

ಗಿಡ್ಡನೆಯ, ಉದ್ದವಾದ ದೇಹ ಹೊಂದಿದ್ದ ದಷ್ಟಪುಷ್ಟವಾದ, ಆಕರ್ಷಕ ಬಂಡೂರು ಕುರಿಗಳನ್ನು ನೋಡಲು ರೈತರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಪ್ರದರ್ಶನಕ್ಕೆ ಇಟ್ಟಿದ್ದ ಬಂಡೂರು ಗಂಡು ತಳಿಯೊಂದರ ಬೆಲೆಯನ್ನು ಕೇಳಿ ಅವಾಕ್ಕಾದರು. ಅಂದಹಾಗೆ ಅದರ ಬೆಲೆ ಬರೋಬ್ಬರಿ 1.25 ಲಕ್ಷ!
ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಮಳಿಗೆಯಲ್ಲಿರುವ ಬಂಡೂರು ಕುರಿಗಳು ಮತ್ತು ದೇಸಿ ತಳಿ ಆಕಳುಗಳು ನೋಡುಗರ ಗಮನ ಸೆಳೆದವು. ದೇಸಿ ತಳಿಗಳನ್ನು ಸಾಕುವ ವಿಧಾನ ಮತ್ತು ಅದರಿಂದ ರೈತರಿಗೆ ಆಗುವ ಪ್ರಯೋಜನವನ್ನು ಕೇಳಿ ತಿಳಿದುಕೊಳ್ಳುತ್ತಿದ್ದರು.
ಮಳವಳ್ಳಿ ತಾಲೂಕು ದಡದಪುರ ಗ್ರಾಮದ ದೊಡ್ಡಯ್ಯ 35 ಬಂಡೂರು ಕುರಿಗಳನ್ನು ಸಾಕುತ್ತಿದ್ದಾರೆ. ಈ ತಳಿಯ ಮರಿಗಳ ಬೆಲೆಯೇ ಕನಿಷ್ಠ 10 ಸಾವಿರ ರೂ.ಗಳಿಂದ ಪ್ರಾರಂಭವಾಗುತ್ತದೆ. ತಾಯಿ ಕುರಿಗೆ ಬೆಲೆ ಹೆಚ್ಚು. ಬಂಡೂರು ಕುರಿಯನ್ನು ಮಾಂಸಕ್ಕಾಗಿ ಬಳಸುವುದಕ್ಕಿಂತ ಹೆಚ್ಚಾಗಿ ಅವುಗಳ ಸಂಖ್ಯೆ ಗಣನೀಯವಾಗಿ ಕುಸಿಯುತ್ತಿರುವುದರಿಂದ ಬಂಡೂರು ಕುರಿ ತಳಿ ಅಭಿವೃದ್ಧಿಗೆ ಸರ್ಕಾರ ಮತ್ತು ವಿವಿಧ ಸಂಘ ಸಂಸ್ಥೆಗಳು ಹೆಚ್ಚು ಒತ್ತು ನೀಡುತ್ತಿವೆ. ಹೀಗಾಗಿ, ಮಾಂಸಕ್ಕಾಗಿ ಈ ತಳಿಯ ಕುರಿಗಳನ್ನು ಮಾರಾಟ ಮಾಡುವುದಕ್ಕಿಂತ ತಳಿ ಅಭಿವೃದ್ಧಿ ಮಾಡಲು ಬಯಸುವವರಿಗೆ ಇವುಗಳನ್ನು ಮಾರಾಟ ಮಾಡಲಾಗುತ್ತಿದೆ.
ಆಕರ್ಷಣೆಯ ಕೇಂದ್ರ ಬಿಂದುವಾದ 1.25 ಲಕ್ಷ ರೂ. ಬೆಲೆಯ ಬಂಡೂರು ಗಂಡು ಕುರಿ 50 ಕೆ.ಜಿ. ತೂಗುತ್ತದೆ. ಕುರಿಗಳ ಮಾಂಸದ ಪೈಕಿ ಬಂಡೂರು ಕುರಿ ಮಾಂಸದ ರುಚಿ ಬೇರೆಯೇ. ಅದರ ರುಚಿ ಸವಿದವರಿಗೆ ಬಂಡೂರು ತಳಿ ಏನು ಎಂಬುದು ಗೊತ್ತು ಎನ್ನುತ್ತಾರೆ ಬಂಡೂರು ಕುರಿ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿರುವ ದೊಡ್ಡಯ್ಯ.
ದೊಡ್ಡಯ್ಯ ಅವರು ಒಟ್ಟು 10 ಬಂಡೂರು ಕುರಿಗಳನ್ನು ಸ್ಟಾಲ್ಗಳಲ್ಲಿ ಪ್ರದರ್ಶನಕ್ಕೆ ಇರಿಸಿದ್ದರು. ಅದನ್ನು ಸಾಕುವ ವಿಧಾನ ಮತ್ತು ಆಹಾರ ಪದ್ಧತಿ ಬಗ್ಗೆ ಸಾರ್ವಜನಿಕರಿಗೆ ಬಿಡಿಸಿ ಹೇಳುತ್ತಿದ್ದರು. ತಿ.ನರಸೀಪುರ ತಾಲೂಕಿನ ಢಣಾಯಕನಪುರದ ಕೆಂಪಣ್ಣ 20 ಬಂಡೂರು ತಳಿಯ ಕುರಿ ಸಾಕಿದ್ದು, ಲಾಭ ಕಂಡುಕೊಂಡಿದ್ದಾರೆ.
ನಾಗನಹಳ್ಳಿ ಸಾವಯವ ಕೃಷಿ ಮತ್ತು ಸಂಶೋಧನಾ ಕೇಂದ್ರದವರು ದೇಸಿ ತಳಿಯ ನಾಡ ಹಸುಗಳನ್ನು ಅದೇ ಮಳಿಗೆಯಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದರು. ನೋಡಲು ಗಿಡ್ಡದಾದ ಈ ಹಸುಗಳು ಹಾಲು ಕೊಡುವುದು ಕಡಿಮೆ. ಈ ಹಾಲಿನಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿರುತ್ತದೆ. ಹೀಗಾಗಿ, ಈ ಆಕಳುಗಳ ಹಾಲಿಗೆ ಬೇಡಿಕೆ ಹೆಚ್ಚು. ಹಳ್ಳಿಕಾರ್, ಮಲ್ನಾಡ್ ಗಿಡ್ಡ, ಸ್ವರ್ಣ-ಕಪಿಲಾ ತಳಿಯ ದೇಸಿ ಆಕಳುಗಳನ್ನು ಪ್ರದರ್ಶನಕ್ಕೆ ಇರಿಸಲಾಗಿತ್ತು.
| ಎಂ. ರವಿ ಮೈಸೂರು