

ಉಡುಪಿ: ಬೀಡಿನಗುಡ್ಡೆ ಬಯಲು ರಂಗ ಮಂದಿರ ಅಭಿವೃದ್ಧಿಪಡಿಸಲಾಗುವುದು. ಪಕ್ಕದಲ್ಲಿರುವ ಎಕ್ರೆ ಜಾಗದಲ್ಲಿ 15 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣಕ್ಕೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಶಾಸಕ ಯಶ್ಪಾಲ್ ಸುವರ್ಣ ಹೇಳಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಉಡುಪಿ ಪತ್ರಿಕಾ ಭವನ ಸಮಿತಿ ಸಹಯೋಗದೊಂದಿಗೆ ಬುಧವಾರ ನಡೆದ ನಗರದ ಸಮಸ್ಯೆ ಮತ್ತು ಅಭಿವೃದ್ಧಿ ಯೋಜನೆ ಕುರಿತು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಗರದಲ್ಲಿ ಸುಮಾರು 2 ಲಕ್ಷಕ್ಕೂ ಅಧಿಕ ಜನಸಂಖ್ಯೆಯಿದ್ದು, ಮಣಿಪಾಲ ಮತ್ತು ಕೊಡವೂರು ವಾರ್ಡ್ನಲ್ಲಿ ಒಳಚರಂಡಿ ಸಮಸ್ಯೆ ಇದೆ. ಒಳಚರಂಡಿ ವ್ಯವಸ್ಥೆ ಸಮಗ್ರ ಮೇಲ್ದರ್ಜೆಗೆ ಏರಿಸಲು ಈಗಾಗಲೇ 400 ಕೋ.ರೂ.ವೆಚ್ಚದಲ್ಲಿ ಡಿಪಿಆರ್ ಸಿದ್ಧಪಡಿಸಲಾಗಿದ್ದು, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಎಲ್ಲಾ ವಾರ್ಡ್ಗಳಲ್ಲಿ ವೈಜ್ಞಾನಿಕ ರೀತಿಯಲ್ಲಿ ಒಳಚರಂಡಿ ವ್ಯವಸ್ಥೆ ಅಭಿವೃದ್ಧಿಪಡಿಸಲು ಸುಮಾರು 700ರಿಂದ 800 ಕೋಟಿ ರೂ. ಅಗತ್ಯವಿದೆ ಎಂದು ತಿಳಿಸಿದರು.
ಆಟೋ ರಿಾ ನಿಲ್ದಾಣಕ್ಕೆ ಅನುಮತಿ ಅಗತ್ಯ
ನಗರದಲ್ಲಿ ಜನಸಂಖ್ಯೆಗೆ ಹೋಲಿಸಿದರೆ ಆಟೋ ರಿಾಗಳ ಸಂಖ್ಯೆ ಅಧಿಕವಾಗಿದೆ. ಎಲ್ಲೆಂದರಲ್ಲಿ ಪಾರ್ಕಿಂಗ್ ಮಾಡುತ್ತಿರುವುದರಿಂದ ಜನರಿಗೆ ಸಮಸ್ಯೆಯಾಗುತ್ತಿದೆ. ಹೀಗಾಗಿ ಆಟೋ ರಿಾ ನಿಲ್ದಾಣಕ್ಕೆ ಪೊಲೀಸ್ ಮತ್ತು ಆರ್ಟಿಒ ಜೊತೆಗೆ ನಗರಸಭೆಯಿಂದ ಅನುಮತಿ ಪಡೆಯುವುದು ಕಡ್ಡಾಯಗೊಳಿಸಲಾಗಿದೆ ಎಂದರು.
