

ಮಡಿಕೇರಿ:
ಓಜಸ್ವಿ ಫೌಂಡೇಶನ್ ಸಹಭಾಗಿತ್ವದಲ್ಲಿ ಗೋಣಿಕೊಪ್ಪಲು ಅತ್ತೂರುವಿನ ನ್ಯಾಶನಲ್ ಅಕಾಡಮಿ ಶಾಲೆ ವಿದ್ಯಾರ್ಥಿಗಳಿಂದ ರೋಬೋಟಿಕ್ಸ್ ವಿಜ್ಞಾನ ಮತ್ತು ತಂತ್ರಜ್ಞಾನ ಕುರಿತ ಪ್ರಾಯೋಗಿಕ ತರಬೇತಿ ಕಾರ್ಯಕ್ರಮ ಅತ್ತೂರುವಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಮಾಲತಿ ಮಾತನಾಡಿ ಮಕ್ಕಳು ಹೊಸ ತಂತ್ರಜ್ಞಾನಗಳನ್ನು ಅರಿತುಕೊಳ್ಳಲು ಮತ್ತು ಸೃಜನಾತ್ಮಕ ಚಿಂತನೆ ಬೆಳೆಸಲು ಇಂಥ ತರಬೇತಿಗಳು ಬಹು ಉಪಯುಕ್ತ. ವಿದ್ಯಾರ್ಥಿಗಳು ಈ ಅವಕಾಶವನ್ನು ಸಂಪೂರ್ಣವಾಗಿ ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಓಜಸ್ವಿ ಫೌಂಡೇಶನ್ ಟ್ರಸ್ಟಿ ಡಾ. ಪಿ.ಸಿ. ಕವಿತಾ ಮಾತನಾಡಿ ಫೌಂಡೇಶನ್ ಉದ್ದೇಶ ಮತ್ತು ರೋಬೋಟಿಕ್ಸ್ ತಂತ್ರಜ್ಞಾನದ ಸಾಮಾಜಿಕ ಪ್ರಾಮುಖ್ಯತೆಯನ್ನು ವಿವರಿಸಿ ಹೇಳಿದರು.
ಗ್ರಾಮೀಣ ಹಾಗೂ ಸರ್ಕಾರಿ ಶಾಲಾ ವಿದ್ಯಾರ್ಥಿಗಳಲ್ಲಿ ಪ್ರೇರಣೆ, ವಿಜ್ಞಾನಾಭಿಮಾನ, ತಾಂತ್ರಿಕ ನೈಪುಣ್ಯ ಬೆಳೆಸುವುದು ಓಜಸ್ವಿ ಫೌಂಡೇಶನ್‌ನ ಪ್ರಮುಖ ಗುರಿಯಾಗಿದೆ ಎಂದರು.
ರೋಬೋಟಿಕ್ ಮಾದರಿ ಬೈಪೆಡ್ ರೋಬೋಟ್‌ನ ಪ್ರಾಯೋಗಿಕ ಅಧಿವೇಶನವನ್ನು ಓಜಸ್ವಿ ಫೌಂಡೇಶನ್‌ನ ಇಂಪಾನಾ ಪ್ರಸ್ತುತಪಡಿಸಿದರು. ನ್ಯಾಶನಲ್ ಅಕಾಡಮಿ ಶಾಲೆಯ ವಿದ್ಯಾರ್ಥಿಗಳು, ಸರ್ಕಾರಿ ಶಾಲಾ ಮಕ್ಕಳಿಗೆ ರೋಬೋಟ್ ಮಾದರಿ ನಿರ್ಮಾಣದಲ್ಲಿ ಸಹಕಾರ ನೀಡಿದರು. ಎಲ್ಲಾ ವಿದ್ಯಾರ್ಥಿಗಳು ಉತ್ಸಾಹಭರಿತವಾಗಿ ಮತ್ತು ಆಸಕ್ತಿಯಿಂದ ಭಾಗವಹಿಸಿದರು.
ನ್ಯಾಶನಲ್ ಅಕಾಡಮಿ ಶಾಲೆಯ ಹಿರಿಯ ಶಿಕ್ಷಕಿ ರೋಜಿ ರಾಣಿ, ಜಿಎಚ್‌ಪಿ ಶಾಲೆಯ ಶಿಕ್ಷಕರು ಈ ಸಂದರ್ಭ ಉಪಸ್ಥಿತರಿದ್ದು ಮಕ್ಕಳನ್ನು ಪ್ರೋತ್ಸಾಹಿಸಿದರು.