

ಬೆಳಗಾವಿ: ನರೇಗಾ ಯೋಜನೆಯಡಿ ಸರ್ಕಾರಿ ಶಾಲೆ, ಅಂಗನವಾಡಿ, ಗ್ರಾಪಂ ಕಟ್ಟಡಗಳಿಗೆ ಮಳೆ ನೀರು ಕೊಯ್ಲು (ರೈನ್ ವಾಟರ್ ಹಾರ್ವೆಸ್ಟಿಂಗ್) ಅಳವಡಿಕೆಗೆ ಬೆಳಗಾವಿ ಜಿಲ್ಲಾ ಪಂಚಾಯಿತಿ ಮುಂದಾಗಿದೆ. ರಾಜ್ಯದಲ್ಲಿಯೇ ಇದು ಪ್ರಥಮ ಪ್ರಯತ್ನವಾಗಿದ್ದು, ಮೇ 1ರಿಂದಲೇ ಕಾರ್ಯ ಆರಂಭವಾಗಲಿದೆ.
ನೀರು ಸಂಗ್ರಹಿಸಲು ಸಹಾಯಕ: ಮಳೆ ನೀರು ಸಂಗ್ರಹಿಸುವ, ಅಂತರ್ಜಲದ ಮಟ್ಟ ಹೆಚ್ಚಿಸುವ ಮತ್ತು ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವುದು ಮತ್ತು ಮಳೆ ನೀರಿನ ಮಹತ್ವ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಯೋಜನೆ ಸಹಾಯಕವಾಗಲಿದೆ. ನರೇಗಾ ಯೋಜನೆಯಡಿ ಸರ್ಕಾರಿ ಶಾಲೆ, ಅಂಗನವಾಡಿ, ಗ್ರಾಪಂ ಕಟ್ಟಡಗಳಿಗೆ ಮಳೆ ನೀರು ಕೊಯ್ಲು ಅಳವಡಿಸಲು ಜಿಪಂ ನಿರ್ಧರಿಸಿದೆ. ಅಲ್ಲದೆ ಹೊಸ ಕಟ್ಟಡಗಳಿಗೆ ಪರವಾನಗಿ ನೀಡುವ ವೇಳೆ ಮಳೆ ನೀರು ಕೊಯ್ಲು ಕಡ್ಡಾಯಗೊಳಿಸುವ ಕ್ರಮಕ್ಕೆ ಸಜ್ಜಾಗಿದೆ.
43 ಇಲಾಖೆಗಳ ವ್ಯಾಪ್ತಿ: ಸರ್ಕಾರಿ ಶಾಲೆ, ಅಂಗನವಾಡಿ, ಗ್ರಾಪಂ ಕಟ್ಟಡಗಳು, ನೀರಾವರಿ, ಸಣ್ಣ ನೀರಾವರಿ, ಕೃಷಿ, ತೋಟಗಾರಿಕೆ, ಕಂದಾಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಲೋಕೋಪಯೋಗಿ ಇಲಾಖೆ, ನಗರಸಭೆ, ಪುರಸಭೆ ಸೇರಿ ಒಟ್ಟು 43 ಇಲಾಖೆಗಳ ವ್ಯಾಪ್ತಿಯಲ್ಲಿ ಸುಮಾರು 8560 ಸರ್ಕಾರಿ ಸ್ವಂತ ಕಟ್ಟಡಗಳಿವೆ. ಆದರೆ, ಶೇ.80ರಷ್ಟು ಕಟ್ಟಡಗಳಿಗೆ ಮಳೆ ನೀರು ಕೊಯ್ಲು ಅಳವಡಿಕೆ ಇಲ್ಲ. ಹಾಗಾಗಿ ನರೇಗಾ ಯೋಜನೆಯಡಿ ಮಳೆ ನೀರು ಕೊಯ್ಲು ಪದ್ಧತಿ ಅನುಷ್ಠಾನಕ್ಕೆ ಸರ್ಕಾರ ಮುಂದಾಗಿದೆ.
