ಸುನೀಲಕುಮಾರ್​ಗೆ ಮಾತ್ರ ನೈತಿಕತೆ ಇದೆಯಾ..?

Hebbalakar 1
Published on

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಆಕ್ರೋಶ

ಸೂಲಿಬೆಲೆ ವಿಚಾರವಾಗಿ ಹೇಳಿಕೆಗೆ ಪ್ರತಿಕ್ರಿಯೆ

ವಿಜಯವಾಣಿ ಸುದ್ದಿಜಾಲ ಉಡುಪಿ

ನೈತಿಕ ಅಧಿಕಾರ ಎಂದರೇನು? ಸುನೀಲ್​ಕುಮಾರ್​ ಅವರೊಬ್ಬರಿಗೇ ನೈತಿಕತೆ ಬರೆದು ಕೊಟ್ಟಿದ್ದಾರಾ? ಮಹಿಳೆಯಾಗಿ ನಾನೊಬ್ಬ ಉಸ್ತುವಾರಿ ಸಚಿವೆ. ನನಗೆ ನೈತಿಕತೆ ಇಲ್ಲ ಎಂದು ಹೇಳಿದೆ ಏನು ಅರ್ಥ? ಬಹಳ ಚಂದದ ಮಾತುಗಾರರು ತಾವು. ಸುನೀಲ್​ಕುಮಾರ್​ರೇ ಮೊದಲು ನೈತಿಕತೆಯ ಅರ್ಥ ಹೇಳಿ. ತಾನೊಬ್ಬನೇ ಬುದ್ಧಿವಂತ, ಸರ್ವಜ್ಞ. ಉಳಿದವರೆಲ್ಲ ದಡ್ಡರು ಎಂದುಕೊಂಡಿದ್ದೀರಾ ಎಂದು ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಮಾಜಿ ಸಚಿವ ಸುನೀಲಕುಮಾರ್​ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಉಡುಪಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಜೂನ್ 21ರಂದು ಆಯೋಜಿಸಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, 'ಚಕ್ರವರ್ತಿ ಸೂಲಿಬೆಲೆ ಬಗ್ಗೆ ಮಾತಾಡಲು ಹೆಬ್ಬಾಳ್ಕರ್​ಗೆ ನೈತಿಕತೆ ಇಲ್ಲ' ಎಂದಿದ್ದ ಸುನೀಲ್​ಕುಮಾರ್​ ಹೇಳಿಕೆಗೆ ಅವರು ಕಿಡಿಕಾರಿದರು.

ಅಂಗನವಾಡಿ ಲೆಕ್ಕ ಬೇಕಾ?

Hebbalakar 2
ರಾಜ್ಯದಲ್ಲಿ ಎಷ್ಟು ಅಂಗನವಾಡಿ ಇದೆಯೆಂದು ಲೆಕ್ಕ ಕೊಡಿ ಎಂದಿದ್ದ ಸುನೀಲಕುಮಾರ್​ ಹೇಳಿಕೆಗೂ ಪ್ರತಿಕ್ರಿಯಿಸಿ, ನಿಮಗೇಕೆ ಅಂಗನವಾಡಿ ಲೆಕ್ಕ? ನನ್ನ ಇಲಾಖೆಗೆ ಬಗ್ಗೆ ಕೇಳುತ್ತೀರಾ? ನನ್ನ ಕಚೇರಿಗೆ ಬನ್ನಿ. ಎಲ್ಲ ಡಿಟೇಲ್ಸ್​ ಕೊಡುತ್ತೇನೆ. 69 ಸಾವಿರ ಅಂಗನವಾಡಿ ಕಟ್ಟಡ ಇದೆ, 12 ಸಾವಿರ ಅಂಗನವಾಡಿ ಬಾಡಿಗೆ ಕಟ್ಟದಲ್ಲಿದೆ. ಅಂಗನವಾಡಿ ಎಷ್ಟಿದೆ? ಕಾರ್ಯಕರ್ತರು ಎಷ್ಟಿದ್ದಾರೆ ಎಂಬ ಎಲ್ಲ ವಿಚಾರ ನನಗೆ ಗೊತ್ತು. ಹಳ್ಳಿಯಲ್ಲಿ ಎಷ್ಟಿದೆ? ಪೇಟೆಯಲ್ಲಿ ಎಷ್ಟಿದೆ? ಎಷ್ಟು ಸೋರುತ್ತಿದೆ ಎಲ್ಲವೂ ಗೊತ್ತು. ನಿಮ್ಮ ಕ್ಷೇತ್ರದಲ್ಲಿ ಎಷ್ಟು ಅಂಗನವಾಡಿ ಇದೆ ಎನ್ನುವುದೂ ನನಗೆ ಗೊತ್ತು ಎಂದು ಸವಾಲು ಹಾಕಿದರು.

