ಜನಸ್ಪಂದನ ಸಭೆಯಲ್ಲಿ ಸಮಸ್ಯೆಗಳ ಅನಾವರಣ

Janaspandana Meeting in Shiggavi
Published on

ಶಿಗ್ಗಾಂವಿ: ಬೆಳೆ ವಿಮೆ ಪರಿಹಾರ ವಿತರಣೆಗೆ ಆಗ್ರಹ, ಅರಣ್ಯ ಒತ್ತುವರಿ ತೆರವು, ಹಳ್ಳಿಗಳಿಗೆ ಬಸ್ ಸೌಲಭ್ಯ, ಆಶ್ರಮ ಮನೆ ವಿತರಣೆ, ಜಲ ಜೀವನ ಮಿಷನ್ ಕಾಮಗಾರಿ ವಿಫಲ, ಕೆರೆಗೆ ನೀರು ತುಂಬಿಸುವಲ್ಲಿ ನಿರ್ಲಕ್ಷ್ಯ ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತು ಶನಿವಾರ ಆಯೋಜಿಸಿದ್ದ ಜನಸ್ಪಂದನ ಸಭೆಯಲ್ಲಿ 250ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾದವು.

ಶಿಗ್ಗಾಂವಿ ಪಟ್ಟಣದ ಸಂತೆ ಮೈದಾನದಲ್ಲಿ ಶನಿವಾರ ಆಯೋಜಿಸಿದ್ದ ಶಿಗ್ಗಾಂವಿ, ಸವಣೂರ ತಾಲೂಕು ಮಟ್ಟದ ಜನಸ್ಪಂದನ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಸಮ್ಮುಖದಲ್ಲಿ ತಾಲೂಕಿನ ಸಮಸ್ಯೆಗಳನ್ನು ಅನಾವರಣಗೊಳಿಸಿದರು.

ಸಮಸ್ಯೆಗೆ ಸಚಿವರ ಸ್ಪಂದನೆ

2021-22ರಲ್ಲಿ ಅತಿವೃಷ್ಟಿಯಿಂದ ಹಾನಿಗೊಳಗಾದ ಮನೆಗಳಿಗೆ ಪರಿಹಾರ ವಿತರಣೆ ಬಾಕಿ, ರೈತರ ಜಮೀನುಗಳಿಗೆ ಹೋಗುವ ರಸ್ತೆ ದುರಸ್ತಿ ಮಾಡುವುದು, ಅರಣ್ಯ ಇಲಾಖೆಯ ಭೂಮಿ ಒತ್ತುವರಿ ತೆರವು ಮಾಡುವುದು, ಹಳ್ಳಿಗಳಿಗೆ ಸಾರಿಗೆ ಬಸ್​ಗಳು ಸಮರ್ಪಕವಾಗಿ ಸಂಚರಿಸುತ್ತಿಲ್ಲ. ಶಿಗ್ಗಾಂವಿ, ಬಂಕಾಪುರ ಪಟ್ಟಣದಲ್ಲಿ ನಿರ್ವಣವಾಗುತ್ತಿರುವ ಜಿ-ಪ್ಲಸ್​ಒನ್ ಆಶ್ರಯ ಮನೆಗಳ ವಿತರಣೆಯಲ್ಲಿ ವಿಳಂಬ ಧೋರಣೆ ಕುರಿತು ಸಾರ್ವಜನಿಕರು ಮನವಿ ಸಲ್ಲಿಸಿದರು.

ಅರ್ಹ ಅಂಗವಿಕಲರಿಗೆ ತಕ್ಷಣ ತ್ರಿಚಕ್ರ ವಾಹನ ವಿತರಿಸಬೇಕು. ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಬಸ್ ಸಂಚಾರಕ್ಕೆ ವ್ಯವಸ್ಥೆ ಮಾಡಿ ಎಂದು ಕೆಎಸ್​ಆರ್​ಟಿಸಿ ಅಧಿಕಾರಿಗಳಿಗೆ ಸೂಚಿಸಿದರು.