ಮಣ್ಣಪಳ್ಳ ಅಭಿವೃದ್ಧಿ ಸಮಿತಿಗೆ ಪ್ರಸ್ತುತ ಜಿಲ್ಲಾಧಿಕಾರಿಗಳು ಅಧ್ಯಕ್ಷರಾಗಿದ್ದು, ಇದರ ಜವಾಬ್ದಾರಿ ನಗರಸಭೆಗೆ ವಹಿಸುವಂತೆ ಮನವಿ ಸಲ್ಲಿಸಲಾಗುವುದು. ನಗರಸಭಾ ವ್ಯಾಪ್ತಿಯ ಎಲ್ಲಾ ಸರ್ಕಾರಿ ಶಾಲೆ ಮತ್ತು ಕಾಲೇಜುಗಳಿಗೆ 40 ಸಾವಿರ ಲೀ. ಉಚಿತ ನೀರು ಸರಬರಾಜು ಮಾಡಲು ರ್ನಿಣಯಿಸಲಾಗಿದೆ ಎಂದರು. ನಗರದ ಸಂಚಾರದಟ್ಟಣೆ ನಿಯಂತ್ರಿಸುವ ನಿಟ್ಟಿನಲ್ಲಿ ಪೊಲೀಸರೊಂದಿಗೆ ಸಭೆ ನಡೆಸಲಾಗಿದ್ದು, ಮಣಿಪಾಲದಿಂದ ಮಂಗಳೂರು ಕಡೆಗೆ ಪ್ರಯಾಣಿಸುವರಿಗೆ ಶಾರದಾ ಕಲ್ಯಾಣ ಮಂಟಪವಾಗಿ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಹಾಲ್ ಮಾರ್ಗವಾಗಿ ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸಲಾಗುವುದು ಎಂದರು.
ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ ಮಾತನಾಡಿ, ನಗರಸಭೆ ಹೊಸ ಕಟ್ಟಡದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯನ್ನೂ ಪ್ರಾರಂಭಿಸಲಾಗುವುದು. ಡಿವೈಎಸ್ಪಿ ಕಚೇರಿಯನ್ನು ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಗೆ ಸ್ಥಳಾಂತರಿಸಲಾಗುವುದು. ವಾರಾಹಿ ಯೋಜನೆ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಪ್ರಾಯೋಗಿಕ ಕಾರ್ಯಾಚರಣೆ ನಡೆಯುತ್ತಿದೆ. ನಗರದ ಸಮಸ್ಯೆಗಳನ್ನು ಬಗೆಹರಿಸಲು ತಿಂಗಳಲ್ಲಿ 2 ಬಾರಿ ಅದಾಲತ್ ಆಯೋಜಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ನಗರಸಭೆ ವತಿಯಿಂದ ಪತ್ರಿಕಾ ಭವನದ ಮುಂಭಾಗ ಅಳವಡಿಸಲಾದ ಇಂಟಲಾಕ್ ವ್ಯವಸ್ಥೆಯನ್ನು ಶಾಸಕ ಯಶ್ಪಾಲ್ ಎ. ಸುವರ್ಣ ಉದ್ಘಾಟಿಸಿದರು.
ಇತ್ತೀಚೆಗೆ ನಿಧನರಾದ ಸಂಘದ ಮಾಜಿ ಅಧ್ಯಕ್ಷ ಜಯಕರ ಸುವರ್ಣ ಅವರ ಕುಟುಂಬಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಉಡುಪಿ ಪತ್ರಿಕಾ ಭವನ ಸಮಿತಿಯಿಂದ ಸಹಾಯಧನದ ಚೆಕ್ ವಿತರಿಸಲಾಯಿತು. ರಾಜ್ಯ ಸಂಘದಿಂದ ನೀಡಲಾದ ಪತ್ರಿಭಾ ಪುರಸ್ಕಾರದ ಚೆಕ್ ಅನ್ನು ಸಂಘದ ಸದಸ್ಯರ ಮಕ್ಕಳಿಗೆ ಹಸ್ತಾಂತರಿಸಲಾಯಿತು. ವಾರ್ತಾಧಿಕಾರಿ ಮಂಜುನಾಥ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು, ಮಾಧ್ಯಮ ಅಕಾಡೆಮಿ ಸದಸ್ಯ ಯು.ಎಸ್. ಶೆಣೈ ಉಪಸ್ಥಿತರಿದ್ದರು.