1.20 ಕ್ವಿಂಟಾಲ್ ನಿಷೇಧಿತ ಪ್ಲಾಸ್ಟಿಕ್ ವಶ

LAXMESHWAR
ಲಕ್ಷ್ಮೇಶ್ವರದಲ್ಲಿ ಪುರಸಭೆ ಮುಖ್ಯಾಧಿಕಾರಿ ಮಹೇಶ ಹಡಪದ ನೇತೃತ್ವದ ಅಧಿಕಾರಿಗಳ ತಂಡ ಅಂಗಡಿಗಳ ಮೇಲೆ ಗುರುವಾರ ದಾಳಿ ನಡೆಸಿ ನಿಷೇಧಿತ ಪ್ಲಾಸ್ಟಿಕ್ ವಶಪಡಿಸಿಕೊಂಡಿರುವುದು. ಮಂಜುಳಾ ಹೂಗಾರ, ಶಿವಾನಂದ ಅಜ್ಜಣ್ಣನವರ, ಮಂಜುನಾಥ ಮುದಗಲ್ ಇತರರಿದ್ದರು.
Published on

ಲಕ್ಷ್ಮೇಶ್ವರ: ಪುರಸಭೆ ಮುಖ್ಯಾಧಿಕಾರಿ ಮಹೇಶ ಹಡಪದ ಅವರ ನೇತೃತ್ವದ ಅಧೀಕಾರಿಗಳ ತಂಡ ಪಟ್ಟಣದ ವಿವಿಧ ಅಂಗಡಿಗಳ ಮೇಲೆ ಗುರುವಾರ ದಿಢೀರ್ ದಾಳಿ ನಡೆಸಿ 1.20 ಕ್ವಿಂಟಾಲ್ ನಿಷೇಧಿತ ಪ್ಲಾಸ್ಟಿಕ್ ವಶಪಡಿಸಿಕೊಂಡು ಅಂಗಡಿಕಾರರಿಂದ 36 ಸಾವಿರ ರೂ.ಗಿಂತ ಅಧಿಕ ದಂಡ ವಿಧಿಸಿದೆ.

ಮುಖ್ಯಾಧಿಕಾರಿ, ಅರೋಗ್ಯ ಹಾಗೂ ಕಂದಾಯ ಇಲಾಖೆ ಸಿಬ್ಬಂದಿ ಪೊಲೀಸ್ ಭದ್ರತೆಯಲ್ಲಿ ವಾಣಿಜ್ಯ ಮಳಿಗೆ ಹಾಗೂ ಬೇಕರಿ ಸೇರಿದಂತೆ ಸುಮಾರು 60 ಅಂಗಡಿಗಳ ಮೇಲೆ ದಾಳಿ ಮಾಡಿ ಪ್ಲಾಸ್ಟಿಕ್ ಬಾಟಲ್, ಕಪ್, ಕ್ಯಾರಿಬ್ಯಾಗ್, ಪೈಪ್‌ಗಳು ಸೇರಿದಂತೆ ಇತರೆ ವಸ್ತುಗಳನ್ನು ವಶಕ್ಕೆ ಪಡೆದಿದೆ.

ಮುಖ್ಯಾಧಿಕಾರಿ ಮಾತನಾಡಿ, ಪರಿಸರ ಹಾನಿಗೆ ಕಾರಣವಾಗುವ ಪ್ಲಾಸ್ಟಿಕ್ ಬಳಕೆ ನಿಷೇಧಿಸಿದ್ದರೂ ಪಟ್ಟಣದ ಕೆಲವು ಅಂಗಡಿಗಳಲ್ಲಿ ಪ್ಲಾಸ್ಟಿಕ್ ಚೀಲಗಳ ಬಳಕೆ ನಿಂತಿಲ್ಲ. ಪ್ಲಾಸ್ಟಿಕ್ ಬಳಸುವುದರಿಂದ ತ್ಯಾಜ್ಯ ಹೆಚ್ಚಾಗುತ್ತದೆ ಹಾಗೂ ಪ್ಲಾಸ್ಟಿಕ್ ಮಣ್ಣಿನಲ್ಲಿ ಕೊಳೆಯುವುದಿಲ್ಲ ಇದರಿಂದ ಪರಿಸರ ಮಾಲಿನ್ಯ ಹೆಚ್ಚಾಗುತ್ತದೆ. ಆರೋಗ್ಯಕ್ಕೂ ಇದು ಒಳ್ಳೆಯದಲ್ಲ. ನಾವು ನಮ್ಮ ಮುಂದಿನ ಪೀಳಿಗೆಗೆ ವಿಷಯುಕ್ತ ಪರಿಸರ ನೀಡಬಾರದು. ಆ ಕಾರಣಕ್ಕೆ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ಬಿಡಬೇಕು. ಇದರಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದರು.

ಏಕ ಬಳಕೆಯ ಪ್ಲಾಸ್ಟಿಕ್ ಅನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಒಂದು ವೇಳೆ ಪ್ಲಾಸ್ಟಿಕ್ ಬಳಕೆ ಅಥವಾ ಮಾರಾಟ ಮಾಡುವುದು ಕಂಡು ಬಂದಲ್ಲಿ ಪ್ಲಾಸ್ಟಿಕ್ ವಶಪಡಿಸಿ ಕೊಂಡು ಅಂಥವರ ಮೇಲೆ ಸೂಕ್ತ ಕ್ರಮ ಜರುಗಿಸಲಾಗುತ್ತದೆ ಎಂದರು.
ಪುರಸಭೆ ವ್ಯವಸ್ಥಾಪಕಿ ಮಂಜುಳಾ ಹೂಗಾರ, ಶಿವಾನಂದ ಅಜ್ಜಣ್ಣನವರ, ಆರೋಗ್ಯ ನಿರೀಕ್ಷಕ ಮಂಜುನಾಥ ಮುದಗಲ್, ಹನಮಂತ ನಂದೆಣ್ಣನವರ, ಸಿದ್ದು ಹಿರೇಮಠ, ಉಮಾ ಬೆಳವಿಗಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net