ಮತ್ತು ಸದಸ್ಯರ ಪಾತ್ರ ಮಹತ್ವದ್ದಾಗಿದ್ದು ಶ್ರೀ ರಂಗನಾಥ ವಿವಿಧೋದ್ದೇಶ ಸಹಕಾರ ಸಂಘ ಶತಮಾನ ಪೂರೈಸಿ ಉತ್ತಮ ಸೇವೆ ನೀಡುತ್ತಿದೆ ಎಂದು ಸಂಘದ ಅಧ್ಯಕ್ಷ ಬಂದಗಿ ಬಸವರಾಜ ಶೇಟ್ ಹೇಳಿದರು.
ಪಟ್ಟಣದಲ್ಲಿ ಶನಿವಾರ ಏರ್ಪಡಿಸಿದ್ದ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘ ನಿಯಂತ್ರಿತ ಮತ್ತು ಅನಿಯಂತ್ರಿತ ಆಹಾರ ಧಾನ್ಯಗಳನ್ನು ಮತ್ತು ಇತರ ನಿತ್ಯೋಪಯೋಗಿ ವಸ್ತುಗಳ ಮಾರಾಟದಿಂದ 3.25 ಲಕ್ಷ ರೂ. ಲಾಭ ಗಳಿಸಿದೆ. ಸಂಘಕ್ಕೆ ವಿನಿಯೋಗಗಳು ಮತ್ತು ಸಾಲಗಳ ಮೇಲಿನ ಬಡ್ಡಿಯಿಂದ ಮತ್ತು ಇತರ ಮೂಲಗಳಿಂದ 5.96 ಲಕ್ಷ ರೂ. ಜಮಾ ಆಗಿದೆ. ಸಿಬ್ಬಂದಿ ವೆಚ್ಚ ಮತ್ತು ಆಡಳಿತಾತ್ಮಕ ವೆಚ್ಚಗಳನ್ನು ಹೋಗಲಾಡಿಸಿ 1.29 ಲಕ್ಷ ರೂ. ನಿವ್ವಳ ಲಾಭ ಗಳಿಕೆ ಆಗಿದೆ. ಜತೆಗೆ ನೂತನ ವಾಣಿಜ್ಯ ಕಟ್ಟಡದಿಂದ ಸಂಘಕ್ಕೆ ಬಾಡಿಗೆ ರೂಪದಲ್ಲಿ ಪ್ರತಿ ತಿಂಗಳು 45 ಸಾವಿರ ರೂ. ಜಮಾ ಆಗುತ್ತಿದೆ. ಸಂಘದಲ್ಲಿ 345 ಪೂರ್ಣ ಷೇರುದಾರರು ಹಾಗೂ 70 ಅಪೂರ್ಣ ಷೇರುದಾರರಿದ್ದಾರೆ ಎಂದು ಮಾಹಿತಿ ನೀಡಿದರು.
ರಾಷ್ಟ್ರ ಪ್ರಶಸ್ತಿ ಪುರಸ್ಕೃತ, ಹಿರಿಯ ವೈದ್ಯ ಡಾ. ಎಂ.ಕೆ. ಭಟ್, ಟಿಎಚ್‌ಒ ಡಾ. ಪ್ರಭು ಕೆ.ಸಾಹುಕಾರ್, ಆಯುಷ್ ವೈದ್ಯಾಧಿಕಾರಿ ಡಾ. ಎಂ.ಕೆ. ಮಹೇಶ್ ಅವರನ್ನು ಸನ್ಮಾನಿಸಲಾಯಿತು. ಸಂಘದ ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ಪುರಸ್ಕಾರ ನೀಡಲಾಯಿತು. ಸಂಘದ ಆಂತರಿಕ ಸಹಾಯಕ ಕೆ.ರಾಜಶೇಖರಪ್ಪ ವಾರ್ಷಿಕ ವರದಿ ವಾಚಿಸಿದರು. ಉಪಾಧ್ಯಕ್ಷ ಮಹೇಶ್ ಕಾಳೆ, ನಿರ್ದೇಶಕರಾದ ದತ್ತಾತ್ರೇಯ ಮೂರ್ತಿ ಪುರಾಣಿಕ್, ಸಿ.ರಾಜಶೇಖರ, ಮಧುರಾಯ ಜಿ.ಶೇಟ್, ಜೆ.ಎಸ್.ನಾಗರಾಜ ಜೈನ್, ಡಿ.ಎಸ್.ಶಂಕರ್ ಶೇಟ್, ಇ.ಎಚ್.ಮಂಜುನಾಥ್, ಕೆ.ಪಿ.ಶ್ರೀಧರ್ ನೆಮ್ಮದಿ, ಎ.ವಿ.ರೇಣುಕಾ ಮಾರುತಿ, ಸಾವಿತ್ರಮ್ಮ, ಕಾರ್ಯದರ್ಶಿ ಆರ್.ರವಿಕುಮಾರ್, ಸಿಬ್ಬಂದಿ ಶಿವಕುಮಾರ್ ಇತರರಿದ್ದರು.