

ಕಡೂರು: ಮರ್ಯಾದ ಪುರುಷೋತ್ತಮ ಶ್ರೀರಾಮನ ಸ್ತುತಿಸುವ ಭಕ್ತಿ ಕೋಟಿಯೇ ಇದೆ. ಆದರೆ ಪಟ್ಟಣದ 89ರ ಹಿರಿಯ ವೃದ್ಧರೊಬ್ಬರು ಸತತ 17 ವರ್ಷಗಳಿಂದ ನಿರಂತರವಾಗಿ 1.20 ಕೋಟಿ ಅಧಿಕ ರಾಮ ನಾಮವನ್ನು ಬರೆಯುವ ಮೂಲಕ ಭಕ್ತಿ ಮೆರೆದಿದ್ದಾರೆ.
ಪಟ್ಟಣದ ಅಯ್ಯಪ್ಪಸ್ವಾಮಿ ದೇವಾಲಯದ ಪ್ರಧಾನ ಗುರುಸ್ವಾಮಿ ಕೆ.ಪರಮೇಶ್ವರನ್ ಸ್ವಾಮಿ ಅವರು ಪ್ರತಿನಿತ್ಯ ಎರಡು ತಾಸು ಬಿಡುವಿನ ಕಾರ್ಯದ ವೇಳೆ ರಾಮನಾಮ ಸ್ಮರಿಸುತ್ತ 19 ಪುಸ್ತಕಗಳಲ್ಲಿ ರಾಮನ ಜಪದೊಂದಿಗೆ ತನ್ನ ಭಕ್ತಿಯ ಸಂಕಲ್ಪವನ್ನು ಇಂದಿಗೂ ಮುಂದುವರೆಸುತ್ತಿದ್ದಾರೆ. 2007ರಿಂದ ಆರಂಭವಾದ ಈ ಅಭಿಯಾನ ಕಾಕತಾಳಿಯವಾಗಿ ಅಯೋಧ್ಯೆಯ ರಾಮಲಾಲ್ಲ ಮಂದಿರ ಉದ್ಘಾಟನೆ ವೇಳೆ ಕೋಟಿ ರಾಮನಾಮ ಪೂರ್ಣಗೊಳಿಸಿರುವುದು ವಿಶೇಷವಾಗಿದೆ. ಇದರ ಜತೆಯಲ್ಲಿ ರಾಮನಾಮ ಬರೆಯಲು ಸಹಕರಿಸಿದ ಪೆನ್ನುಗಳನ್ನು ಕೂಡ ಸಂಗ್ರಹಿಸಿಟ್ಟಿರುವುದು ಗಮನಾರ್ಹ ಸಂಗತಿ.
ಸಂಕಲ್ಪದೊಂದಿಗೆ ಬರೆದಿರುವ ರಾಮನಾಮದ ಪುಸ್ತಕಗಳನ್ನು ಮನೆಯಲ್ಲಿ ವಿಶೇಷ ಪೂಜೆ ಸಲ್ಲಿಸುತ್ತಿದ್ದು, ಇದೀಗ ಸಖರಾಯಪಟ್ಟಣದಲ್ಲಿ ನಿರ್ಮಾಣಗೊಳ್ಳುತ್ತಿರುವ ಆಂಜನೇಯ ಸ್ವಾಮಿಯ ನೂತನ ದೇವಾಲಯದ ಸಮಿತಿಯವರು ರಾಮನಾಮ ಬರೆದಿರುವ ಪುಸ್ತಕಗಳನ್ನು ಕೇಳುತ್ತಿದ್ದಾರೆ. ಇವುಗಳನ್ನು ವಿಶೇಷವಾಗಿ ಸಂಗ್ರಹಿಸಿ ಪ್ರತಿದಿನ ಪೂಜೆ ಸಲ್ಲಿಸುವವರಿಗೆ ಆದ್ಯತೆ ನೀಡಿ ಈ ಪುಸ್ತಕಗಳನ್ನು ನೀಡುವ ಉದ್ದೇಶ ಹೊಂದಲಾಗಿದೆ. ರಾಮನಾಮ ಬರೆಯುವುದು ನಮ್ಮಲ್ಲಿನ ಮನಸ್ಸನ್ನು ಏಕಾಗ್ರತೆಗೊಳಿಸಿ ಸಕಾರಾತ್ಮಕ ಭಾವನೆಗಳು ಮೂಡಲಿವೆ. ಈ ನಿಟ್ಟಿನಲ್ಲಿ ಇಂದಿನ ಯುವ ಪೀಳಿಗೆ ಹೆಚ್ಚು ಧಾರ್ಮಿಕ ಮತ್ತು ಆಧ್ಯಾತ್ಮಿಕಗಳಲ್ಲಿ ತೊಡಗಿಸಿಕೊಳ್ಳಬೇಕಿದೆ ಎಂದು ಕೆ.ಪರಮೇಶ್ವರನ್ ವಿಜಯವಾಣಿಯೊಂದಿಗೆ ಅನಿಸಿಕೆ ವ್ಯಕ್ತಪಡಿಸಿದರು.