ಶಿರಸಿ ಟಿಎಂಎಸ್‌ಗೆ 1.11 ಕೋಟಿ ರೂ. ಲಾಭ

TMS
Published on

ಶಿರಸಿ: ಕಳೆದ 39 ವರ್ಷಗಳಿಂದ ನಿರಂತರ ರೈತರ ಏಳಿಗೆಗೆ ಕೆಲಸ ಮಾಡುತ್ತಿರುವ ಇಲ್ಲಿನ ಶಿರಸಿ ತಾಲೂಕು ವ್ಯವಸಾಯ ಹುಟ್ಟುವಳಿಗಳ ಸಹಕಾರಿ ಮಾರಾಟ ಸಂಘ 2022-23ನೇ ಸಾಲಿನಲ್ಲಿ 1.11 ಕೋಟಿ ರೂಪಾಯಿ ನಿವ್ವಳ ಲಾಭ ಗಳಿಸಿದೆ ಎಂದು ಸಂಸ್ಥೆಯ ಅಧ್ಯಕ್ಷ ಜಿ.ಎಂ. ಹೆಗಡೆ ಹುಳಗೋಳ ತಿಳಿಸಿದ್ದಾರೆ.

ಈ ಬಾರಿ ಸದಸ್ಯರಿಗೆ ಶೇ. 15ರಷ್ಟು ಲಾಂಭಾಂಶ ಹಂಚಿಕೆ ಮಾಡಲು ಯೋಜಿಸಲಾಗಿದೆ. ಸಹಕಾರಿ ಸದಸ್ಯರಿಗೆ ಅಗತ್ಯವಾದ ಅನೇಕ ಯೋಜನೆ, ಹಸಿ ಅಡಕೆ, ಇತರ ಅಡಕೆ, ಕಾಳು ಮೆಣಸು ಉತ್ಪನ್ನಗಳ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಿದೆ. ತಮ್ಮ ಬೆಳೆಗಳನ್ನು ಇಟ್ಟುಕೊಳ್ಳಲು ಆಧುನಿಕ ಗೋದಾಮು ಲಭ್ಯವಿದ್ದು, 6 ತಿಂಗಳು ಉಚಿತ ದಾಸ್ತಾನಿಗೂ ಅವಕಾಶ ನೀಡಲಾಗಿದೆ. ಆರೋಗ್ಯ ಸುರಕ್ಷಾ ಯೋಜನೆಯಡಿ 429 ಸದಸ್ಯರ ಅನಾರೋಗ್ಯದ ಖರ್ಚಿಗಾಗಿ 85.86 ಲಕ್ಷ ರೂ. ನೆರವು ನೀಡಿದ್ದೇವೆ ಎಂದು ವಿವರಿಸಿದರು.

ಸಂಘದ ಸ್ವಂತ ಬಂಡವಾಳ 48.22 ಕೋಟಿ ರೂ. ಆಗಿದೆ. ಸಂಘದಲ್ಲಿ 17,107 ಸದಸ್ಯರಿದ್ದಾರೆ. ಸಂಘದಲ್ಲಿ ಸದಸ್ಯರ ಅನುಕೂಲಕ್ಕಾಗಿ ಸೂಪರ್ ಮಾರುಕಟ್ಟೆ ಸೌಲಭ್ಯ ಒದಗಿಸಲಾಗಿದೆ. ಕೃಷಿ ವಿಭಾಗ ಸೇವೆ ನೀಡುತ್ತಿದೆ. ಕಾಳು ಮೆಣಸು ಬೆಳೆಯಿರಿ ಆಂದೋಲನ ಫಲ ನೀಡಿದ್ದು, ಸಂಘದಲ್ಲಿ 81,519 ಕ್ವಿಂಟಾಲ್ ಕಾಳು ಮೆಣಸು ವಿಕ್ರಿಯಾಗಿದೆ. ಹಸಿ ಅಡಕೆ ಸೇರಿ ಈ ವರ್ಷ 1,05,743 ಕ್ವಿಂಟಾಲ್ ಅಡಕೆ ವಹಿವಾಟು ನಡೆದು, ದಾಖಲೆ ನಿರ್ಮಾಣವಾಗಿದೆ ಎಂದು ವಿವರಿಸಿದರು.

