ಗಂಗೊಳ್ಳಿ: ವಿದ್ಯಾಭ್ಯಾಸ ಕೇವಲ ಪುಸ್ತಕ ಓದಿಗೆ ಮಾತ್ರ ಸೀಮಿತವಾಗದೆ, ನಮ್ಮ ಜ್ಞಾನ ಹಾಗೂ ಕೌಶಲ ಬೆಳೆಸುವಂತಿರಬೇಕು. ಜೀವನದಲ್ಲಿ ಕಲಿಕೆ ನಿರಂತರ. ಸ್ವ ಉದ್ಯೋಗದತ್ತ ಯುವ ಜನಾಂಗ ಮನಸ್ಸು ಮಾಡಬೇಕು ಎಂದು ಕರ್ಣಾಟಕ ಬ್ಯಾಂಕ್ ಉಡುಪಿ ಶಾಖೆಯ ಸೀನಿಯರ್ ಮ್ಯಾನೇಜರ್ ರವೀಂದ್ರ ಶ್ಯಾನುಭಾಗ್ ಹೇಳಿದರು.
ಗಂಗೊಳ್ಳಿ ಶ್ರೀ ಸರಸ್ವತಿ ವಿದ್ಯಾನಿಧಿ ವತಿಯಿಂದ ಗಂಗೊಳ್ಳಿಯ ಸ.ವಿ.ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ಭಾನುವಾರ ವಿದ್ಯಾರ್ಥಿವೇತನ ವಿತರಣೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿವೇತನ ವಿತರಿಸಿ ಮಾತನಾಡಿದರು.
ಶ್ರೀ ಸರಸ್ವತಿ ವಿದ್ಯಾನಿಧಿ ಅಧ್ಯಕ್ಷ ಎಂ.ರವೀಂದ್ರ ಪ್ರಭು ಅಧ್ಯಕ್ಷತೆ ವಹಿಸಿದ್ದರು. ಶ್ರೀ ಸರಸ್ವತಿ ವಿದ್ಯಾನಿಧಿ ಸದಸ್ಯರಾದ ಡಾ.ಕಾಶೀನಾಥ ಪೈ, ಜಿ.ಗೋವಿಂದ್ರಾಯ ಆಚಾರ್ಯ, ಜಿ.ವೆಂಕಟೇಶ ಶೆಣೈ, ವಾಮನ ಎಸ್.ಪೈ, ಎಂ.ನಾಗೇಂದ್ರ ಪೈ, ಎಂ.ಅನಂತ ಪೈ ಮೊದಲಾದವರು ಉಪಸ್ಥಿತರಿದ್ದರು.
ಪತ್ರಕರ್ತ ಬಿ.ರಾಘವೇಂದ್ರ ಪೈ ಸ್ವಾಗತಿಸಿದರು. ಶ್ರೀ ಸರಸ್ವತಿ ವಿದ್ಯಾನಿಧಿಯ ಮಾಜಿ ಅಧ್ಯಕ್ಷ ಎನ್.ಸದಾಶಿವ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಕೆ.ರಾಮನಾಥ ನಾಯಕ್ ವಿದ್ಯಾರ್ಥಿಗಳ ಪಟ್ಟಿ ವಾಚಿಸಿ ವಂದಿಸಿದರು.