ಮುದ್ದಿನಕೊಪ್ಪ ಗ್ರಾಪಂ ವ್ಯಾಪ್ತಿಯಲ್ಲಿ 124 ಎಕರೆ ಸರ್ಕಾರಿ ಭೂಮಿ ಒತ್ತುವರಿಯಾಗಿದ್ದರೂ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂಬ ದೂರಿನ ಮಾಹಿತಿ ಪಡೆದ ಸಚಿವರು, ಜಿಪಂ ಸಿಇಒ ಅಕ್ಷಯ ಶ್ರೀಧರ ನೇತೃತ್ವದಲ್ಲಿ ಕಂದಾಯ ಇಲಾಖೆ ಮತ್ತು ಭೂಮಾಪನಾ ಇಲಾಖೆ ಅಧಿಕಾರಿಗಳು ಜಂಟಿ ಸರ್ವೆ ಮಾಡಿ ಎಂದು ಆದೇಶ ನೀಡಿದರು. ಒತ್ತುವರಿ ಆರೋಪ ನಿಜ ಎಂದಾದರೆ ಸರ್ಕಾರದ ಭೂಮಿಯನ್ನು ವಶಪಡಿಸಿಕೊಳ್ಳಿ ಎಂದು ಸೂಚಿಸಿದರು.

ಜಲಜೀವನ್ ಮಿಷನ್ ಯೋಜನೆ ಅನುಷ್ಠಾನದಲ್ಲಿ ಗುತ್ತಿಗೆದಾರರ ಲೋಪ ಕಂಡು ಬಂದರೆ ಕಪ್ಪುಪಟ್ಟಿಗೆ ಸೇರಿಸಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಿ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು.

ಜಿಲ್ಲೆಯಲ್ಲಿರುವ ಎರಡು ಸಕ್ಕರೆ ಕಾರ್ಖಾನೆಗಳಲ್ಲಿ ಸಕ್ಕರೆ ಇಳುವರಿ ಪ್ರಮಾಣ ಕಡಿಮೆ ತೋರಿಸುತ್ತಿದ್ದು, ರೈತರು ಪೂರೈಕೆ ಮಾಡಿದ ಕಬ್ಬಿಗೆ ಕಡಿಮೆ ಎಸ್​ಆರ್​ಪಿ ದರ ಕೊಡುತ್ತಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಅತಿ ಹೆಚ್ಚು ಬೆಲೆ ಸಿಗುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ರೈತ ಸಂಘದ ಮುಖಂಡರು ಮನವಿ ಮಾಡಿದರು. ಈ ಬಗ್ಗೆ ಪರಿಶೀಲನೆ ನಡೆಸಲು ವಿಶೇಷ ತಂಡ ರಚನೆ ಮಾಡಲಿದ್ದು, ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಸಾಗವಾನಿ ಕಟ್ಟಿಗೆ ಪತ್ತೆಗೆ ಮನವಿ

ಹೊಸ ತಹಸೀಲ್ದಾರ್ ಕಚೇರಿ ನಿರ್ವಣಕ್ಕೆ ಹಳೆಯ ಕಚೇರಿಯನ್ನು ನೆಲಸಮ ಮಾಡಲಾಗಿದ್ದು, ಈ ಕಟ್ಟಡಕ್ಕೆ ಬಳಸಿದ್ದ ಸಾಗವಾನಿ ಕಟ್ಟಿಗೆಗಳು ಏನಾದವು ಎಂಬುದೇ ಗೊತ್ತಿಲ್ಲ. ಸಾಗವಾನಿ ಕಟ್ಟಿಗೆ ಪತ್ತೆ ಮಾಡಿ ಹರಾಜು ಹಾಕಿ ಎಂದು ಮಹಿಳೆಯೊಬ್ಬರು ಸಚಿವ ಶಿವಾನಂದ ಪಾಟೀಲ ಅವರಿಗೆ ಮನವಿ ಮಾಡಿದರು.

