

ಮಡಿಕೇರಿ
ಮಳೆಯಿಂದಾಗಿ ಸಂಪೂರ್ಣ ಮನೆ ಹಾನಿ ಆದವರಿಗೆ ೧.೨೦ ಲಕ್ಷ ರೂ. ಪರಿಹಾರ ಮತ್ತು ಮನೆ ಕಟ್ಟಿಕೊಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಜಿಲ್ಲೆಯ ಭೂಕುಸಿತ ಮತ್ತು ಪ್ರವಾಹ ಪೀಡಿತ ಪ್ರದೇಶಗಳಿಗೆ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗಿನಲ್ಲಿ ೬೭ ಮನೆಗಳು ಪೂರ್ಣ ಹಾನಿ ಆಗಿವೆ. ೧೭೬ ಮನೆಗಳು ಭಾಗಶಃ ಹಾನಿ ಆಗಿದೆ. ಭಾಗಶಃ ಹಾನಿ ಆಗಿರುವ ಮನೆಗಳಿಗೆ ೫೦ ಸಾವಿರ ರೂಪಾಯಿ ಪರಿಹಾರ ನೀಡಲಾಗುವುದು. ಇದರಲ್ಲಿ ೪೩.೫ ಸಾವಿರ ರೂ. ರಾಜ್ಯ ಸರ್ಕಾರದ ಹಣವಾಗಿದ್ದು, ಈಗಾಗಲೇ ಸಂತ್ರಸ್ತರ ಖಾತೆಗೆ ನೇರ ಹಣ ವರ್ಗಾವಣೆ ಆಗಿದೆ.
೧೩ ಕಡೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಭೂಕುಸಿತ ಸಂಭವಿಸಿದೆ. ೨೦ ಕಡೆ ಸಣ್ಣ ಪ್ರಮಾಣದಲ್ಲಿ ಭೂ ಕುಸಿತ ಆಗಿದೆ. ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ, ೫೦ರಷ್ಟು ಹೆಚ್ಚು ಮಳೆ ಆಗಿದ್ದರೂ ಅದೃಷ್ಟವಶಾತ್ ಪ್ರಾಣ ಹಾನಿ ಆಗಿಲ್ಲ. ಕೆಲವರಿಗೆ ಗಾಯಗಳಾಗಿವೆ. ೧೬ ಜಾನವಾರು ಸತ್ತಿವೆ. ಇದರ ಮಾಲೀಕರಿಗೆ ತಲಾ ೩೫ ಸಾವಿರ ರೂ. ಪರಿಹಾರ ನೀಡಲಾಗಿದೆ. ೧೪ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದ್ದು, ೧೦ ಕೇಂದ್ರಗಳಲ್ಲಿ ೧೮೬ ಸಂತ್ರಸ್ತರು ಇದ್ದಾರೆ. ತೋರ ಗ್ರಾಮದ ಕಾಳಜಿ ಕೇಂದ್ರದಲ್ಲಿ ಇರುವವರ ಜತೆಗೆ ನೇರವಾಗಿ ಮಾತನಾಡಿದ್ದು, ಸರ್ಕಾರದ ಸೌಲಭ್ಯ ಬಗ್ಗೆ ಸಂತಸ ಹಂಚಿಕೊಂಡಿದ್ದಾರೆ.
೨೮ ಹೆಕ್ಟೇರ್‌ನಲ್ಲಿ ತೋಟಗಾರಿಕಾ ಬೆಳೆ ಹಾನಿಯಾಗಿದೆ. ಕಾಫಿ ಬೆಳೆ ನಷ್ಟದ ಬಗ್ಗೆ ಕಾಫಿ ಬೋರ್ಡ್ ಮತ್ತು ಕಂದಾಯ ಇಲಾಖೆ ಜಂಟಿ ಸಮೀಕ್ಷೆ ನಡೆಸಲು ಸೂಚಿಸಲಾಗಿದೆ. ೨,೭೦೮ ವಿದ್ಯುತ್ ಕಂಬಗಳು ಬಿದ್ದು ಹೋಗಿದ್ದು, ೧೫೦ ಬಿಟ್ಟು ಉಳಿದೆಲ್ಲಾವನ್ನೂ ಮತ್ತೆ ಅಳವಡಿಸಲಾಗಿದೆ. ಹಾಳಾಗಿದ್ದ ೪೭ ಟ್ರಾನ್ಸ್ ಫಾರ್ಮರ್‌ಗಳನ್ನೂ ಹೊಸದಾಗಿ ಅಳವಡಿಸಲಾಗಿದೆ.
ರಾಜ್ಯದಲ್ಲಿ ೭೪೬ ಕೋಟಿ ರೂ. ಮತ್ತು ಕೊಡಗು ಜಿಲ್ಲಾಧಿಕಾರಿ ಪಿಡಿ ಖಾತೆಯಲ್ಲಿ ೪೬ ಕೋಟಿ ರೂ. ಹಣ ಇದೆ. ಅಗತ್ಯಬಿದ್ದರೆ ಇನ್ನೂ ಹೆಚ್ಚಿನ ಹಣ ನೀಡಲಾಗುವುದು. ಜಿಲ್ಲೆಯಲ್ಲಿ ಒಟ್ಟು ೩೪೪ ಕಿ.ಮೀ. ಉದ್ದದ ಲೋಕೋಪಯೋಗಿ, ಜಿಲ್ಲಾ ಪಂಚಾಯ್ತಿ ರಸ್ತೆಗಳು ಹಾನಿ ಆಗಿವೆ. ಇವೆಲ್ಲವನ್ನೂ ಆದ್ಯತೆ ಮೇಲೆ ಸರಿಪಡಿಸಲು ಸೂಚಿಸಲಾಗಿದೆ. ಈ ಬಾರಿ ವಾಡಿಕೆಗಿಂತ ಶೇ. ೫೦ರಷ್ಟು ಹೆಚ್ಚು ಮಳೆಯಾಗಿದೆ. ಮುಂಜಾಗ್ರತಾ ಕ್ರಮಗಳ ಜತೆಗೆ ಅನಾಹುತ ಬಳಿಕ ಪರಿಹಾರ ಕಾರ್ಯಗಳನ್ನು ತುರ್ತಾಗಿ ನಡೆಸಲಾಗುತ್ತಿದೆ. ಭೂಕುಸಿತ ಪ್ರದೇಶಗಳಲ್ಲಿ ಶಾಶ್ವತ ಪರಿಹಾರಕ್ಕೆ ಜಿಎಸ್‌ಐ ವರದಿ ನೋಡಿ ನಂತರ ತೀರ್ಮಾನಿಸಲಾಗುವುದು. ಮಳೆ ಬೀಳುತ್ತಲೇ ಇರುವುದರಿಂದ ಭೂ ಕುಸಿತದ ಪ್ರದೇಶವನ್ನು ಸರಿಪಡಿಸಲು ಕಷ್ಟ ಆಗುತ್ತಿದೆ. ಕೊಡಗು ಜಿಲ್ಲಾಧಿಕಾರಿಗಳ ಕಚೇರಿ ತಡೆಗೋಡೆ ದುರಸ್ತಿ ಕಾರ್ಯವನ್ನು ಡಿಸೆಂಬರ್ ಒಳಗೆ ಪೂರ್ಣಗೊಳಿಸಲು ಸ್ಪಷ್ಟ ಸೂಚನೆ ನೀಡಲಾಗಿದೆ ಎಂದರು.