ಕೊಪ್ಪಳ: ನಾಡಿನ ಪ್ರಸಿದ್ಧ ಮಠಗಳಲ್ಲಿ ಒಂದಾದ ಗವಿಮಠ ತ್ರಿವಿಧ ದಾಸೋಹಕ್ಕೆ ಹೆಸರಾಗಿದೆ. ಶ್ರೀಗಳ ಆಶಯದಂತೆ 5 ಸಾವಿರ ಮಕ್ಕಳಿಗೆ ಉಚಿತ ವಸತಿ ಹಾಗೂ ಪ್ರಸಾದ ನಿಲಯ ಸಿದ್ಧಗೊಂಡಿದ್ದು, ಜುಲೈ 1ರಂದು ಉದ್ಘಾಟನೆಯಾಗಲಿದೆ.
ಅನ್ನ, ಅಕ್ಷರ, ಅರಿವು ಹಾಗೂ ಆಧ್ಯಾತ್ಮ ದಾಸೋಹಕ್ಕೆ ಶ್ರೀಮಠ ಹೆಸರಾಗಿದೆ. ಮಠದ 16ನೇ ಪೀಠಾಧಿಪತಿಗಳಾಗಿದ್ದ ಮರಿಶಾಂತವೀರ ಶಿವಯೋಗಿಗಳು ಬಡ ಮಕ್ಕಳ ಶಿಕ್ಷಣಕ್ಕಾಗಿ 1951ರಲ್ಲಿ ಗವಿಸಿದ್ದೇಶ್ವರ ಸಂಯುಕ್ತ ಪ್ರೌಢಶಾಲೆ ಆರಂಭಿಸಿದರು. 17ನೇ ಪೀಠಾಧಿಪತಿಗಳಾದ ಶಿವಶಾಂತವೀರ ಶ್ರೀಗಳು ಗವಿಸಿದ್ದೇಶ್ವರ ಆಯುರ್ವೇದ ಕಾಲೇಜು ಸ್ಥಾಪಿಸಿದರು. ತಮ್ಮ ಗುರುಗಳ ಕನಸು ಮುಂದುವರೆಸಿದರು. ಈಗಿನ 18ನೆ ಪೀಠಾಧಿಪತಿಗಳಾದ ಅಭಿನವ ಗವಿಸಿದ್ದೇಶ್ವರ ಶ್ರೀಗಳು ತಮ್ಮ ಗುರುಗಳ ಆಶಯ ಮುಂದುವರಿಸುತ್ತಿದ್ದಾರೆ.
ಆರಂಭದಲ್ಲಿ 2 ಸಾವಿರ ವಿದ್ಯಾರ್ಥಿಗಳಿಗೆ ಉಚಿತ ವಸತಿ ಮತ್ತು ಪ್ರಸಾದ ನಿಲಯ ಆರಂಭಿಸಿದರು. ಸದ್ಯ ಮಕ್ಕಳ ಸಂಖ್ಯೆ ಹೆಚ್ಚಿದ್ದು, ಬಡ ಮಕ್ಕಳ ಶಿಕ್ಷಣ ಮೊಟಕುಗೊಳ್ಳದಿರಲೆಂದು 5 ಸಾವಿರ ಮಕ್ಕಳಿಗೆ ಆಗುವಷ್ಟು ವಸತಿ ನಿಯಯ ನಿರ್ಮಿಸಿದ್ದಾರೆ. ಅನೇಕರಿಂದ ದಾನ ಪಡೆದು ಸುಸಜ್ಜಿತ ಕಟ್ಟಡ ನಿರ್ಮಿಸಿದ್ದು, ಶಾಲೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಉದ್ಘಾಟನೆಗೆ ಸಿದ್ಧವಾಗಿದೆ. ಒಂದೇ ಕಟ್ಟಡದಲ್ಲಿ ಏಕ ಕಾಲಕ್ಕೆ 5 ಸಾವಿರ ವಿದ್ಯಾರ್ಥಿಗಳು ಪ್ರವೇಶ ಪಡೆಯಬಹುದು. ಸದ್ಯ ಮಕ್ಕಳು ಅರ್ಜಿ ಸಲ್ಲಿಸಿದ್ದಾರೆ.
