

ಬೆಂಗಳೂರು: ನ್ಯೂಯಾರ್ಕ್‌ನ ಪ್ರತಿಷ್ಠಿತ ಎನ್‌ವೈಯು ಕಾಲೇಜಿನಲ್ಲಿ ಪದವಿ ಪಡೆದು ಅಲ್ಲಿಯೇ ಪ್ರಾಧ್ಯಾಪಕರಾಗಿದ್ದ ಸಹದೇವ್ ಕೆಲವಡಿ, ಬಳಿಕ ರೂಪಾ ರಾವ್ ನಿರ್ದೇಶನದ ‘ಗಂಟುಮೂಟೆ’ ಸಿನಿಮಾದ ಛಾಯಾಗ್ರಾಹಕನಾಗಿ ಸಿನಿಮಾರಂಗಕ್ಕೆ ಪದಾರ್ಪಣೆ ಮಾಡಿದರು. ‘ಗಂಟುಮೂಟೆ’ ನ್ಯೂಯಾರ್ಕ್ ಫಿಲಂ ಫೆಸ್ಟಿವಲ್‌ನಲ್ಲಿ ಮೊದಲ ಬಾರಿ ಪ್ರಶಸ್ತಿ ಪಡೆದ ಕನ್ನಡ ಸಿನಿಮಾ ಎಂಬ ದಾಖಲೆ ಬರೆಯಿತು. ಇದೀಗ ಸಹದೇವ್, ‘ಕೆಂಡ’ ಮೂಲಕ ನಿರ್ದೇಶಕರ ಕ್ಯಾಪ್ ತೊಟ್ಟಿದ್ದಾರೆ. ಚೊಚ್ಚಲ ನಿರ್ದೇಶನದ ಬಗ್ಗೆ ಸಹದೇವ್, ‘ಛಾಯಾಗ್ರಹಣ ಹಾಗೂ ನಿರ್ದೇಶಕನ ಕರ್ತವ್ಯಗಳು ಬೇರೆ ಬೇರೆಯಾಗಿರುತ್ತವೆ. ನಿರ್ದೇಶಕನ ದೃಷ್ಟಿಕೋನವನ್ನು ಸೆರೆಹಿಡಿಯುವುದೇ ಛಾಯಾಗ್ರಾಹಕನ ಆದ್ಯತೆ. ಆದರೆ, ನಿರ್ದೇಶಕ ಇಡೀ ಸಿನಿಮಾವನ್ನು ಕಟ್ಟಿಕೊಡಬೇಕಾಗುತ್ತದೆ. ‘ಗಂಟುಮೂಟೆ’ ಸಿನಿಮಾದಲ್ಲಿ ಸಿನಿಮಾಟೋಗ್ರಫಿ ಜತೆ ಚಿತ್ರಕಥೆಯಲ್ಲೂ ಕೆಲಸ ಮಾಡಿದ ಕಾರಣ ಈ ಎರಡು ಕೆಲಸಗಳು ಕಷ್ಟವಾಗಲಿಲ್ಲ’ ಎಂದು ಹೇಳಿಕೊಳ್ಳುತ್ತಾರೆ.
ಕನ್ನಡ ಸಿನಿಮಾ ವರ್ಲ್ಡ್ ಸಿನಿಮಾವಿದ್ದಂತೆ
ಸಹದೇವ್ ಕೆಲಸ ಮಾಡಿರುವ ‘ಗಂಟುಮೂಟೆ’ ಮತ್ತು ‘ಕೆಂಡ’ ಎರಡು ಚಿತ್ರಗಳೂ ಹಲವು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡಿವೆ. ಈ ಬಗ್ಗೆ ‘ನನ್ನ ಕಥೆಗಳು ಹುಟ್ಟುವುದು ಬೆಂಗಳೂರಿನಿಂದ. ಇಲ್ಲಿನ ಜನರ ಬದುಕನ್ನು ಪಾಶ್ಚಾತ್ಯರಿಗೆ ತೋರಿಸಬೇಕು ಎಂಬ ಕಾರಣಕ್ಕಾಗಿಯೇ ಯುರೋಪ್‌ನಿಂದ ತಾಯ್ನಡಿಗೆ ಬಂದಿದ್ದು. ಕನ್ನಡ ಸಿನಿಮಾ ಕೂಡ ವರ್ಲ್ಡ್ ಸಿನಿಮಾವಿದ್ದಂತೆ. ಅದೇ ಆತ್ಮವಿಶ್ವಾಸದೊಂದಿಗೆ ನಾವು ಮುನ್ನಡೆಯಬೇಕಿದೆ. ಇದರ ರಿಸಲ್ಟ್ ‘ಕೆಂಡ’ ತಂದುಕೊಟ್ಟಿದೆ. ಪ್ರೀಮಿಯರ್ ಶೋ ಮೂಲಕ ಲಂಡನ್ ಹಾಗೂ ಸ್ವಿಜ್ವರ್‌ಲೆಂಡ್‌ನಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ’ ಎನ್ನುತ್ತಾರೆ ಸಹದೇವ್.