ನೋ ಕಮೆಂಟ್ಸ್​

ಬಿ.ಆರ್​. ಪಾಟೀಲ ಅವರ ಆಡಿಯೋ ವಿಚಾರವಾಗಿ ಮಾತನಾಡಲಿ ಸಚಿವೆ ಲಕ್ಷ್ಮೀ ನಿರಾಕರಿಸಿದರು. ನೋ ಕಮೆಂಟ್ಸ್​. ಆ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ ಎಂದು ಮೂರು ಬಾರಿ ಪುನರುಚ್ಚರಿಸಿದರು.

ತಿಳಿದು ಮಾತನಾಡುವೆ

ಕರಾವಳಿ ಜಿಲ್ಲೆಯ ಗ್ರಾಮಸಭೆಗಳಲ್ಲಿ ತುಳು ನಿಷೇಧದ ಬಗ್ಗೆ ಸದಾನಂದ ಗೌಡ, ಕೋಟ ಶ್ರೀನಿವಾಸ ಪೂಜಾರಿ ವಿರೋಧದ ವಿಚಾರವಾಗಿ ಪ್ರತಿಕ್ರಿಯಿಸಿ, ಈ ಬಗ್ಗೆ ತಿಳಿದಿಲ್ಲ. ಸಿಇಒ ಅವರೊಂದಿಗೆ ಮಾತನಾಡುತ್ತೇನೆ. ಇದು ಸ್ಥಳೀಯ ಭಾಷೆಯ ವಿಚಾರ. ಸೂಕ್ಷ್ಮವಾಗಿ ಅವಲೋಕಿಸಿ ಮಾತನಾಡಬೇಕು ಎಂದರು.

