

ಕೊಪ್ಪಳ: ಕೆಆರ್ಪಿಪಿ ಕೂಗು ದಿಲ್ಲಿವರೆಗೆ ತಲುಪಿಸುವ ವರೆಗೆ ವಿಶ್ರಮಿಸುವುದಿಲ್ಲ ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು.
ನಗರದಲ್ಲಿ ಗುರುವಾರ ಕಾರ್ಯಕರ್ತರೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡು ಬಳಿಕ ಮಾತನಾಡಿದರು.
ನಾನು ಪಕ್ಷ ಕಟ್ಟಿದಾಗ ವಿಧಾನಸಭೆ ಚುನಾವಣೆಗೆ ಮೂರ ತಿಂಗಳು ಬಾಕಿ ಇತ್ತು. ನಾನು ಎಲ್ಲಿ ಸ್ಪರ್ಧಿಸುವೆ ಎಂದು ಎಲ್ಲರಿಗೂ ಭಯ ಶುರುವಾಗಿತ್ತು. ಆದರೆ, ನಾನು ಗಂಗಾವತಿ ಕ್ಷೇತ್ರ ಆಯ್ಕೆ ಮಾಡಿಕೊಂಡೆ. ವ್ಯಾಪಾರ ಕಾರಣ ಮೊದಲಿನಿಂದಲೂ ಈ ಭಾಗದೊಂದಿಗೆ ನನ್ನ ಸಂಪರ್ಕ ಇದೆ. ಜಿಲ್ಲಾ ಕೇಂದ್ರ ಕೊಪ್ಪಳ ಜಿಲ್ಲೆ ಆದಾಗಿನಿಂದ ಹಾಗೇ ಇದೆ. ಅಭಿವೃದ್ಧಿ ಆಗಿಲ್ಲ. ಯುವಕರಿಗೆ ಕೆಲಸ ಇಲ್ಲ. ಕಾರ್ಖಾನೆಯಲ್ಲಿ ಸ್ಥಳಿಯರಿಗೆ ಉದ್ಯೋಗ ದೊರೆಯುತ್ತಿಲ್ಲ. ನೀಡದಿದ್ದರೆ ಕಾರ್ಖಾನೆ ನಡೆಯಲು ಬಿಡುವುದಿಲ್ಲ. ಸಂಸದ ಸಂಗಣ್ಣ ಕರಡಿ ಎಂಪಿ ಆಗಿ 10 ವರ್ಷ ಆಗಿದೆ. ಆದರೆ ಏನೂ ಅಭಿವೃದ್ಧಿ ಮಾಡಿಲ್ಲ ಎಂದು ಆರೋಪಿಸಿದರು.
ಅಂಜನಾದ್ರಿ ಅಭಿವೃದ್ಧಿ ಮಾಡಿಲ್ಲ. ಅಯೋಧ್ಯೆಗೆ ರೈಲು ಬಿಡಲು ಮನವಿ ಮಾಡಿದ್ದಾರೆ. ಅವರು ದನಿ ಎತ್ತುವ ಪರಿಸ್ಥಿತಿಯಲ್ಲಿ ಇಲ್ಲ. ಶ್ರೀರಾಮುಲು, ಜನಾರ್ದನರೆಡ್ಡಿಗೆ ಇರುವಷ್ಟು ಧೈರ್ಯ ತಮಗಿಲ್ಲ ಎಂದು ಹೇಳಿದ್ದಾರೆ. ಧೈರ್ಯದಿಂದ ಮಾತನಾಡಿದರೆ ಟಿಕೆಟ್ ಕೊಡುವುದಿಲ್ಲ ಎಂಬ ಭಯ ಇದೆ. ಸಿಎಂ ಸಿದ್ದರಾಮಯ್ಯ ವಿರುದ್ಧ ಶಾಸಕ ರಾವೇಂದ್ರ ಹಿಟ್ನಾಳ್ ದನಿ ಎತ್ತಲು ಸಾಧ್ಯವಾ ? ಅಭಿವೃದ್ಧಿ ಕೆಲಸಗಳಾಗುತ್ತಿಲ್ಲ. ಆದರೂ ಹಿಟ್ನಾಳ್ ಮಾತನಾಡುತ್ತಿಲ್ಲ ಎಂದು ಗಂಭೀರ ಆರೋಪ ಮಾಡಿದರು.
ಕೊಪ್ಪಳ ಲೋಕಸಭೆ ಚುಣಾವಣೆಯಲ್ಲಿ ನಾನು ಏಳು ಕ್ಷೇತ್ರಗಳಲ್ಲಿ ಪ್ರಚಾರ ನಡೆಸುವೆ. ಸಿರಗುಪ್ಪದಲ್ಲಿ ನನ್ನ ಪತ್ನಿ, ಪುತ್ರಿ ಪ್ರಚಾರ ಮಾಡಲಿದ್ದಾರೆ. ಅಂಜನಾದ್ರಿ ಅಭಿವೃದ್ಧಿಗಾಗಿ ನಾನು ಹಲವು ಯೋಜನೆಗಳನ್ನು ಹಾಕಿಕೊಂಡಿದ್ದೇನೆ. ಪ್ರಧಾನಿ ನರೇಂದ್ರ ಮೋದಿ ರಾಮಾಯಣ ಸರ್ಕಿಟ್ ಮಾಡುವುದಾಗಿ ಹೇಳಿದ್ದರು. ಸಂಸದ ಸಂಗಣ್ಣ ಕರಡಿ ಈಬಗ್ಗೆ ಅವರಿಗೆ ನೆನಪು ಮಾಡುವ ಗೋಜಿಗೆ ಹೋಗಿಲ್ಲ. ಕೊಪ್ಪಳದ ದನಿ ದಿಲ್ಲಿಯಲ್ಲಿ ಕೇಳಲು ನೀವೆಲ್ಲ ನಮ್ಮ ಪಕ್ಷಕ್ಕೆ ಆಶೀರ್ವಾದ ಮಾಡಬೇಕು. ಲೋಕಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ 100 ಬಹಿರಂಗ ಸಭೆ ನಡೆಸುವೆ. 15 ಜಿಲ್ಲೆಗಳಲ್ಲಿ ಕೆಆರ್ಪಿಪಿ ಸಂಟನೆ ಬಲಗೊಳಿಸಲಾಗುವುದೆಂದರು.
ಮಾಜಿ ಎಂಎಲ್ಸಿ ಕರಿಯಣ್ಣ ಸಂಗಟಿ, ಕೆಆರ್ಪಿಪಿ ರಾಜ್ಯ ಉಪಾಧ್ಯಕ್ಷ ಮನೋಹರಗೌಡ ಹೇರೂರು, ಜಿಲ್ಲಾಧ್ಯಕ್ಷ ಸಂಗಮೇಶ ಬಾದವಾಡಗಿ, ಭಿಮಾಶಂಕರ್ ಇತರರಿದ್ದರು.