1.23 ಕೋಟಿ ರೂ. ವರ್ಗಾಯಿಸಿಕೊಂಡು ವಂಚನೆ

cybe crime
Published on

ಹುಬ್ಬಳ್ಳಿ: ಸಿಬಿಐ ಅಧಿಕಾರಿಗಳ ಹೆಸರಿನಲ್ಲಿ ವಾಟ್ಸ್‌ಆ್ಯಪ್ ವಿಡಿಯೋ ಕರೆ ಮಾಡಿದ ಆಗಂತಕರು, ವೈದ್ಯಕೀಯ ದಾಖಲೆ ಪತ್ರ ನಿವೃತ್ತ ನಿರ್ವಹಣಾಧಿಕಾರಿಯೊಬ್ಬರಿಗೆ ಡಿಜಿಟೆಲ್ ಅರೆಸ್ಟ್ ಮಾಡುವುದಾಗಿ ಹೆದರಿಸಿ 1 ಕೋಟಿ 23 ಲಕ್ಷ ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾರೆ.

ನಗರದ ಮೋಹನರಾಜ ವಂಚನೆಗೆ ಒಳಗಾದವರು. ಮೋಹನರಾಜಗೆ ವಿಡಿಯೋ ಕರೆ ಮಾಡಿ ಸಿಬಿಐ ಅಧಿಕಾರಿಗಳೆಂದು ಪರಿಚಯಿಸಿಕೊಂಡಿದ್ದಾರೆ. ನಂತರ ನಿಮ್ಮ ಬ್ಯಾಂಕ್ ಖಾತೆಗಳಲ್ಲಿ ಕಾನೂನು ಬಾಕರ ವಹಿವಾಟು ಕಂಡು ಬಂದಿದ್ದು, ಮುಂಬೈ ಕೋರ್ಟ್‌ನಲ್ಲಿ ಪಬ್ಲಿಕ್ ಮನಿ ಲಾಂಡರಿಂಗ್ ಆ್ಯಕ್ಟ್ ಕೇಸ್ ದಾಖಲಾಗಿದೆ. ಈ ಕೇಸ್‌ನಲ್ಲಿ ಅರೆಸ್ಟ್ ವಾರಂಟ್ ಕಳುಹಿಸಲಾಗಿದೆ.

ನಾವು ಎಲ್ಲಿ ಯಾವಾಗ ಬೇಕಾದರೂ ಬಂಧಿಸಬಹುದು ಎಂದು ಭಯಪಡಿಸಿದ್ದಾರೆ. ಅರೆಸ್ಟ್ ವಾರಂಟ್ ತಡೆಹಿಡಿಯಲು ಹಾಗೂ ತನಿಖೆಗೆ ಒಳಪಡಿಸದಿರಲು ನಾವು ಹೇಳಿದ ಖಾತೆಗಳಿಗೆ ಹಣ ವರ್ಗಾಯಿಸಬೇಕು. ಯಾರೊಂದಿಗೂ ಚರ್ಚಿಸಬಾರದು. ಸದಾ ವಿಡಿಯೋ ಕರೆಯಲ್ಲಿಯೇ ಇರಬೇಕು. ಯಾವುದೇ ಕಾರಣಕ್ಕೂ ವಿಡಿಯೋ ಕರೆ ಸ್ಥಗಿತಗೊಳಿಸಬಾರದು.

ತಾಸಿಗೊಮ್ಮೆ ನಿಮ್ಮ ಎಲ್ಲ ಚಟುವಟಿಕೆಗಳ ವರದಿಯನ್ನು ನಮಗೆ ನೀಡುತ್ತಿರಬೇಕು ಎಂದು ಹೇಳಿ ಡಿ. 6ರಿಂದ ಡಿ. 12ರವರೆಗೆ ಹಂತ ಹಂತವಾಗಿ 1 ಕೋಟಿ 23 ಲಕ್ಷ ರೂ. ಆರ್‌ಟಿಜಿಎಸ್ ಮೂಲಕ ವರ್ಗಾಯಿಸಿಕೊಂಡು ವಂಚಿಸಿದ್ದಾರೆ. ಸಿಇಎನ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net