ಜನರ ಸಮಸ್ಯೆ ಪರಿಹಾರಕ್ಕೆ ಸರ್ಕಾರದ ಆದ್ಯತೆ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳ ಸಮಸ್ಯೆಗಳ ನಿವಾರಣೆ ಆಳುವ ಸರ್ಕಾರದ ಪ್ರಮುಖ ಜವಾಬ್ದಾರಿ ಆಗಿದೆ. ಜನರ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕಲ್ಪಿಸುವ ಜವಾಬ್ದಾರಿಯನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಜನಸ್ಪಂದನ ಕಾರ್ಯಕ್ರಮ ಆಯೋಜಿಸುವ ಮೂಲಕ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹೇಳಿದರು.

ಜನಸ್ಪಂದನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲಾಮಟ್ಟದಲ್ಲಿ ಜನಸ್ಪಂದನ ಕಾರ್ಯಕ್ರಮ ಆಯೋಜಿಸಲಾಗುತ್ತಿತ್ತು. ಆದರೆ, ಈಗ ತಾಲೂಕು ಮಟ್ಟದಲ್ಲಿ ಜನಸ್ಪಂದನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಅಬಕಾರಿ ಅಧಿಕಾರಿ, ಪಿಡಿಒ ಅಮಾನತು

ತಾಲೂಕಿನ ವಿವಿಧೆಡೆ ಅಕ್ರಮ ಮದ್ಯ ಮಾರಾಟ ತಡೆಯುವಲ್ಲಿ ನಿರ್ಲಕ್ಷ್ಯ ವಹಿಸಿದ ತಾಲೂಕು ಅಬಕಾರಿ ಇನ್​ಸ್ಪೆಕ್ಟರ್ ಪ್ರಕಾಶ ಮಾಕಣ್ಣವರ್ ಹಾಗೂ ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸದ ದೂರಿನ ಹಿನ್ನೆಲೆಯಲ್ಲಿ ಗುಡ್ಡದ ಚನ್ನಾಪುರ ಗ್ರಾಪಂ ಅಭಿವೃದ್ಧಿ ಅಧಿಕಾರಿ ಇಮ್ತಿಯಾಜ್ ಅಹಮದ್ ಅವರನ್ನು ಅಮಾನತು ಮಾಡಲು ಸಚಿವರು ಆದೇಶ ನೀಡಿದರು. ಬಂಕಾಪುರ ಪುರಸಭೆ ಮುಖ್ಯಾಧಿಕಾರಿ ಶಿವಪ್ಪ ಅವರ ಮೇಲೆ ಆರೋಪ ಬಂದ ಹಿನ್ನೆಲೆಯಲ್ಲಿ ಈ ಕುರಿತು ವರದಿ ನೀಡುವಂತೆ ಯುವಜನ ಕ್ರೀಡಾ ಇಲಾಖೆ ನಿರ್ದೇಶಕಿ ಮಮತಾ ಅವರಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ವಿಜಯ ಮಹಾಂತೇಶ, ಸಿಇಒ ಅಕ್ಷಯ ಶ್ರೀಧರ, ಸೋಮಣ್ಣ ಬೇವಿನಮರದ, ಶಾಸಕರಾದ ಬಸವರಾಜ ಶಿವಣ್ಣನವರ, ಶ್ರೀನಿವಾಸ ಮಾನೆ, ಶಿಗ್ಗಾಂವಿ ಪುರಸಭೆ ಅಧ್ಯಕ್ಷ ಸಿದ್ದಾರ್ಥ ಗೌಡ ಪಾಟೀಲ, ಬಂಕಾಪುರ ಪುರಸಭೆ ಅಧ್ಯಕ್ಷೆ ಮಮತಾ ಮಾಗಿ, ಸವಣೂರು ಪುರಸಭೆ ಅಧ್ಯಕ್ಷ ಅಲ್ಲಾಉದ್ದಿನ ಮನಿಯಾರ್, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ಶಿರಕೋಳ ಇತರ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net