ಎಐಎಡಿಎಂಕೆಯಲ್ಲಿ ಕಲಹ; 8 ಬಾರಿ ಗೆದ್ದಿದ್ದ ಸೆಂಗೊಟ್ಟೈಯ್​ರನ್ನು ಪಕ್ಷದಿಂದ ಹೊರಹಾಕಿದ ಎಡಪ್ಪಾಡಿ ಪಳನಿಸ್ವಾಮಿ| K.A.Sengottaiyan

ವಿಜಯವಾಣಿ - 2025-11-01T134155.507
Published on

ಚೆನ್ನೈ: ತಮಿಳುನಾಡಿದ ಪ್ರಮುಖ ವಿರೋಧ ಪಕ್ಷವಾದ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೆತ್ರಾ ಕಳಗಂ ಪಕ್ಷದಲ್ಲಿ ಮತ್ತಷ್ಟು ಬಿರುಕು ಹೆಚ್ಚಾಗಿದ್ದು, ಕಳೆದ 50 ವರ್ಷದಿಂದ ಪಕ್ಷದಲ್ಲಿದ್ದು, 8 ಬಾರಿ ಗೆದ್ದಿದ್ದ ಹಿರಿಯ ನಾಯಕ ಕೆ.ಎ.ಸೆಂಗೊಟ್ಟೈಯನ್(K.A.Sengottaiyan) ಅವರನ್ನು ಶನಿವಾರ(ನ. 01) ಮಾಜಿ ಸಿಎಂ ಮತ್ತು ಪಕ್ಷದ ಮುಖ್ಯಸ್ಥ ಎಡಪ್ಪಾಡಿ ಪಳನಿಸ್ವಾಮಿ ಪಕ್ಷದ ಸದಸ್ಯತ್ವ ಸ್ಥಾನದಿಂದ ರದ್ದುಗೊಳಿಸಿ ಹೊರ ಹಾಕಿದ್ದಾರೆ.

ಈ ಹಿಂದೆ ಪಕ್ಷ ಬಿಟ್ಟು ಹೋದ ನಾಯಕರನ್ನು ಮರಳಿ ಸೇರಿಸಿಕೊಳ್ಳುವಂತೆ ಕರೆ ನೀಡಿದ್ದಕ್ಕೆ ಸೆಂಗೊಟ್ಟೈಯನ್ ಅವರನ್ನು ಪಕ್ಷದ ಹುದ್ದೆಯಿಂದ ವಜಾಗೊಳಿಸಲಾಗಿತ್ತು. ಆದರೆ ಅ. 30ರಂದು ಸ್ವಾತಂತ್ರ್ಯ ಹೋರಾಟಗಾರ ಪಸುಂಪನ್ ಮುತ್ತುರಾಮಲಿಂಗ ದೇವರ 118 ನೇ ಜನ್ಮ ದಿನಾಚರಣೆಯ ನೆಪದಲ್ಲಿ ಪಕ್ಷದಿಂದ ಉಚ್ಚಾಟನೆಗೊಂಡಿರುವ ಮಾಜಿ ಸಿಎಂ ಓ. ಪನ್ನೀರ್​ಸೆಲ್ವಂ, ಟಿಟಿವಿ ದಿನಕರನ್ ಹಾಗೂ ವಿ.ಶಶಿಕಲಾ ಅವರನ್ನು ಭೇಟಿಯಾಗಿದ್ದು ಎಡಪ್ಪಾಡಿ ಪಳನಿಸ್ವಾಮಿ ಅವರನ್ನು ಕೆರಳಿಸಿತ್ತು. ನಾಲ್ವರು ಪಕ್ಷ ದ್ರೋಹಿಗಳಾಗಿದ್ದು ಡಿಎಂಕೆ ಬಿ ಟೀಂ ಎಂದು ಆರೋಪಿಸಿ ಇಂದು ಸೆಂಗೊಟ್ಟೈಯನ್ ಅವರನ್ನು ಉಚ್ಚಾಟಿಸಿದ್ದಾರೆ.

