ಮಾನವ ಕಳ್ಳ ಸಾಗಣೆ ತಡೆಗೆ ಕೈಜೋಡಿಸೋಣ: ನ್ಯಾ. ಶರ್ಮಿಳಾ

UDP-19-1-Training
Published on

ಉಡುಪಿ: ವಂಚಕರ ಮೋಸ ಅರಿಯದೆ ಮಹಿಳೆಯರು ಮತ್ತು ಮಕ್ಕಳು ಕಳ್ಳಸಾಗಣೆಗೆ ಗುರಿಯಾಗುತ್ತಿದ್ದಾರೆ. ರಕ್ಷಣೆಗಾಗಿ ಕಾನೂನು ಇದ್ದರೂ ದುರುಪಯೋಗ ಆಗುತ್ತಲಿದ್ದು, ಇಂತಹ ಕುಕೃತ್ಯ ತಡೆಯಲು ಅಧಿಕಾರಿಗಳ ಜತೆ ಕೈಜೋಡಿಸೋಣ ಎಂದು ಜಿಲ್ಲಾ ಹಿರಿಯ ಸಿವಿಲ್​ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಎಸ್​. ಹೇಳಿದರು.

ಉಡುಪಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಶ್ರಯದಲ್ಲಿ ಬ್ರಹ್ಮಗಿರಿಯ ಜಿಲ್ಲಾ ಬಾಲಭವನದಲ್ಲಿ ಸೋಮವಾರ ಆಯೋಜಿಸಿದ್ದ ಮಹಿಳೆಯರು ಮತ್ತು ಮಕ್ಕಳ ಅನೈತಿಕ ಸಾಗಣೆ ತಡೆಗಟ್ಟುವ ಕುರಿತು ಜಿಲ್ಲಾ ಹಾಗೂ ತಾಲೂಕು ಮಟ್ಟದ ವಿವಿಧ ಇಲಾಖೆಯ ಭಾಗೀದಾರರು ಮತ್ತು ಕಾವಲು ಸಮಿತಿಯ ಸದಸ್ಯರ ಜಿಲ್ಲಾ ಮಟ್ಟದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

*ವೇಶ್ಯಾವಾಟಿಕೆಗೆ ಬಲಿ: ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶ್ಯಾಮಲಾ ಸಿ.ಕೆ. ಮಾತನಾಡಿ, ದೇಶದಲ್ಲಿ ಇತ್ತೀಚೆಗೆ ಯುವತಿಯರನ್ನು ಅಪಹರಿಸಿ, ದೊಡ್ಡ ನಗರಗಳಲ್ಲಿ ವೇಶ್ಯಾವಾಟಿಕೆಯಂತಹ ಅನಿಷ್ಟ ಕೂಪಕ್ಕೆ ತಳ್ಳಲಾಗುತ್ತಿದೆ ಎಂದರು.

ತಿಂಗಳಿಗೆ 3 ಲಕ್ಷ ನಾಪತ್ತೆ ಪ್ರಕರಣ
ವಕೀಲ ಹಾಗೂ ಉಪ ಕಾನೂನು ನೆರವು ಅಭಿರಕ್ಷಕ ಶ್ರೀನಿವಾಸ ಉಪಾಧ್ಯ, ಮಾನವ ಕಳ್ಳಸಾಗಣೆ ಕುರಿತಂತೆ ಉಪನ್ಯಾಸ ನೀಡಿ, ದೇಶದಲ್ಲಿ ಪ್ರತಿ ತಿಂಗಳು 3 ಲಕ್ಷ ಜನರ ನಾಪತ್ತೆ ಪ್ರಕರಣ ದಾಖಲಾಗುತ್ತಿವೆ. ಆದರೆ, ನಾಪತ್ತೆಯಾದವರೆಲ್ಲ ಏನಾದರೂ ಎನ್ನುವುದು ಕೊನೆಗೂ ಪತ್ತೆಯಾಗುವುದೇ ಇಲ್ಲ. ಮುಂಬಯಿ, ಕೋಲ್ಕತ್ತ, ಪಶ್ಚಿಮ ಬಂಗಾಲದಲ್ಲಿ ಮಾನವ ಕಳ್ಳಸಾಗಣೆ ಪ್ರಮಾಣ ಹೆಚ್ಚಿದೆ. ಗುಜರಾತ್​, ಒಡಿಶಾ, ಅಸ್ಸಾಂನಂತಹ ರಾಜ್ಯಗಳ ಅಕ್ಕಿ ಮಿಲ್​ಗಳಲ್ಲಿ ಕೆಲಸ ಮಾಡಲು ಕದ್ದು ತಂದ ಮಕ್ಕಳನ್ನು ಬಳಸಿಕೊಳ್ಳಲಾಗುತ್ತದೆ ಎಂಬ ಮಾಹಿತಿಯಿದೆ. ದೇಶ&ವಿದೇಶಗಳ ಪ್ರವಾಸಿಗರನ್ನು ರಂಜಿಸಲು ಕಳ್ಳ ಸಾಗಣೆ ಮೂಲಕ ತಂದ ಯುವತಿ&ಮಹಿಳೆಯರನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ನೇಟಿವ್​ ಆರ್ಗನೈಸೇಷನ್​ನ ಮುಖ್ಯಸ್ಥ ಪ್ರೇಮಾನಂದ ಕಲ್ಮಾಡಿ ಉಪಸ್ಥಿತರಿದ್ದರು. ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಧಿಕಾರಿ ವೀಣಾ ವಿವೇಕಾನಂದ ಸ್ವಾಗತಿಸಿದರು. ಜೆಂಡರ್​ ಸ್ಪೆಷಲಿಸ್ಟ್​ ದೀಪಾ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net