

ಕೊಪ್ಪ: ಪಟ್ಟಣ ಪಂಚಾಯಿತಿ 2025-26ನೇ ಸಾಲಿಗೆ 1,27,95,379 ರೂ. ಉಳಿತಾಯ ಬಜೆಟ್ ಅನ್ನು ಪಪಂ ಅಧ್ಯಕ್ಷೆ ಗಾಯತ್ರಿ ವಸಂತ್ ಮಂಡಿಸಿದರು.
ಪಟ್ಟಣ ಪಂಚಾಯಿತಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಆಯವ್ಯಯ ಮಂಡನೆ ಸಭೆಯಲ್ಲಿ ಪಟ್ಟಣ ಪಂಚಾಯಿತಿ ಹಮ್ಮಿಕೊಂಡಿರುವ ಅಭಿವೃದ್ಧ್ದಿ ಕಾರ್ಯಗಳು, ಮೀಸಲಿಟ್ಟ ಅನುದಾನ, ಪಪಂ ನಿರೀಕ್ಷೆಯ ಅನುದಾನದ ಮಾಹಿತಿ ತಿಳಿಸಿದರು.
7,31,40,379 ರೂ. ಗಾತ್ರದ ಬಜೆಟ್ ಆಗಿದ್ದು, ಪ್ರಾರಂಭಿಕ ಶಿಲ್ಕು ಸುಮಾರು 1.16 ಕೋಟಿ ರೂ.ಅನ್ನು ಪಪಂ ಇರಿಸಿದೆ. 15ನೇ ಹಣಕಾಸು ಯೋಜನೆಯಲ್ಲಿ 30 ಲಕ್ಷ, ಸಲ್ಮ್ ಯೋಜನೆ ಅನುದಾನದಲ್ಲಿ 15 ಲಕ್ಷ, ಶಾಸಕರ ನಿಧಿ, ಎಂಎಲ್‌ಸಿ ನಿಧಿ, ಎಂಪಿ ನಿಧಿಗಳಿಂದ 10 ಲಕ್ಷ ಹಾಗೂ ವಿವಿಧ ಯೋಜನೆಗಳಲ್ಲಿ ಅನುದಾನ ನಿರೀಕ್ಷೆ ಮಾಡಲಾಗಿದೆ ಎಂದು ತಿಳಿಸಿದರು.
ಚರಂಡಿ ಅಭಿವೃದ್ಧಿ, ಬೀದಿದೀಪ, ಸ್ಮಶಾನ, ಪಾರ್ಕ್ ಅಭಿವೃದ್ಧಿ, ಘನತ್ಯಾಜ್ಯ ವಸ್ತು ನಿರ್ವಹಣಾ ಘಟಕದ ಅಭಿವೃದ್ಧ್ದಿ, ಪ.ಜಾತಿ, ಪ,ಪಂಗಡ ಕಲ್ಯಾಣ ಕಾರ್ಯಕ್ರಮ, ವಿಕಲಚೇತನ ಕಲ್ಯಾಣ ಕಾರ್ಯಕ್ರಮ, ರಸ್ತೆ ಅಭಿವೃದ್ಧಿ, ದುರಸ್ತಿ ಇತರ ಸ್ಥಿರಾಸ್ಥಿಗಳ ನಿರ್ವಹಣೆಗೆ ಹಣ ಮೀಸಲಿರಿಸಲಾಗಿದೆ ಎಂದು ತಿಳಿಸಿದರು.
ಪಪಂ ಸದಸ್ಯ ವಿಜಯ್‌ಕುಮಾರ್ ಮಾತನಾಡಿ, ಶವ ಸಂಸ್ಕಾರಗಳಿಗೆ ಹಣ ಇರಿಸಿದ್ದೀರಿ. ತಾಲೂಕು ಕಚೇರಿಯಿಂದ ಹಣ ನೀಡಲಾಗುತ್ತದೆ. ಎರಡು ಕಡೆಯಿಂದ ಹಣ ನೀಡುವುದು ಬೇಡ. ಒಂದು ಕಡೆ ನೀಡಿದರೆ ಸಾಕು ಎಂದರು. ಇದಕ್ಕೆ ದ್ವನಿಗೂಡಿಸಿದ ಸ್ಥಾಯಿ ಸಮಿತಿ ಅಧ್ಯಕ್ಷ ಇಸ್ಮಾಯಿಲ್, ವಾರ್ಡ್ ಸದಸ್ಯರನ್ನು ತಿಳಿದು ಹಣ ನೀಡುವುದು ಒಳಿತು ಎಂದರು.
ಅಧ್ಯಕ್ಷೆ ಗಾಯತ್ರಿ ವಸಂತ್ ಮಾತನಾಡಿ, ಶವ ಸಂಸ್ಕಾರಕ್ಕೆ 1 ಲಕ್ಷ ಮೀಸಲಿಟ್ಟಿದ್ದೇವೆ. 5 ಸಾವಿರ ಪ.ಪಂನಿಂದ ನೀಡಲಾಗುವುದು. ಅನಾಥ ಶವ ಹಾಗೂ ಬಿಪಿಎಲ್ ಕಾರ್ಡ್‌ದಾರರಿಗೆ ಮಾತ್ರ ಇದನ್ನು ಬಳಸಿಕೊಳ್ಳ್ಳಬಹುದು ಎಂದರು.
ಪಪಂ ಉಪಾಧ್ಯಕ್ಷೆ ಗಾಯತ್ರಿ ಶೆಟ್ಟಿ, ರೇಖಾ ಪ್ರಕಾಶ್, ಹೇಮಾವತಿ, ಸುಜಾತಾ ವಸಂತ್, ಮೈತ್ರಾ ಗಣೇಶ್, ಮಹಮ್ಮದ್ ಗೌಸ್, ಸುಮಾ ಪರ್ವತೇಗೌಡ, ಮುಖ್ಯಾಧಿಕಾರಿ ಚಂದ್ರಕಾಂತ್ ಇದ್ದರು.