ಬೇರೆ ಕೆಲಸವಿಲ್ಲ, ಪ್ರತಿಭಟಿಸಲಿ ಬಿಡಿ

Laxmi Box
ಅವಿಭಜಿತ ದ.ಕ. ಜಿಲ್ಲೆಯಲ್ಲಿ ಬಿಜೆಪಿಯವರು ಜೂ.23ರಂದು ಗ್ರಾಪಂಗಳ ಮುಂಭಾಗದಲ್ಲಿ ಪ್ರತಿಭಟನೆ ಹಮ್ಮಿಕೊಂಡಿರುವ ಬಗ್ಗೆ ಮಾತನಾಡಿದ ಹೆಬ್ಬಾಳ್ಕರ್​, ಪ್ರತಿಭಟನೆ ಸಂವಿಧಾನಬದ್ಧ ಹಕ್ಕು. ಅದಕ್ಕೆ ಪ್ರಾಮುಖ್ಯತೆ ಇದೆ. ವಿರೋಧ ಪಕ್ಷವಾದ ಬಿಜೆಪಿಗೆ ಮಾಡಲು ಬೇರೆ ಕೆಲಸ ಇಲ್ಲ. ಪ್ರತಿಭಟನೆಯನ್ನಾದರೂ ಮಾಡಲಿ ಬಿಡಿ. ಜಿಎಸ್​ಟಿ ತರಲು ಆಗಿಲ್ಲವೆಂದು ಪ್ರತಿಭಟಿಸುತ್ತೀರಾ? ರಾಜ್ಯದ ಅಭಿವೃದ್ಧಿಯಲ್ಲಿ ಕೇಂದ್ರ ಸರ್ಕಾರ ಅನ್ಯಾಯ ಮಾಡುತ್ತಿದ್ದು ಅದರ ವಿರುದ್ಧ, ತಮ್ಮದೇ ಅಸಮರ್ಥ ಸಂಸದರ ವಿರುದ್ಧ ಪ್ರತಿಭಟನೆ ಮಾಡ್ತಾರಾ? ಕೇಂದ್ರದಿಂದ ನರೇಗಾ ಹಣ ಬಿಡುಗಡೆಯಾಗಿಲ್ಲವೆಂದು ಪ್ರತಿಭಟನೆ ಮಾಡ್ತೀರಾ? ಮೊದಲು ಯಾವುದರ ಬಗ್ಗೆ ಪ್ರತಿಭಟನೆ ಮಾಡುತ್ತೀರೆಂದು ಹೇಳಿ. ಸುಮ್ಮನೆ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡಬೇಡಿ. ಪಕ್ಷದ ಆಂತರಿಕ ಕಚ್ಚಾಟ ಮುಚ್ಚಿಕೊಳ್ಳಲು ಪ್ರತಿಭಟನೆ ಮಾಡುತ್ತಿದ್ದಾರೆ. ಇದು ಅವರ ಡ್ರಾಮಾ ಬಾಜಿ ಎಂದು ಲಕ್ಷ್ಮೀ ಟೀಕಿಸಿದರು.

ಭಾಷಣಕಾರರನ್ನು ಹಿಮ್ಮೆಟ್ಟಿಸುತ್ತಿಲ್ಲ ಸರ್ಕಾರ

ಹಿಂದು ಜಾಗರಣಾ ವೇದಿಕೆ ಮುಖಂಡ ಶ್ರೀಕಾಂತ ಶೆಟ್ಟಿ ಅವರಿಗೆ ಮೂರು ತಿಂಗಳು ಬಾಗಲಕೋಟೆ ಪ್ರವೇಶಕ್ಕೆ ನಿಷೇಧ ಮಾಡಿರುವ ಕುರಿತು ಮಾತನಾಡಿದ ಸಚಿವೆ ಲಕ್ಷ್ಮೀ, ಯಾವ ವಾಗ್ಮಿಗಳನ್ನು, ಭಾಷಣಕಾರರನ್ನು ನಮ್ಮ ಸರ್ಕಾರ ಟಾರ್ಗೆಟ್​ ಮಾಡುತ್ತಿಲ್ಲ. ಭಾಷಣ ವಿಷಯಾಧಾರಿತ ಆಗಿರಬೇಕು. ವಿಷಯಾಂತರ ಆಗಬಾರದು. ಸಮಾಜದ ಕೋಮು ಸೌಹಾರ್ದ ಕೆಡಿಸಬಾರದು. ಎಲ್ಲರ ಹಿತಾಸಕ್ತಿ ಕಾಪಾಡಬೇಕು. ವಿಷಬೀಜ ಬಿತ್ತಿ ಸಮಾಜ ಒಡೆಯಬಾರದು. ಅಂತಹವರ ವಿರುದ್ಧ ಕಾನೂನು ಕ್ರಮ ಖಂಡಿತ ಆಗಲಿದೆ. ಶ್ರೀಕಾಂತ ಶೆಟ್ಟಿ ಅವರ ಹಿಂದಿನ ಭಾಷಣಗಳನ್ನೆಲ್ಲ ಒಮ್ಮೆ ಕೇಳಿ. ಆಗ ಎಲ್ಲ ವಿಚಾರ ನಿಮಗೇ ಅರಿವಾಗುತ್ತದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net