

ನರಗುಂದ: ವಿದ್ಯಾರ್ಥಿ ಜೀವನದಿಂದ ಶಿಸ್ತುಬದ್ಧವಾಗಿ ಕ್ರೀಡೆಯಲ್ಲಿ ಭಾಗವಹಿಸಿಕೊಂಡು ಬಂದರೆ, ಭವಿಷ್ಯದಲ್ಲಿ ಉತ್ತಮ ಕ್ರೀಡಾಪಟುಗಳಾಗಬಹುದು ಎಂದು ಪತ್ರಿವನಮಠದ ಗುರುಸಿದ್ಧವೀರ ಶಿವಯೋಗಿ ಶಿವಾಚಾರ್ಯರು ಹೇಳಿದರು.
ತಾಲೂಕಿನ ಜಗಾಪೂರ ಗ್ರಾಮದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜಗಾಪೂರ ಗ್ರೂಪ್ ಮಟ್ಟದ ಸರ್ಕಾರಿ ಪ್ರೌಢಶಾಲೆಗಳ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಫ್. ಮಜ್ಜಗಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹಿಂದಿನ ಕಾಲದಲ್ಲಿ ಶ್ರಮಾಧಾರಿತ ಜೀವನಶೈಲಿ ಇತ್ತು. ಇದರಿಂದ ಜನರು ಉತ್ತಮ ಆರೋಗ್ಯ ಕಾಪಾಡಿಕೊಳ್ಳುತ್ತಿದ್ದರು. ತರಗತಿಯ ಪಾಠಕ್ಕೆ ಹೆಚ್ಚಿನ ಆದ್ಯತೆ ನೀಡಿ ಕ್ರೀಡೆಗಳಿಗೆ ಇಂದಿನ ಕಾಲದಲ್ಲಿ ಮನ್ನಣೆ ನೀಡದಂತಹ ಮನಸ್ಥಿತಿಯಲ್ಲಿ ನಾವಿದ್ದೇವೆ. ವಿದ್ಯಾರ್ಥಿಗಳು ಇದರಿಂದ ಹೊರಬಂದು ದೇಶವೇ ನಿಬ್ಬೆರಗಾಗುವಂತೆ ನೋಡುವ ಸಾಧನೆಗೆ ಮುಂದಾಗಬೇಕು ಎಂದು ತಿಳಿಸಿದರು.
ದೈಹಿಕ ಶಿಕ್ಷಣಾಧಿಕಾರಿ ಎನ್.ಆರ್. ನಿಡಗುಂದಿ ಮಾತನಾಡಿ, ಇಂದು ಸಾವಿರ ವಿದ್ಯಾರ್ಥಿಗಳಲ್ಲಿ ಮೂವರು ಕ್ರೀಡಾ ಪಟುಗಳನ್ನು ಹುಡುಕುವುದು ಕಷ್ಟವಾಗಿದೆ. ಕ್ರೀಡೆಯಲ್ಲಿ ವಿದ್ಯಾರ್ಥಿಗಳ ಕಠಿಣ ಪರಿಶ್ರಮವಿದ್ದರೆ ಗೆಲುವು ಸಾಧ್ಯವಾಗಲಿ ಎಂದರು.
ಜಗಾಪೂರದ ಸರ್ಕಾರಿ ಪ್ರೌಢಶಾಲೆ ಮುಖ್ಯ ಗುರು ಎಸ್.ವಿ. ಬದಾಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎಸ್ಡಿಎಂಸಿ ಅಧ್ಯಕ್ಷ ವೆಂಕರಡ್ಡಿ ಕಗಧಾಳ, ನಿವೃತ್ತ ದೈಹಿಕ ಶಿಕ್ಷಣಾಧಿಕಾರಿ ಎಂ.ಎಂ. ಕಲಹಾಳ, ಗ್ರಾಪಂ ಸದಸ್ಯ ಬಿ.ಎಸ್. ಕಾಮರೆಡ್ಡಿ, ಅಕ್ಷರ ದಾಸೋಹ ಅಧಿಕಾರಿ ಆನಂದ ಭೋವಿ, ಎಚ್.ಎಸ್. ಬೆಳಕೊಪ್ಪದ, ಹುಣಸೀಕಟ್ಟಿ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು ಇದ್ದರು.