ಟಿ20 ವಿಶ್ವಕಪ್ ತಂಡದಿಂದ ಕೈಬಿಟ್ಟಿದ್ದಕ್ಕೆ ಆಯ್ಕೆಗಾರರಿಗೆ ಚಾಹಲ್ ಟಾಂಗ್!

cahal web
Published on

ನವದೆಹಲಿ: ಕಳೆದ 4 ವರ್ಷಗಳಿಂದ ಸೀಮಿತ ಓವರ್ ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾದ ಪ್ರಧಾನ ಸ್ಪಿನ್ನರ್ ಆಗಿದ್ದರೂ, ಮುಂಬರುವ ಟಿ20 ವಿಶ್ವಕಪ್‌ಗೆ ತಂಡದಿಂದ ಕಡೆಗಣಿಸಲ್ಪಟ್ಟಿರುವ ಸ್ಪಿನ್ನರ್ ಯಜುವೇಂದ್ರ ಚಾಹಲ್, ‘ಫಾಸ್ಟರ್ ಸ್ಪಿನ್ನರ್’ ಕಾಮೆಂಟ್‌ನೊಂದಿಗೆ ಟ್ವಿಟರ್‌ನಲ್ಲಿ ರಾಷ್ಟ್ರೀಯ ಆಯ್ಕೆಗಾರರಿಗೆ ಟಾಂಗ್ ನೀಡಿದ್ದಾರೆ.

ಮಾಜಿ ಕ್ರಿಕೆಟಿಗ ಹಾಗೂ ವೀಕ್ಷಕವಿವರಣೆಕಾರ ಆಕಾಶ್ ಚೋಪ್ರಾ, ಕಳೆದ ವರ್ಷ ಯುಎಇಯಲ್ಲಿ ನಡೆದ ಐಪಿಎಲ್‌ನ ಮೊದಲ 30 ಪಂದ್ಯಗಳನ್ನು ಗಮನಿಸಿದರೆ ಈ ವರ್ಷ ಯಾವುದು ಪರಿಣಾಮಕಾರಿ ಎನಿಸಬಹುದು ಎಂದು ಕೇಳಿರುವ ಪ್ರಶ್ನೆಗೆ 31 ವರ್ಷದ ಚಾಹಲ್, ‘ಫಾಸ್ಟರ್ ಸ್ಪಿನ್ನರ್ ಭಯ್ಯ? ಎಂದು ಉತ್ತರಿಸಿದ್ದಾರೆ. ಜತೆಗೆ ‘ಜಸ್ಟ್ ಕಿಡ್ಡಿಂಗ್’ ಹ್ಯಾಷ್‌ಟ್ಯಾಗ್ ಹಾಕಿದ್ದಾರೆ.

ಈ ಮುನ್ನ ಆಯ್ಕೆ ಸಮಿತಿ ಅಧ್ಯಕ್ಷ ಚೇತನ್ ಶರ್ಮ, ಚಾಹಲ್‌ಗೆ ಬದಲಾಗಿ ರಾಹುಲ್ ಚಹರ್‌ರನ್ನು ಆರಿಸಿದ್ದನ್ನು ಸಮರ್ಥಿಸುತ್ತ ಯುಎಇ ಪಿಚ್‌ಗಳಲ್ಲಿ ವೇಗವಾಗಿ ಬೌಲಿಂಗ್ ಮಾಡುವ ಸ್ಪಿನ್ನರ್ ಅಗತ್ಯವಿತ್ತು ಎಂದಿದ್ದರು. ಅದಕ್ಕೆ ಪ್ರತಿಯಾಗಿ ಆರ್‌ಸಿಬಿ ಆಟಗಾರ ಚಾಹಲ್ ಈ ರೀತಿ ತಮಾಷೆ ಮಾಡಿದ್ದಾರೆ.

ಭಾರತ ಪರ ಇದುವರೆಗೆ 49 ಟಿ20 ಪಂದ್ಯ ಆಡಿ 63 ವಿಕೆಟ್ ಕಬಳಿಸಿರುವ ಚಾಹಲ್, ಟಿ20 ಕ್ರಿಕೆಟ್‌ನಲ್ಲಿ ಭಾರತದ ಗರಿಷ್ಠ ವಿಕೆಟ್ ಟೇಕರ್ ಕೂಡ ಆಗಿದ್ದಾರೆ. ಚಾಹಲ್‌ರನ್ನು ವಿಶ್ವಕಪ್ ತಂಡದಿಂದ ಕೈಬಿಟ್ಟಿದ್ದಕ್ಕೆ ಈ ಮುನ್ನ ಹಿರಿಯ ಸ್ಪಿನ್ನರ್ ಹರ್ಭಜನ್ ಸಿಂಗ್ ಕೂಡ ಆಯ್ಕೆ ಸಮಿತಿಯನ್ನು ಟೀಕಿಸಿದ್ದರು.

ವಿಶ್ವಕಪ್ ತಂಡದಿಂದ ಕಡೆಗಣಿಸಲ್ಪಟ್ಟ ಆಟಗಾರನೊಬ್ಬ ಆಯ್ಕೆಗಾರರಿಗೆ ಟಾಂಗ್ ನೀಡಿದ್ದು ಇದೇ ಮೊದಲಲ್ಲ. ಈ ಮುನ್ನ 2019ರ ಏಕದಿನ ವಿಶ್ವಕಪ್ ತಂಡದಿಂದ ಕಡೆಗಣಿಸಲ್ಪಟ್ಟಾಗ ಬ್ಯಾಟ್ಸ್‌ಮನ್ ಅಂಬಟಿ ರಾಯುಡು ಕೂಡ ಆಯ್ಕೆಗಾರರಿಗೆ ಟಾಂಗ್ ನೀಡಿದ್ದರು. ‘3 ಡೈಮೆನ್ಷನ್’ ಆಟಗಾರರಾಗಿರುವ ಕಾರಣಕ್ಕಾಗಿ ವಿಜಯ್ ಶಂಕರ್‌ರನ್ನು ಆರಿಸಿದ್ದೇವೆ ಎಂದು ಆಗಿನ ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್‌ಕೆ ಪ್ರಸಾದ್, ರಾಯುಡು ಕೈಬಿಟ್ಟಿದ್ದನ್ನು ಸಮರ್ಥಿಸಿಕೊಂಡಿದ್ದರು. ಇದಕ್ಕೆ ಪ್ರತಿಯಾಗಿ ರಾಯುಡು, ‘ವಿಶ್ವಕಪ್ ಪಂದ್ಯಗಳನ್ನು ನೋಡುವ ಸಲುವಾಗಿ ಈಗಷ್ಟೇ 3ಡಿ ಗ್ಲಾಸ್‌ಗಳಿಗೆ ಆರ್ಡರ್ ನೀಡಿರುವೆ’ ಎಂದು ಟ್ವೀಟಿಸಿ, ಆಯ್ಕೆಗಾರರನ್ನು ಛೇಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net