

ಕಾಸರಗೋಡು: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಬಿಜೋಯ್ ನೇತೃತ್ವದಲ್ಲಿ ಆದೂರು ಠಾಣಾ ಪೊಲೀಸರ ವತಿಯಿಂದ ಬೋವಿಕ್ಕಾನದ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಪುಸ್ತಕ ಹಾಗೂ ಕಲಿಕಾ ಸಾಮಗ್ರಿಗಳ ವಿತರಣೆ ನಡೆಯಿತು.
ಪುಸ್ತಕ ವಿತರಿಸಿ ಬಳಿಕ ಮಾತನಾಡಿದ ಎಸ್ಪಿ ಪಿ. ಬಿಜೋಯ್, ಕಿಡಿಗೇಡಿಗಳ ಕೃತ್ಯದಿಂದ ಪಠ್ಯಪುಸ್ತಕಗಳು ನಾಶವಾಗಿದ್ದವು. ಇದರಿಂದ ಪುಟಾಣಿ ವಿದ್ಯಾರ್ಥಿಗಳು ಪಠ್ಯ ಚಟುವಟಿಕೆಗಳಿಂದ ವಂಚಿತರಾಗಿದ್ದೂ ಅಲ್ಲದೇ ಹತಾಶೆಗೂ ಒಳಗಾಗಿದ್ದರು. ಮಕ್ಕಳಿಗೆ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಇಲಾಖೆ ಕಡೆಯಿಂದ ಕಾರ್ಯಕ್ರಮ ನಡೆಸಲಾಗಿದೆ ಎಂದರು. ಆದೂರು ಠಾಣೆ ಪೊಲೀಸರು, ಶಾಲಾ ಶಿಕ್ಷಕರು, ರಕ್ಷಕ ಶಿಕ್ಷಕ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಬೋವಿಕ್ಕಾನದ ಶಾಲಾ ಕೊಠಡಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು, ಸುಮಾರು 200 ಪಠ್ಯಪುಸ್ತಕಗಳು ಭಸ್ಮವಾಗಿದ್ದವು. ಈ ಹಿನ್ನೆಲೆಯಲ್ಲಿ ಆದೂರು ಠಾಣೆಯಲ್ಲಿ ಪ್ರಕರಣವೂ ದಾಖಲಾಗಿತ್ತು. ಘಟನೆಯಿಂದ ಮಕ್ಕಳಲ್ಲಿ ಅತ್ಮಸ್ಥೈರ್ಯ ಕುಂದಿತ್ತು. ಪೊಲೀಸ್ ಇಲಾಖೆಯ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.