

ವಿಜಯವಾಣಿ ಸುದ್ದಿಜಾಲ ಉಡುಪಿ
ಪ್ರತಿಯೊಬ್ಬರಲ್ಲೂ ದೇಶಪ್ರೇಮ ಜಾಗೃತವಾಗಿರಬೇಕು. ಅದರಲ್ಲೂ ಯುವ ಮನಸ್ಸುಗಳಲ್ಲಿ ದೇಶಪ್ರೇಮ ತುಂಬಿರಲೇಬೇಕು. ಆ ನಿಟ್ಟಿನಲ್ಲಿ ನಿರಂತರ ಕಾರ್ಯಕ್ರಮ ನಡೆಯುತ್ತಿರಬೇಕು. ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ದೇಶಪ್ರೇಮದ ಅರಿವು ಮೂಡಿಸಲು ರೇಡಿಯೋ ಮಣಿಪಾಲ್ ವತಿಯಿಂದ ಆಯೋಜಿಸಿರುವ ದೇಶಭಕ್ತಿ ಗೀತೆ ಸಮೂಹ ಗಾಯನ ಸ್ಪರ್ಧಾ ಕಾರ್ಯಕ್ರಮ ಅರ್ಥಪೂರ್ಣವಾಗಿದೆ ಎಂದು ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್, ಸಹಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ ಹೇಳಿದರು.
ಮಣಿಪಾಲದಲ್ಲಿರುವ ರೇಡಿಯೋ ಮಣಿಪಾಲ್ ಸಮುದಾಯ ಬಾನುಲಿ ಕೇಂದ್ರದಲ್ಲಿ ಸ್ವಾತಂತ್ರ್ಯೋತ್ಸವದ ನಿಮಿತ್ತ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಉಡುಪಿ ಜಿಲ್ಲಾ ಮಟ್ಟದ ದೇಶಭಕ್ತಿ ಗೀತೆ ಸಮೂಹ ಗಾಯನ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.
ಉಡುಪಿ ಜಿಲ್ಲೆಯ ಹದಿನಾಲ್ಕು ಪ್ರೌಢಶಾಲೆಯ ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಸಾಗರ ವಿದ್ಯಾಮಂದಿರ ಹೈಸ್ಕೂಲ್ ಪಡುಬಿದ್ರಿ (ಪ್ರಥಮ), ಟಿ.ಎ. ಪೈ ಆಂಗ್ಲಮಾಧ್ಯಮ ಶಾಲೆ ಕುಂಜಿಬೆಟ್ಟು (ದ್ವಿತೀಯ), ಮಾಧವ ಕೃಪಾ ಆಂಗ್ಲ ಮಾಧ್ಯಮ ಶಾಲೆ ಮಣಿಪಾಲ (ತೃತೀಯ), ಮಿಲಾಗ್ರಿಸ್ ಪ್ರೌಢಶಾಲೆ ಕಲ್ಯಾಣಪುರ ಮತ್ತು ಸೈಂಟ್ ಮೇರಿಸ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಕನ್ನರ್ಪಾಡಿ ವಿದ್ಯಾರ್ಥಿಗಳು ಸಮಾಧಾನಕರ ಬಹುಮಾನ ಪಡೆದರು. ತೀರ್ಪುಗಾರರಾಗಿ ಉಡುಪಿ ಜಿಲ್ಲಾ ಸಂಗೀತ ಕಲಾವಿದರ ಒಕ್ಕೂಟದ ಅಧ್ಯಕ್ಷೆ ಮುಕ್ತಾ ಎಸ್. ಭಟ್ ಕೊಡವೂರು ಮತ್ತು ಸಂಗೀತ ಶಿಕ್ಷಕಿ ಸ್ವಪ್ನಾ ರಾಜ್ ಚಿಟ್ಪಾಡಿ ಪಾಲ್ಗೊಂಡಿದ್ದರು.
ಮಣಿಪಾಲ ಸಮುದಾಯ ಬಾನುಲಿ ಕೇಂದ್ರದ ವತಿಯಿಂದ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕದ ಸಹಯೋಗದಲ್ಲಿ ಕಟಪಾಡಿಯ ಕಾರುಣ್ಯ ಆಶ್ರಯಧಾಮಕ್ಕೆ ರೇಡಿಯೊ ಸೆಟ್ ವಿತರಿಸಲಾಯಿತು. ಘಟಕದ ಅಧ್ಯಕ್ಷ ರವಿರಾಜ ಎಚ್.ಪಿ., ಜನಾರ್ದನ ಕೊಡವೂರು, ಸತೀಶ ಕೊಡವೂರು ಉಪಸ್ಥಿತರಿದ್ದರು.
ಎಂಐಸಿ ಸಂಸ್ಥೆಯ ನಿರ್ದೇಶಕಿ ಡಾ. ಶುಭಾ ಎಚ್.ಎಸ್. ಸ್ವಾಗತಿಸಿದರು. ಬಾನುಲಿ ಕೇಂದ್ರದ ಸಹಾಯಕ ಪ್ರಾಧ್ಯಾಪಕಿ ಡಾ. ರಶ್ಮಿ ಅಮ್ಮೆಂಬಳ ವಂದಿಸಿದರು. ಸ್ನೇಹಾ ವಿ. ಪೈ ಕಾರ್ಯಕ್ರಮ ನಿರೂಪಿಸಿದರು.