ಪಕ್ಷದಿಂದ ಹೊರ ಹಾಕಿದ ಬಗ್ಗೆ ಮಾತನಾಡಿರುವ ಕೆ.ಎ.ಸೆಂಗೊಟ್ಟೈಯನ್, ಪಕ್ಷದ ಉಚ್ಚಾಟನೆಯಿಂದ ನನಗೆ ನೋವಾಗಿದೆ. ನನಗೆ ನಿದ್ದೆ ಬಂದಿಲ್ಲ. ಕಣ್ಣೀರು ಬರುತ್ತಿದೆ. 50 ವರ್ಷಕ್ಕೂ ಹೆಚ್ಚು ಕಾಲ ಪಕ್ಷದಲ್ಲಿ ಕೆಲಸ ಮಾಡಿದ ನನಗೆ ಆರೋಪಗಳ ಬಗ್ಗೆ ಕನಿಷ್ಠ ನೋಟಿಸ್ ಕೊಟ್ಟು ಪ್ರತಿಕ್ರಿಯೆ ನೀಡಲು ಅವಕಾಶ ನೀಡದಿರುವುದು ನೋವು ತಂದಿದೆ. ಪಕ್ಷದಿಂದ ಉಚ್ಚಾಟಿಸಲ್ಪಟ್ಟ ನಾಯಕರನ್ನು ಮತ್ತೆ ಸೇರಿಸಿಕೊಳ್ಳುವಂತೆ ನಾನು ಯಾವುದೇ ಅಂತಿಮ ಎಚ್ಚರಿಕೆ ನೀಡಿಲ್ಲ. ಚರ್ಚೆಯ ಬಳಿಕವೇ ನಿರ್ಧಾರ ಮಾಡಿ ಅಂದಿದ್ದೆ. ಎಐಎಡಿಎಂಕೆಯನ್ನು ಕಟ್ಟುವುದು ನನ್ನ ಕನಸಾಗಿತ್ತು. ಅದಕ್ಕೆ ಅದು ಸಲಹೆಯಾಗಿತ್ತು ಎಂದು ಹೇಳಿದ್ದಾರೆ.

ಇನ್ನು ನಾಲ್ವರನ್ನು ಡಿಎಂಕೆಯ ಬಿ ಟೀಂ ಎಂದಿದ್ದ ಎಡಪ್ಪಾಡಿ ಪಳನಿಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ನಾನು ಪಕ್ಷದಿಂದ ಹೊರಹಾಕಲ್ಪಟ್ಟ ನಾಯಕರೊಂದಿಗೆ ಸಹಕಾರ ಕೋರಿ ಮಾತನಾಡಿದ್ದು ನಿಜ. ಆದರೆ ಇಪಿಎಸ್ ನಾನು ಡಿಎಂಕೆಯ ಬಿ ಟೀಂ ಎಂದು ಹೇಳಿದ್ದಾರೆ. ಅದು ಯಾರೆಂದು ದೇಶಕ್ಕೆ ತಿಳಿದಿದೆ. ನಾವು ಯಾರ ಬಿ ಟೀಂ ಅಲ್ಲ, ಎಡಪ್ಪಾಡಿ ಪಳನಿಸ್ವಾಮಿಯೇ ಎ ಟೀಂ ಎಂದು ತಿರುಗೇಟು ನೀಡಿದ್ದಾರೆ.

ನಾನು ಎಂಜಿಆರ್ ಕಾಲದಿಂದಲೂ ಎಐಎಡಿಎಂಕೆಗೆ ಸಮರ್ಪಿತನಾಗಿ ಕೆಲಸ ಮಾಡುತ್ತಿದ್ದೇನೆ. ಎಂಜಿಆರ್ ಅವರ ಮೆಚ್ಚುಗೆಯನ್ನು ಗಳಿಸಿದೆ. ಬಳಿಕ  ಜಯಲಲಿತಾ ಅವರೇ ನನ್ನ ಪ್ರಾಮಾಣಿಕತೆಯನ್ನು ಒಪ್ಪಿಕೊಂಡಿದ್ದರು. ಅವರು ನನಗೆ ಎರಡು ಬಾರಿ ಸಚಿವರನ್ನಾಗಿ ಮಾಡಿ ಪ್ರತಿಫಲ ನೀಡಿದರು.ಎಐಎಡಿಎಂಕೆಯಲ್ಲಿ ವಿಭಜನೆಯನ್ನು ತಪ್ಪಿಸಲು ಪಕ್ಷವನ್ನು ಮುನ್ನಡೆಸುವ ಅವಕಾಶವನ್ನು ನಾನು ಬಿಟ್ಟುಕೊಟ್ಟೆ ಎಂದು ಇದೇ ವೇಳೆ ಹೇಳಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net