ಅನುಷ್ಠಾನವಾಗದ ಕಡ್ಡಾಯ ನಿಯಮ: ಬೆಳಗಾವಿ ಮಹಾನಗರ ಪಾಲಿಕೆ ಸೇರಿ 34 ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಹೊಸದಾಗಿ ನಿರ್ಮಾಣವಾಗುವ ಮನೆ ಮತ್ತು ವಾಣಿಜ್ಯ ಕಟ್ಟಡ, ಬಹುಮಹಡಿ ಕಟ್ಟಡಗಳಿಗೆ ಪರವಾನಗಿ ನೀಡುವ ವೇಳೆ ಮಳೆ ನೀರು ಕೊಯ್ಲು ಅಳವಡಿಕೆ ಕಡ್ಡಾಯ ಎಂಬ ನಿಯಮಿದೆ. ಆದರೆ, ಸಮಪರ್ಕವಾಗಿ ಕಾರ್ಯರೂಪಕ್ಕೆ ಬಂದಿಲ್ಲ. ಇದೀಗ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಜಲಶಕ್ತಿ ಯೋಜನೆಯಡಿ ಮಳೆ ನೀರು ಸಂಗ್ರಹಹಿಸುವ ನಿಟ್ಟಿನಲ್ಲಿ ವಿಶೇಷ ಯೋಜನೆಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಅಲ್ಲದೆ ನರೇಗಾ ಯೋಜನೆಯಡಿ ಮಳೆ ನೀರು ಕೊಯ್ಲಿಗೆ ಮೊದಲ ಆದ್ಯತೆ ನೀಡುವಂತೆ ಸೂಚಿಸಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್, ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಮುಂಗಾರು ಹಂಗಾಮಿನ ಸಮಯದಲ್ಲಿ ಸುರಿಯುವ ಅಧಿಕ ಪ್ರಮಾಣ ಮಳೆಯ ನೀರು ಸಂಗ್ರಹಿಸಲು ಕಟ್ಟಡಗಳಿಗೆ ಮಳೆ ನೀರು ಕೊಯ್ಲು ಅಳವಡಿಕೆ ಮಾಡುವುದರಿಂದ ಬೆಳಗಾವಿ ಜಿಲ್ಲಾದ್ಯಂತ ಸುಮಾರು 2 ಟಿಎಂಸಿವರೆಗೆ ನೀರು ಸಂಗ್ರಹಿಸಬಹುದು. ಈ ನೀರನ್ನು ಬೇಸಿಗೆ ಸಮಯದಲ್ಲಿ ಬಳಕೆ ಮಾಡಿಕೊಳ್ಳಬಹುದು ಎಂದು ಹಾಗೂ ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಸಂಗ್ರಹವಾದ ನೀರು ಮರುಬಳಕೆಗೆ ಅವಕಾಶ: ಸರ್ಕಾರವು 2020-21ನೇ ಸಾಲಿನಲ್ಲಿ ನರೇಗಾ ಯೋಜನೆಯಡಿ ಕೈಗೊಳ್ಳುವ ಕಾಮಗಾರಿಗಳಲ್ಲಿ ಮಳೆ ನೀರು ಕೊಯ್ಲು ಅಳವಡಿಕೆಗೆ ಮೊದಲ ಆದ್ಯತೆ ನೀಡುತ್ತಿದೆ. ಮಳೆ ನೀರು ಕೊಯ್ಲು ಖರ್ಚಿಲ್ಲದೆ ಸರಳ ವಿಧಾನವಾಗಿದ್ದು, ಕಟ್ಟಡ ಪಕ್ಕದಲ್ಲಿ ನೆಲ ಅಗೆದು ಮಳೆ ನೀರು ಕೊಯ್ಲು ಆರಂಭಿಸಿದರೆ, ಸಣ್ಣ-ಪುಟ್ಟ ನಿರ್ವಹಣೆಗಳ ಹೊರತಾಗಿ ಬೇರೆ ಖರ್ಚು ಇರುವುದಿಲ್ಲ. ಮಳೆ ನೀರು ಚರಂಡಿಗೆ ಹರಿದು ಹೋಗದೆ ಸಂಗ್ರಹವಾಗುತ್ತದೆ. ಅವಶ್ಯ ಬಿದ್ದಾಗ ಬಳಕೆ ಮಾಡಿಕೊಳ್ಳಬಹುದು ಜಿಪಂ ಅಧಿಕಾರಿಗಳು ತಿಳಿಸಿದ್ದಾರೆ.
ಸರ್ಕಾರಿ ಶಾಲೆ, ಅಂಗನವಾಡಿ ಹಾಗೂ ಗ್ರಾಮ ಪಂಚಾಯಿತಿ ಕಟ್ಟಡ, ಸಮುದಾಯ ಭವನ ಸೇರಿ ಇನ್ನಿತರ ಸರ್ಕಾರಿ ಕಟ್ಟಡಗಳಿಗೆ ನರೇಗಾ ಯೋಜನೆಯಡಿ ಮಳೆ ನೀರು ಕೊಯ್ಲು ಅಳವಡಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಮೇ 1ರಿಂದಲೇ ಕಾರ್ಯಾರಂಭ ಮಾಡಲು ನಿರ್ಧರಿಸಲಾಗಿದೆ. ಈಗಾಗಲೇ ಗ್ರಾಪಂ ಹಾಗೂ ತಾಪಂಗಳಿಗೆ ಸೂಚನೆ ನೀಡಲಾಗಿದೆ. |ಡಾ.ಕೆ.ವಿ.ರಾಜೇಂದ್ರ ಜಿಪಂ ಸಿಇಒ, ಬೆಳಗಾವಿ
| ಮಂಜುನಾಥ ಕೋಳಿಗುಡ್ಡ