

ಚಿತ್ರದುರ್ಗ: ಕೋಟೆನಗರಿಯ ನಗರಸಭಾ ಕೌನ್ಸಿಲ್ ಸಭಾಂಗಣದಲ್ಲಿ ಮಂಗಳವಾರ ನಡೆದ ಅಧಿವೇಶನದಲ್ಲಿ 1.02 ಕೋಟಿ ರೂ. ಉಳಿತಾಯ ಅಂಗೀಕರಿಸುವ ಮೂಲಕ ಅಧ್ಯಕ್ಷೆ ಬಿ.ಎನ್. ಸುಮಿತಾ ಪ್ರಸಕ್ತ ಸಾಲಿನ ಬಜೆಟ್ ಮಂಡಿಸಿದರು.
ಈ ಬಜೆಟ್ ಮೂಲಕ ನಗರ ವ್ಯಾಪ್ತಿಯ ವಿವಿಧ ವಾರ್ಡ್‌ಗಳಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರು ಪೂರೈಸಲು 11.25 ಕೋಟಿ ರೂ., ನೂತನ ಮಾರುಕಟ್ಟೆ ಸಂಕೀರ್ಣ ಕಟ್ಟಲು 2.5 ಕೋಟಿ ರೂ., ಒಳಚರಂಡಿಗಳ ಪ್ರಗತಿಗೆ 3 ಕೋಟಿ ರೂ., ಶೌಚಗೃಹಗಳ ನಿರ್ಮಾಣ, ಸ್ಮಶಾನಗಳ ಅಭಿವೃದ್ಧಿ, ಘನತ್ಯಾಜ್ಯ ನಿರ್ವಹಣೆ, ಆಧುನಿಕ ವಧಾಗಾರ ನಿರ್ಮಾಣಕ್ಕೆ 20ಕೋಟಿ ರೂ. ಬಜೆಟ್‌ನಲ್ಲಿ ಮೀಸಲಿಡಲಾಗಿದೆ.
ನೂತನ ವಿದ್ಯುತ್ ಕಂಬಗಳು, ಎಲ್‌ಇಡಿ ಬೀದಿ ದೀಪಗಳ ಅಳವಡಿಕೆಗೆ 4 ಕೋಟಿ ರೂ., ಹಾಳಾದ ರಸ್ತೆಗಳು, ಚರಂಡಿಗಳ ಅಭಿವೃದ್ಧಿಗೆ 10 ಕೋಟಿ ರೂ., ಆಧುನಿಕ ನಾಮಫಲಕ ಅಳವಡಿಸಲು 2 ಕೋಟಿ ರೂ., ಸಾರ್ವಜನಿಕ ಉದ್ಯಾನಗಳ ಪ್ರಗತಿ, ಮುಖ್ಯ ರಸ್ತೆಗಳಲ್ಲಿ ಹಸಿರೀಕರಣಕ್ಕಾಗಿ 3 ಕೋಟಿ ರೂ. ಮೀಸಲಿರಿಸಲು ತೀರ್ಮಾನಿಸಲಾಗಿದೆ.
ಸ್ವಯಂ ಘೋಷಿತ ಆಸ್ತಿ ತೆರಿಗೆ 18 ಕೋಟಿ ರೂ., ನಲ್ಲಿ ಕಂದಾಯ 3.5 ಕೋಟಿ ರೂ., ಕಟ್ಟಡ ಪರವಾನಗಿ 1.1 ಕೋಟಿ ರೂ., ವಾಣಿಜ್ಯ ಸಂಕೀರ್ಣಗಳ ಬಾಡಿಗೆ 80 ಲಕ್ಷ ರೂ., ವಾರ್ಷಿಕ ಹರಾಜು 70 ಲಕ್ಷ ರೂ., ಖಾತೆ ಬದಲಾವಣೆ, ಪ್ರೊರೇಟಾ ಶುಲ್ಕ ತಲಾ 50 ಲಕ್ಷ ರೂ., ಉದ್ಯಮ ಪರವಾನಗಿ ಶುಲ್ಕ 35 ಲಕ್ಷ ರೂ., ನೀರಿನ ಸಂಪರ್ಕ ಶುಲ್ಕ 30 ಲಕ್ಷ ರೂ., ರಸ್ತೆ ಅಗೆಯುವ ಶುಲ್ಕ 25 ಲಕ್ಷ ರೂ., ಕರಗಳ ವಸೂಲಾತಿ 20 ಲಕ್ಷ ರೂ. ಸೇರಿ ಒಟ್ಟು 28.55 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದೆ.
ಅಲ್ಲದೆ, ಸರ್ಕಾದಿಂದ 15ನೇ ಹಣಕಾಸು, ಎಸ್‌ಎಫ್‌ಸಿ, ಎಸ್ ಡಬ್ಲ್ಯುಎಂ ಸೇರಿ ವಿವಿಧ ಬಾಬ್ತುಗಳಿಂದ 69.75 ಕೋಟಿ ರೂ. ಅನುದಾನ ಬಿಡುಗಡೆಯಾಗುವ ನಿರೀಕ್ಷೆಯೂ ಇದೆ.
ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ನಸರುಲ್ಲಾ, ಪೌರಾಯುಕ್ತೆ ಎಂ. ರೇಣುಕಾ ಇದ್ದರು.