ಬನವಾಸಿ ಶಾಖೆಯಲ್ಲಿ 62.06 ಲಕ್ಷ ರೂ., ದಾಸನಕೊಪ್ಪ ಶಾಖೆಯಲ್ಲಿ 51.26 ಲಕ್ಷ ರೂ. ಲಾಭ, ಸೂಪರ್ ಮಾರುಕಟ್ಟೆಯಲ್ಲಿ 4.53 ಲಕ್ಷ ರೂ. ನಿಕ್ಕಿ ಲಾಭವಾಗಿದೆ. ಸೂಪರ್ ಮಾರುಕಟ್ಟೆಯ ವ್ಯವಹಾರ ವಿಸ್ತರಿಸುವ ಉದ್ದೇಶ ಹೊಂದಿದ್ದೇವೆ. ಈ ಬಾರಿ 1 ಲಕ್ಷಕ್ಕೂ ಅಧಿಕ ಬೆಳೆ ವಹಿವಾಟು ಆಗಿದ್ದರಿಂದ ಸದಸ್ಯರಿಗೆ ಹೆಚ್ಚಿನ ಪ್ರೋತ್ಸಾಹದ ರಿಬೇಟ್ ನೀಡಲೂ ಚಿಂತಿಸಿದ್ದೇವೆ ಎಂದು ತಿಳಿಸಿದ್ದಾರೆ.

ಸರ್ವಸದಸ್ಯರ ಸಭೆ 9ರಂದು

ಶಿರಸಿ ಟಿಎಂಎಸ್ ಸರ್ವ ಸದಸ್ಯರ ಸಭೆ ಸೆ. 9ರಂದು ಮಧ್ಯಾಹ್ನ 3ಕ್ಕೆ ನಡೆಯಲಿದ್ದು, ಸಭೆಯ ಬಳಿಕ ನೂತನ ಶಾಸಕ ಭೀಮಣ್ಣ ನಾಯ್ಕ ಹಾಗೂ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಅವರಿಗೆ ಸನ್ಮಾನ ಆಯೋಜಿಸಲಾಗಿದೆ. ಸಂಜೆ 6.15ಕ್ಕೆ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಕಾರ್ತವೀರ್ಯಾರ್ಜುನ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಹಿಮ್ಮೇಳದಲ್ಲಿ ರಾಮಕೃಷ್ಣ ಹೆಗಡೆ ಹಿಲ್ಲೂರು, ಅನಿರುದ್ಧ ಹೆಗಡೆ, ಪ್ರಸನ್ನ ಭಟ್ಟ, ಮುಮ್ಮೇಳದಲ್ಲಿ ಕೊಂಡದಕುಳಿ, ತೋಟಿಮನೆ, ನೀಲ್ಕೋಡ್, ಚಪ್ಪರಮನೆ, ಕುಂಕಿಪಾಲ, ಹುಳ್ಸೆಮಕ್ಕಿ ಪಾಲ್ಗೊಳ್ಳಲಿದ್ದಾರೆ ಎಂದು ಟಿಎಂಎಸ್ ಮುಖ್ಯ ಕಾರ್ಯನಿರ್ವಾಹಕ ಎಂ.ಎ. ಹೆಗಡೆ ತಿಳಿಸಿದ್ದಾರೆ.

ಉಪ ಬೆಳೆಗಳಿಗೆ ರೈತರು ಮೊದಲ ಮಣೆ ಹಾಕಬೇಕಿದೆ. ಕಾಳು ಮೆಣಸು ಜತೆ ಕಾಫಿ ಬೆಳೆಯಬಹುದಾಗಿದೆ. ಎಲೆಚುಕ್ಕೆ ರೋಗದ ತೀವ್ರತೆ ಮನದಲ್ಲಿ ಇಟ್ಟುಕೊಂಡು ಒಂದು ನಿಧಿ ಸ್ಥಾಪಿಸುವ ಚಿಂತನೆ ನಡೆಸಿದ್ದೇವೆ.> ಜಿ.ಎಂ. ಹೆಗಡೆ ಹುಳಗೋಳ, ಅಧ್ಯಕ್ಷರು ಟಿಎಂಎಸ್ ಶಿರಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net