ಎಲ್ಲರಿಗೂ ಅಗತ್ಯ ಆರೋಗ್ಯ ಶಿಕ್ಷಣದ ಅರಿವು...

DHO
Published on

ಡಿಎಚ್​ಒ ಡಾ. ಬಸವರಾಜ ಹುಬ್ಬಳ್ಳಿ ಅಭಿಪ್ರಾಯ

ವಿಶ್ವ ಆರೋಗ್ಯ ದಿನಾಚರಣೆ ಉದ್ಘಾಟನೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಪ್ರತಿಯೊಂದರ ಆರಂಭವೂ ಆರೋಗ್ಯಕರವಾಗಿದ್ದಲ್ಲಿ ಭವಿಷ್ಯವೂ ಭರವಸೆಯಿಂದ ಕೂಡಿರುತ್ತದೆ. ಯಾವುದೇ ಕಾಯಿಲೆ ಬಂದ ನಂತರ ಚಿಕಿತ್ಸೆ ಪಡೆಯುವ ಬದಲು ಕಾಯಿಲೆ ಬಾರದಂತೆ ನೋಡಿಕೊಳ್ಳಬೇಕಿದೆ. ಅದಕ್ಕಾಗಿ ಜೀವನ ಶೈಲಿ ಹಾಗೂ ಆಹಾರ ಪದ್ಧತಿ ಕ್ರಮಗಳಿಂದ ಉತ್ತಮ ಆರೋಗ್ಯ ಹೊಂದಲು ಸಾಧ್ಯ. ಜನಸಾಮಾನ್ಯರೂ ಸಹ ಆರೋಗ್ಯ ಶಿಕ್ಷಣದ ಮಾಹಿತಿಯೊಂದಿಗೆ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ

ಡಾ. ಬಸವರಾಜ ಹುಬ್ಬಳ್ಳಿ ಹೇಳಿದರು.

ಉಡುಪಿಯ ಕ್ರಿಶ್ಚಿಯನ್​ ಇಂಗ್ಲಿಷ್​ ಮೀಡಿಯಂ ಸ್ಕೂಲ್​ನಲ್ಲಿ ಜಿಲ್ಲಾ ಆರೋಗ್ಯ ಇಲಾಖೆ, ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾ ಸರ್ವೇಕ್ಷಣಾ ಎನ್​ಸಿಡಿ ಘಟಕ, ಜಿಲ್ಲಾಸ್ಪತ್ರೆ ಎನ್​ಸಿಡಿ ವಿಭಾಗ, ಬಡಗಬೆಟ್ಟು ಕ್ರೆಡಿಟ್​ ಕೋ-ಆಪರೇಟಿವ್​ ಸೊಸೈಟಿ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಭಾಗಿತ್ವದಲ್ಲಿ ಏ.7ರಂದು ಆಯೋಜಿಸಿದ್ದ ಜಿಲ್ಲಾ ಮಟ್ಟದ ವಿಶ್ವ ಆರೋಗ್ಯ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಆರೋಗ್ಯವೇ ಸಂಪತ್ತು

ಬಡಗಬೆಟ್ಟು ಕ್ರೆಡಿಟ್​ ಕೋ-ಆಪರೇಟಿವ್​ ಸೊಸೈಟಿಯ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ, ಇಂದಿನ ಕಾಲಘಟ್ಟದಲ್ಲಿ ಆರ್ಥಿಕ ಸಂಪತ್ತಿಗಿಂತ ಆರೋಗ್ಯವಾಗಿ ಇರುವುದೇ ದೊಡ್ಡ ಸಂಪತ್ತಾಗಿದೆ. ಆರೋಗ್ಯ ಸರಿ ಇದ್ದಲ್ಲಿ ನೆಮ್ಮದಿಯ ಜೀವನ ನಡೆಸಲು ಸಾಧ್ಯ. ಈ ನಿಟ್ಟಿನಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ಆರೋಗ್ಯ ಇಲಾಖೆ ಹಾಗೂ ಇನ್ನಿತರ ಸಂಸ್ಥೆಗಳು ಆಯೋಜಿಸುವ ಆರೋಗ್ಯ ಶಿಬಿರಗಳ ಸದುಪಯೋಗ ಮಾಡಿಕೊಳ್ಳಬೇಕು ಎಂದರು.