130 ಸುಸಜ್ಜಿತ ಕಟ್ಟಡಗಳು, 20 ಡಾರ್ಮೆಟರಿಗಳು, ವಿಶಾಲ ಪ್ರಸಾದ ನಿಲಯ, ಆಧುನಿಕ ಯಂತ್ರೋಪಕರಣ ಹೊಂದಿರುವ ಅಡುಗೆ ಕೋಣೆ, ತರಕಾರಿ ಕತ್ತರಿಸುವ ಯಂತ್ರ, 1 ಗಂಟೆಗೆ 1500 ಚಪಾತಿ ತಯಾರಿಸುವ ಯಂತ್ರ, ಅನ್ನ, ಸಾಂಬಾರ್, ಪಲ್ಯ, ಸಿಹಿ ತಯಾರಿಸಲು 12 ಸ್ಟೀಮ್ ಕುಕ್ಕಿಂಗ್, 10 ನಿಮಿಷದಲ್ಲಿ 2000 ಇಡ್ಲಿ ತಯಾರಿಸುವ 4 ಸ್ಟೀಮ್ ಕುಕ್ಕಿಂಗ್ ಒಳಗೊಂಡಿದೆ. ಜತೆಗೆ ಮಕ್ಕಳ ಆರೈಕೆಗೆ ಆಸ್ಪತ್ರೆ, ಕಂಪ್ಯೂಟರ್ ಲ್ಯಾಬ್, ಆಡಿಟೋರಿಯಂ ಹಾಲ್, ವಿಶಾಲ ಆಟದ ಮೈದಾನ, ಆಧುನಿಕ ಶೌಚಗೃಹ, ಶುದ್ಧ ಕುಡಿವ ನೀರು ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಪುಣ್ಯಸ್ಮರಣೆಯಂದು ಉದ್ಘಾಟನೆ
ಮಠದಲ್ಲಿ ಶಿಕ್ಷಣ ನೀಡುವ ಕಾರ್ಯಕ್ಕೆ ಮುನ್ನುಡಿ ಬರೆದ ಮರಿಶಾಂತವೀರ ಶಿವಯೋಗಿಗಳ 57ನೇ ಪುಣ್ಯಸ್ಮರಣೆ ಜುಲೈ 1ರಂದು ಇದೆ. ಆ ದಿನವೇ ಹಾಸ್ಟೆಲ್ ಉದ್ಘಾಟನೆ ಆಗಲಿದೆ. ಅವರ ನೆನಪಿಗೆ ಕಳೆದೆರೆಡು ವರ್ಷಗಳ ಹಿಂದೆ ಗವಿಶ್ರೀಗಳು ಹಾಸ್ಟೇಲ್ ಆಧುನೀಕರಣ ಕಾಮಗಾರಿಗೆ ಚಾಲನೆ ನೀಡಿದ್ದರು. ಸದ್ಯ ಅವರ ಪುಣ್ಯಸ್ಮರಣೆ ದಿನದಂದೇ ಉದ್ಘಾಟನೆಗೆ ಮುಂದಾಗಿದ್ದಾರೆ. ಜಿಲ್ಲೆಯ ವಿವಿಧ ಜನಪ್ರತಿನಿಧಿಗಳು, ಗಣ್ಯರು, ಮಠಾಧೀಶರು ಸೇರಿ ಇತರರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಜು.1ರ ಬೆಳಗ್ಗೆ 10ಗಂಟೆಗೆ ಗವಿಮಠ ಮೈದಾನದಲ್ಲಿ ಕಾರ್ಯಕ್ರಮ ಜರುಗಲಿದೆ.
ಅಕ್ಷರ ಜೋಳಿಗೆ
ಮಠದ ಕಾರ್ಯಕ್ಕೆ ಕೈ ಜೋಡಿಸುವವರು ಅಕ್ಷರ ಜೋಳಿಗೆಗೆ ತಮ್ಮ ಕೈಲಾದಷ್ಟು ಸಹಾಯ ಮಾಡಬಹುದು. “ನೀಡೋಣ ತಿಂಗಳಿಗೆ ನೂರು ರೂಪಾಯಿ ಹಣ, ತೀರಿಸೋಣ ಮಾನವ ಜನ್ಮದ ಋಣ’ ಘೋಷವಾಕ್ಯದೊಂದಿಗೆ ಮಠದ ಹಳೇ ವಿದ್ಯಾಥಿಗಳು ಪರಿಚಯಿಸಿದ್ದಾರೆ. ದೇಣಿಗೆ ನೀಡಲು ಇಚ್ಛಿಸುವವರು ಪ್ರತಿ ತಿಂಗಳು 100 ರೂ. ಅಥವಾ ತಮ್ಮ ಇಚ್ಛೆ ಅನುಸಾರ ಬ್ಯಾಂಕ್ ಖಾತೆ ಮೂಲಕ ಕ್ಯೂಆರ್ ಕೋಡ್ ಬಳಸಿ ಹಣ ವರ್ಗಾಯಿಸಬಹುದು.