ಕಟೆಂಟ್ ಈಸ್ ದ ಕಿಂಗ್
ನಿರ್ದೇಶನ, ಚಿತ್ರಕಥೆ ಹಾಗೂ ಛಾಯಾಗ್ರಾಹಕನಾಗಿರುವ ಸಹದೇವ್ ತಮ್ಮ ಮುಂದಿನ ಸಿನಿಮಾದಲ್ಲಿ ಯಾವುದೇ ಅವಕಾಶ ಬಂದರೂ ಕಾರ್ಯನಿರ್ವಹಿಸಲು ಸಜ್ಜಾಗಿದ್ದು, ‘ಕಟೆಂಟ್ ಆಧಾರಿತ ಯಾವುದೇ ಸಿನಿಮಾ ಬಂದರೂ ನಾನು ಛಾಯಾಗ್ರಾಹಕ, ನಿರ್ದೇಶಕ, ಚಿತ್ರಕಥೆ ಈ ಮೂರರಲ್ಲಿ ಯಾವುದೇ ವಿಭಾಗದಲ್ಲಿ ಕಾರ್ಯನಿರ್ವಹಿಸಲು ಸಿದ್ಧ’ ಎನ್ನುತ್ತಾರೆ. ಹೀಗಾಗಿಯೇ ವಿಷಯಾಧಾರಿತ ಸಿನಿಮಾಗಳ ಬಗ್ಗೆ ಹೆಚ್ಚು ಗಮನ ಹರಿಸಿರುವ ಸಹದೇವ್, ‘‘ಕೆಂಡ’ ತೆರೆಕಂಡ ಬಳಿಕ ಸಿನಿಮಾಕ್ಕೆ ಆದ್ಯತೆ ನೀಡಲಿದ್ದೇನೆ. ಎರಡು ಸ್ಕ್ರಿಪ್ಟ್‌ಗಳು ಸಿದ್ಧವಿದ್ದು, ಜತೆಗೆ ವೆಬ್‌ಸರಣಿ ನಿರ್ಮಾಣದ ಯೋಚನೆಯು ಇದೆ’ ಎಂದು ಹೇಳಿಕೊಳ್ಳುತ್ತಾರೆ.
ಜ್ಞಾನ ಹಾಗೂ ಧರ್ಮದ ಈ ಎರಡು ದಾರಿ ಆಧಾರಿಸಿಯೇ ನನ್ನ ಕಥೆಗಳಿರುತ್ತವೆ. ಇದನ್ನು ಸಿನಿಮಾ ಹಾಗೂ ಜೀವನದಲ್ಲಿ ಮುಂದುವರಿಸುತ್ತೇನೆ. ಸ್ಟಿಜ್ವರ್‌ಲ್ಯಾಂಡ್ ಹಾಗೂ ಲಂಡನ್‌ನಲ್ಲಿ ಕೂಡ ಪ್ರದರ್ಶನ ಕಂಡಿದೆ. ಇನ್ನು ಜರ್ಮನಿಯ ಬರ್ಲಿನ್‌ನಲ್ಲೂ ವಿಶೇಷ ಪ್ರದರ್ಶನಕ್ಕೆ ಆಹ್ವಾನ ಬಂದಿದ್ದು, ಮೊದಲು ರಾಜ್ಯದಲ್ಲಿ ಬಿಡುಗಡೆ ಮಾಡಿದ ಬಳಿಕ ಅಲ್ಲಿ ಶೋ ಮಾಡುವ ಬಗ್ಗೆ ಯೋಚಿಸಲಿದ್ದೇವೆ.
ಸಹದೇವ್ ಕೆಲವಡಿ, ನಿರ್ದೇಶಕ