ಉಡುಪಿ ತಾಲೂಕು ಆರೋಗ್ಯಾಧಿಕಾರಿ ಡಾ. ವಾಸುದೇವ ಉಪಾಧ್ಯ, ಭಾರತೀಯ ವೈದ್ಯಕೀಯ ಸಂಘ ಉಡುಪಿ ಕರಾವಳಿ ಅಧ್ಯಕ್ಷ ಡಾ. ಸುರೇಶ ಶೆಣೈ, ಮಂಗಳೂರು ಎಜೆ ಆಸ್ಪತ್ರೆಯ ರೇಡಿಯೇಷನ್​ ಅಂಕೋಲಜಿ ವಿಭಾಗ ಮುಖ್ಯಸ್ಥ ಡಾ. ಕಮಲಾಕ್ಷ ಶೆಣೈ, ಬಡಗಬೆಟ್ಟು ಕ್ರೆಡಿಟ್​ ಕೋ-ಆಪರೇಟಿವ್​ ಸೊಸೈಟಿಯ ಸಿಇಒ ರಾಜೇಶ ಶೇರಿಗಾರ, ಶಾಲೆಯ ಮುಖ್ಯೋಪಾಧ್ಯಾಯಿನಿ ಹೆಲೆನ್​, ಪಿಎಸ್​ಐ ಈರಣ್ಣ, ಜಿಲ್ಲಾ ಆಸ್ಪತ್ರೆಯ ಆಪ್ತ ಸಮಾಲೋಚಕ ಮನು ಎಸ್​.ಬಿ. ಇತರರಿದ್ದರು.

ಉಡುಪಿ ಜಿಲ್ಲಾ ಸರ್ಜನ್​ ಡಾ. ಎಚ್​.ಅಶೋಕ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಎನ್​ಸಿಡಿ ಕೋ-ಆರ್ಡಿನೇಟರ್​ ಡಾ. ಅಂಜಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಆರೋಗ್ಯ ಶಿಕ್ಷಣಾಧಿಕಾರಿ ಶಶಿಧರ ಸ್ವಾಗತಿಸಿದರು. ಆರೋಗ್ಯ ನಿರೀಕ್ಷಣಾಧಿಕಾರಿ ಸತೀಶ ರಾವ್​ ನಿರೂಪಿಸಿದರು. ಆರೋಗ್ಯ ಶಿಕ್ಷಣಾಧಿಕಾರಿ ಚಂದ್ರಕಲಾ ವಂದಿಸಿದರು.

ಆರೋಗ್ಯ ಶಿಬಿರ, ನಾಟಕ ಪ್ರದರ್ಶನ

ಕಾರ್ಯಕ್ರಮದ ನಿಮಿತ್ತ ಸಾರ್ವಜನಿಕರಿಗಾಗಿ ರಕ್ತ ಪರೀಕ್ಷೆ, ಹೃದ್ರೋಗ, ಗರ್ಭಕಂಠ ಕ್ಯಾನ್ಸರ್​, ಸ್ತನ ಕ್ಯಾನ್ಸರ್​ ತಪಾಸಣೆ, ಬಾಯಿ ಕ್ಯಾನ್ಸರ್​, ಕಣ್ಣಿನ ಪರೀಕ್ಷೆ ನಡೆಸಲಾಯಿತು. ಜೀವನ ಶೈಲಿ ಮಾರ್ಪಾಡು ಹಾಗೂ ತಂಬಾಕು ದುಷ್ಪರಿಣಾಮಗಳ ಕುರಿತು ಆಪ್ತ ಸಮಾಲೋಚನೆ ನಡೆಯಿತು. ನ್ಯೂಸಿಟಿ ಕಾಲೇಜ್​ ಆಫ್​ ನರ್ಸಿಂಗ್​ ವಿದ್ಯಾರ್ಥಿಗಳಿಂದ ಆರೋಗ್ಯ ಕಾಳಜಿ ಕುರಿತು ಕಿರುನಾಟಕ ಪ್ರದರ್ಶನಗೊಂಡಿತು.

ಚಿಕ್ಕ ಮಕ್ಕಳಿಗೂ ರಕ್ತದೊತ್ತಡ, ಮಧುಮೇಹ ಕಾಯಿಲೆ ಬರತೊಡಗಿದೆ. ಈ ಬಗ್ಗೆ ವಿದ್ಯಾರ್ಥಿಗಳು ಮಾಹಿತಿ ಹೊಂದುವ ಮೂಲಕ ಪಾಲಕರಿಗೆ ಹಾಗೂ ಸುತ್ತಮುತ್ತಲಿನ ಜನರಿಗೆ ಅರಿವು ಮೂಡಿಸಬೇಕು. ಅವರುಗಳು ಆರೋಗ್ಯ ತಪಾಸಣೆ ಮಾಡಿಸಿಕೊಂಡು ಪೂರಕ ದೈಹಿಕ ಚಟುವಟಿಕೆ, ಸಮತೋಲಿತ ಆಹಾರ ತೆಗೆದುಕೊಳ್ಳುತ್ತಾರೆ. ಅದರಿಂದ ಆರೋಗ್ಯವಂತ ಸಮಾಜ ನಿಮಾರ್ಣವಾಗುತ್ತದೆ. | ಡಾ. ವಾಸುದೇವ. ಜಿಲ್ಲಾ ಆಸ್ಪತ್ರೆಯ ನಿವಾಸಿ ವೈದ್ಯಾಧಿಕಾರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net