

ಮಂಡ್ಯ: ಪಾಲಕರು ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಬೇಕು ಎಂದು ಬನಶಂಕರಿ ವಿದ್ಯಾ ಸಂಸ್ಥೆಯ ಅಧ್ಯಕ್ಷ ರವಿ ಭೋಜೇಗೌಡ ಸಲಹೆ ನೀಡಿದರು.
ತಾಲೂಕಿನ ದುದ್ದ ಹೋಬಳಿ ಮುದಗಂದೂರು ಬನಶಂಕರಿ ವಿದ್ಯಾ ಸಂಸ್ಥೆಯ 280 ವಿದ್ಯಾರ್ಥಿಗಳಿಗೆ ಸಮವಸ್ತ್ರ, ನೋಟ್‌ಬುಕ್, ಶೂ, ಬ್ಯಾಗ್, ಐಡಿ ಕಾರ್ಡ್‌ಗಳನ್ನು ಉಚಿತವಾಗಿ ವಿತರಿಸಿ ಮಾತನಾಡಿದ ಅವರು, ಪ್ರಸ್ತುತ ಮೊಬೈಲ್ ಬಳಕೆ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಬಿಟ್ಟಿದೆ. ಆದರೆ, ಇದರಿಂದ ಎಷ್ಟು ಪ್ರಯೋಜನವಿದೆಯೋ ಅದಕ್ಕಿಂತಲೂ ಹೆಚ್ಚು ಹಾನಿಯೂ ಇದೆ. ಪಾಲಕರು ಮೊಬೈಲ್ ಬಳಸುವುದಲ್ಲದೆ, ಮಕ್ಕಳಿಗೂ ನೀಡುತ್ತಿರುವುದರಿಂದ ಖಿನ್ನತೆ ಮತ್ತು ಏಕಾಗ್ರತೆಯ ಕೊರತೆಯಂತಹ ಮಾನಸಿಕ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿ ಕಾಡುತ್ತಿವೆ. ಮೊಬೈಲ್ ಫೋನ್‌ಗಳನ್ನು ದೀರ್ಘಕಾಲದವರೆಗೆ ಬಳಸುವುದರಿಂದ ಕಣ್ಣಿನ ತೊಂದರೆಗಳು ಉಂಟಾಗುತ್ತವೆ. ಆದ್ದರಿಂದ ಮಕ್ಕಳಿಗೆ ಮೊಬೈಲ್‌ಗಳನ್ನು ನೀಡಬೇಡಿ ಎಂದರು.
ಪ್ರಸ್ತುತ ಶಿಕ್ಷಣ ಸಂಸ್ಥೆಯಲ್ಲಿ 280 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ನಗರ ಪ್ರದೇಶಗಳಲ್ಲಿ ನೀಡುತ್ತಿರುವ ಸೌಲಭ್ಯಗಳನ್ನು ಸಹ ನಮ್ಮ ಸಂಸ್ಥೆಯಲ್ಲೂ ನೀಡುತ್ತಿದೆ. 3 ಕೋಟಿ ವೆಚ್ಚದಲ್ಲಿ ನೂತನ ಶಾಲಾ ಕಟ್ಟಡ ನಿರ್ಮಾಣವಾಗುತ್ತಿದ್ದು, ಪ್ರೌಢಶಾಲೆ ಹಾಗೂ ಪಾಲಿಟೆಕ್ನಿಕ್ ಕಾಲೇಜು ಆರಂಭಿಸಲಾಗುವುದು. ಕಟ್ಟಡ ನಿರ್ಮಾಣಕ್ಕೆ ವಿಧಾನ ಪರಿಷತ್ ಶಾಸಕರಾದ ದಿನೇಶ್ ಗೂಳಿಗೌಡ 5 ಲಕ್ಷ ರೂ, ಮಧು ಜಿ.ಮಾದೇಗೌಡ ಅವರು 4 ಲಕ್ಷ ರೂ ಅನುದಾನ ನೀಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರೂ ಸಹ ಅನುದಾನ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ಸಂಸ್ಥೆಯ ಕಾರ್ಯದರ್ಶಿ ಕೆ.ಹೊಂಬಯ್ಯ, ಮುದಗಂದೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಹೇಮಂತ್, ಎಸ್‌ಬಿಐ ವ್ಯವಸ್ಥಾಪಕ ನಿರ್ದೇಶಕ ರವಿಕಾಂತ್, ಸಂಸ್ಥೆಯ ಖಜಾಂಚಿ ಚಂದ್ರು ಭೋಜೇಗೌಡ, ನಿರ್ದೇಶಕರಾದ ಎಂ.ವಿ.ಮೋಹನ್‌ಶಾಸ್ತ್ರಿ, ರಾಮಚಂದ್ರು, ಮಹೇಂದ್ರ, ಎಸ್.ಎನ್.ನಾಗರಾಜು, ಜಗದೀಶ್‌ಕುಮಾರ್, ಜೆ.ಪಿ.ಗುರುಪ್ರಸಾದ್, ರಾಜು, ಗಾಯತ್ರಿ, ಮುಖ್ಯ ಶಿಕ್ಷಕಿ ಜೆ.ಪಿ.ಗೌರಮ್ಮ ಉಪಸ್ಥಿತರಿದ್ದರು.