

ಗೋಣಿಕೊಪ್ಪ: ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆದಮುಳ್ಳೂರು-ಕಡಂಗ ಸಂಪರ್ಕ ರಸ್ತೆಯನ್ನು ಶಾಸಕ ಎ.ಎಸ್.ಪೊನ್ನಣ್ಣ ಉದ್ಘಾಟನೆ ಮಾಡಿದರು.
ದುಸ್ಥಿತಿಯಲ್ಲಿದ್ದ ಕೆದಮುಳ್ಳೂರು-ಕಡಂಗ ಸಂಪರ್ಕ ರಸ್ತೆ ದುರಸ್ತಿಗಾಗಿ ಸ್ಥಳೀಯರು ಶಾಸಕರಿಗೆ ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಶಾಸಕ ಪೊನ್ನಣ್ಣ 3 ತಿಂಗಳ ಹಿಂದೆ ರಸ್ತೆ ಕಾಮಗಾರಿಗೆ 1.21 ಕೋಟಿ ರೂ. ಅನುದಾನ ನೀಡಿದ್ದರು. ಮಂಗಳವಾರ ಗ್ರಾಮಸ್ಥರ ಸಮ್ಮುಖದಲ್ಲಿ ಅಭಿವೃದ್ಧಿಯಾದ ರಸ್ತೆಯನ್ನು ಶಾಸಕ ಪೊನ್ನಣ್ಣ ಉದ್ಘಾಟಿಸಿದರು.
ಅಲ್ಲದೇ 5 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾದ ಗ್ರಾಮದ ಬೇಪುಡಿಯಂಡ, ಮುಕ್ಕಾಟೀರ ಕುಟುಂಬಸ್ಥರ ಮನೆಗಳಿಗೆ ತೆರಳುವ ರಸ್ತೆ ಹಾಗೂ ಕೆದಮುಳ್ಳೂರು, ಬಾರೀಕಾಡು, ದಿಡ್ಡಳ್ಳಿ ರಸ್ತೆಯಲ್ಲಿ ನಿರ್ಮಾಣವಾದ 8 ಲಕ್ಷ ರೂ. ವೆಚ್ಚದ ಕಿರುಸೇತುವೆ ಉದ್ಘಾಟಿಸಿದರು.
ಸರ್ಕಾರದ ವತಿಯಿಂದ ಮಂಜೂರಾಗಿರುವ ಅನುದಾನದಲ್ಲಿ ಕೆದಮುಳ್ಳೂರು, ತರ್ಮೆ ಮೊಟ್ಟೆ, ತಂಬಾಂಡ, ಕರವಟ್ಟಿರ ಕುಟುಂಬಗಳ ಪಾಲಂಗಾಲ ಲಿಂಕ್ ರಸ್ತೆಗಳು ಹಾಗೂ 15 ಲಕ್ಷ ರೂ. ಅನುದಾನದಲ್ಲಿ ಕೆದಮುಳ್ಳೂರು ಸಮುದಾಯ ಭವನ ಕಟ್ಟಡದ ಮುಂದುವರಿದ ಕಾಮಗಾರಿಗೆ ಈ ವೇಳೆ ಭೂಮಿಪೂಜೆ ನೆರವೇರಿಸಿದರು.
ಕೆದಮುಳ್ಳೂರು ಗ್ರಾ.ಪಂ. ಅಧ್ಯಕ್ಷ ಮಾಳೇಟಿರ ಜಪ್ರಿ ಉತ್ತಪ್ಪ, ಗ್ರಾ.ಪಂ. ಸದಸ್ಯರಾದ ಮಾಳೇಟಿರ ಪ್ರಶಾಂತ್ ಉತ್ತಪ್ಪ, ಎಂ.ಇಸ್ಮಾಯಿಲ್ ವಲಯ ಕಾಂಗ್ರೆಸ್ ಅಧ್ಯಕ್ಷ ನಡಿಕೇರಿಯಂಡ ಮಹೇಶ್, ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಜಿ ಪೂಣಚ್ಚ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಇಮ್ಮಿ ಪೊನ್ನಪ್ಪ ಇತರರು ಭಾಗವಹಿಸಿದ್ದರು.