ಕೊಪ್ಪಳ: ದೇವದಾಸಿ ಪದ್ಧತಿ ಸಂಪೂರ್ಣ ನಿಮೂರ್ಲನೆಗೆ ಶಿಕ್ಷಣ ಅಗತ್ಯ. ನಿಮಗೆ ಸಾಧ್ಯವಾದರೆ ಮಕ್ಕಳನ್ನು ಓದಿಸಿ ಇಲ್ಲದಿದ್ದರೇ ಸರ್ಕಾರ ನಡೆಸುವ ವಸತಿ ಶಾಲೆಗಳಿಗೆ ಸೇರಿಸಿ ಶಿಕ್ಷಣ ಕೊಡಿಸಿ. ಅಂದಾಗ ಮಾತ್ರ ಈ ಸಮಾಜಕ್ಕೆ ಅಂಟಿಕೊಂಡಿರುವ ಅನಿಷ್ಠ ಪದ್ಧತಿ ಹೋಗಲಾಡಿಸಲು ಸಾಧ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಮಹಾಂತೇಶ ಸಂಗಪ್ಪ ದರಗದ ಹೇಳಿದರು.

ತಾಲೂಕಿನ ಶಿವಪುರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಮಾಜಿ ದೇವದಾಸಿಯರಿಗೆ ಹಮ್ಮಿಕೊಂಡಿದ್ದ ಕಾನೂನು ಅರಿವು ನೇರವು ಕಾರ್ಯಕ್ರಮ ಉದ್ಧಾಟಿಸಿ ಮಾತನಾಡಿದರು.
ನೀವೆಲ್ಲ ನಿಮ್ಮ ಮಕ್ಕಳನ್ನು ಶಿಕ್ಷಣವಂತರನ್ನಾಗಿಸಿದರೆ ಸರ್ಕಾರಿ ಸೌಲಭ್ಯ ಪಡೆಯಲು ಬೇರೆಯವರನ್ನು ಕೇಳುವ ಅಗತ್ಯವಿಲ್ಲ. ಶಿಕ್ಷಣದಿಂದ ಸುಂದರ ಬದುಕು ಕಟ್ಟಿಕೊಳ್ಳಲು ಸಾಧ್ಯ. ನಿಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ನೀಡಿ. ಅವರು ನಿಮ್ಮನ್ನು ಯಾರ ಮುಂದೆಯೂ ತಲೆ ಭಾಗದಂತೆ ನೋಡಿಕೊಳ್ಳುತ್ತಾರೆ ಎಂದರು.
ಉಪನ್ಯಾಸಕ ರವಿಚಂದ್ರ ಆರ್. ಮಾಟಲದಿನ್ನಿ ಮಾತನಾಡಿ, ದೇವದಾಸಿ ಪದ್ಧತಿ ನಿಷೇಧ ಮಾಡಿ 43 ವರ್ಷವಾದರು ನಾವು ಇನ್ನು ಈ ಪದ್ಧತಿ ಬಗ್ಗೆ ಮಾತನಾಡುತ್ತಿದ್ದೇವೆ. ಇಂತಹ ಅನಿಷ್ಠ ಪದ್ಧತಿಗೆ ಹೆಣ್ಣು ಮಕ್ಕಳನ್ನು ದೂಡಿದಲ್ಲಿ 2 ರಿಂದ 5 ವರ್ಷ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ. ಅನಿಷ್ಠ ಪದ್ಧತಿಯನ್ನು ಬೇರು ಸಮೇತ ಕಿತ್ತೊಗೆಯಬೇಕು ಎಂದು ಹೇಳಿದರು.
ವಕೀಲರಾದ ಕೆ.ಎಸ್.ಮೈಲಾರಪ್ಪ, ಕೆ.ಎಂ.ಶಿವಪುರ, ಗ್ರಾಪಂ ಉಪಾಧ್ಯಕ್ಷ ವೆಂಕಟೇಶ ಎನ್.ಚನ್ನದಾಸರ ಮಾತನಾಡಿದರು. ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಿವರಶರಣಪ್ಪ ಗದ್ದಿ ಇಲಾಖೆ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ದೇವದಾಸಿ ಪುನರ್ವಸತಿ ಯೋಜನಾಧಿಕಾರಿ ಪೂರ್ಣಿಮಾ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಖಿ ಒನ್ ಸ್ಟಾಪ್ ಸೆಂಟರ್ ಆಡಳಿತಾಧಿಕಾರಿ ಯಮುನಾ ಬೆಸ್ತರ ನೊಂದ ಮಹಿಳೆಯರಿಗೆ ನ್ಯಾಯ ಕೊಡಿಸುವಲ್ಲಿ ಇಲಾಖೆ ಪ್ರಯತ್ನದ ಬಗೆಗಿನ ಪೋಸ್ಟರ್ ಬಿಡುಗಡೆ ಮಾಡಿದರು. ಗ್ರಾಪಂ ಅಧ್ಯಕ್ಷ ಚಲಸಾನಿ ರವಿಕುಮಾರ ಅಧ್ಯಕ್ಷತೆವಹಿಸಿದ್ದರು.
ಪಿಡಿಒ ವಾಗೇಶ, ಗ್ರಾಪಂ ಸದಸ್ಯರಾದ ಹುಲಿಗೆಮ್ಮ, ಯಮನೂರಪ್ಪ, ಾತೀಮಾ, ರೇಣುಕಾ, ಸಕ್ಕೂಬಾಯಿ, ದಾದೇಸಾಬ ಹಿರೇಮನಿ ಇತರರಿದ್ದರು.