ತುಂಗಭದ್ರಾ ನದಿಗೆ 1.22 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ

BARRAGE
ಮುಂಡರಗಿ ತಾಲೂಕಿನ ಸಿಂಗಟಾಲೂರು ಬ್ಯಾರೇಜ್ ಗೇಟ್‌ಗಳ ಮೂಲಕ ಶನಿವಾರ ಅಪಾರ ಪ್ರಮಾಣದ ನೀರನ್ನು ತುಂಗಭದ್ರಾ ನದಿಗೆ ಹರಿಬಿಡಲಾಯಿತು.
Published on

ಮುಂಡರಗಿ: ಮಲೆನಾಡು ಸೇರಿದಂತೆ ಮತ್ತಿತರ ಭಾಗಗಳಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ತುಂಗಭದ್ರಾ ನದಿಗೆ ದಿನದಿಂದ ದಿನಕ್ಕೆ ಅಪಾರ ಪ್ರಮಾಣದ ನೀರು ಹರಿದುಬರುತ್ತಿದೆ. ಹೀಗಾಗಿ ತಾಲೂಕಿನ ಸಿಂಗಟಾಲೂರು ಬ್ಯಾರೇಜ್ ಒಳಹರಿವು ಹೆಚ್ಚಾಗಿದ್ದು ಶನಿವಾರ ಬ್ಯಾರೇಜ್‌ನ 26 ಗೇಟ್‌ಗಳ ಪೈಕಿ 17 ಗೇಟ್‌ಗಳ ಮೂಲಕ 1,22,437 ಕ್ಯೂಸೆಕ್ ನೀರನ್ನು ನದಿಗೆ ಹರಿಬಿಡಲಾಯಿತು.

ಸಿಂಗಟಾಲೂರು ಬ್ಯಾರೇಜ್‌ನಿಂದ ಜು.18ರಂದು 1,04390 ಕ್ಯೂಸೆಕ್ ನೀರನ್ನು ತುಂಗಭದ್ರಾ ನದಿಗೆ ಹರಿಬಿಡಲಾಗಿತ್ತು. ಜು. 19ರಂದು 1,09370 ಕ್ಯೂಸೆಕ್ ನೀರನ್ನು ಹೊರ ಬಿಡಲಾಗಿದೆ. ಸಿಂಗಟಾಲೂರು ಬ್ಯಾರೇಜ್ 3.12 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ.

ಬ್ಯಾರೇಜ್‌ನ ಹಿನ್ನೀರಿನಿಂದ ಗುಮ್ಮಗೋಳ, ಬಿದರಹಳ್ಳಿ, ವಿಠಲಾಪುರ ಮತ್ತು ಹೂವಿನಹಡಗಲಿ ತಾಲೂಕಿನ ಅಲ್ಲಿಪುರ ಗ್ರಾಮಗಳು ಮುಳುಗಡೆ ಪ್ರದೇಶಕ್ಕೆ ಒಳಪಟ್ಟಿದ್ದು, ಈ ನಾಲ್ಕು ಗ್ರಾಮಗಳನ್ನು ಈವರೆಗೂ ಸಂಪೂರ್ಣವಾಗಿ ಸ್ಥಳಾಂತರಿಸದ ಕಾರಣ ಬ್ಯಾರೇಜ್‌ನಲ್ಲಿ ಸದ್ಯ 1.94 ಟಿಎಂಸಿ ನೀರು ಮಾತ್ರ ಸಂಗ್ರಹಿಸಲಾಗುತ್ತಿದೆ. ಹೆಚ್ಚುವರಿ ನೀರನ್ನು ನದಿಗೆ ಹರಿಬಿಡಲಾಗುತ್ತಿದೆ. ತುಂಗಭದ್ರಾ ನದಿಯೂ ಈಗ ಮೈತುಂಬಿ ಹರಿಯುತ್ತಿದೆ.

ಜು. 17ರಂದು 68,122ಕ್ಯೂಸೆಕ್ ನೀರು ಒಳಹರಿವು ಇತ್ತು. ಜು.18ರಂದು ಒಳಹರಿವು 1 ಲಕ್ಷ ಕ್ಯೂಸೆಕ್‌ಗೂ ಹೆಚ್ಚಾಗಿದೆ. ಸುಮಾರು 2 ಲಕ್ಷದಿಂದ 2.5 ಲಕ್ಷ ಕ್ಯೂಸೆಕ್‌ಗೂ ಹೆಚ್ಚು ಪ್ರಮಾಣದಲ್ಲಿ ಒಳಹರಿವು ಇದ್ದರೆ ಬ್ಯಾರೇಜ್ ಹಿನ್ನೀರಿಗೆ ಒಳಪಡುವ ಗ್ರಾಮಗಳಿಗೆ ಪ್ರವಾಹ ಎದುರಾಗುವ ಸಾಧ್ಯತೆ ಹೆಚ್ಚಿರುತ್ತದೆ. ಈಗಿನ ವಾತಾವರಣ ಮುಂದುರಿದರೆ ಒಳಹರಿವು ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಒಳಹರಿವು ಹೆಚ್ಚಳದಿಂದಾಗಿ ನದಿ ಪಾತ್ರದ ಗ್ರಾಮಸ್ಥರಲ್ಲಿ ಆತಂಕ ಶುರುವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net