ಮೋಬೈಲ್​ ದುರಸ್ತಿಗೆ ನಿರ್ದೇಶನ

law-4617873_1920
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಗ್ರಾಹಕ ಖರೀದಿಸಿದ ಮೋಬೈಲ್​ ಅನ್ನು ಒಂದು ತಿಂಗಳಲ್ಲಿ ದುರಸ್ತಿ ಮಾಡಿಕೊಡಬೇಕು. ತಪ್ಪಿದಲ್ಲಿ ಹೊಸ ಮೋಬೈಲ್​ ನೀಡುವಂತೆ ಜಿಲ್ಲಾ ಗ್ರಾಹಕರ ಆಯೋಗ ಸೋಮವಾರ ಆದೇಶ ನೀಡಿದೆ.
ನಗರದ ಕುಮಾರೇಶ್ವರ ಕಾಲನಿಯ ನಿವೃತ್ತ ಪೊಲೀಸ್​ ಅಧೀಕ್ಷಕ ಮಲ್ಲಿಕಾರ್ಜುನ ದಂಡಿನ್​ ಅವರು ಟಿಕಾರೆ ರಸ್ತೆಯ ಸಿಟಿ ಮೋಬೈಲ್ಸ್​ ಅಂಗಡಿಯಲ್ಲಿ 2023ರ ಫೆ. 17ರಂದು 10 ಸಾವಿರ ರೂ. ಮೌಲ್ಯದ ಸ್ಯಾಮಸಂಗ್​ ಗ್ಯಾಲಕ್ಸಿ ಮೋಬೈಲ್​ ಖರೀದಿಸಿದ್ದರು. ಕೆಲ ದಿನಗಳಲ್ಲೇ ಸಮಸ್ಯೆ ಕಂಡು ಬಂದು ಬ್ಯಾಟರಿ ಬೇಗನೆ ಇಳಿಮುಖವಾಗುತ್ತಿತ್ತು. ಸಮಸ್ಯೆ ಸರಿಪಡಿಸುವಂತೆ ಹೇಳಿದರೂ ನಿರ್ಲಕ್ಷ ವಹಿಸಿದ್ದರು. ಹೀಗಾಗಿ ಸಿಟಿ ಮೋಬೈಲ್ಸ್​ ಹಾಗೂ ಸವಿರ್ಸ್​ ಸೆಂಟರ್​ನವರು ಸೇವಾ ನ್ಯೂನ್ಯತೆ ಎಸಗಿದ್ದಾರೆ ಎಂದು 2023ರ ಏ. 27ರಂದು ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ದೂರಿನ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ, ಸದಸ್ಯರಾದ ವಿಶಾಲಾ ಬೋಳಶೆಟ್ಟಿ ಮತ್ತು ಪ್ರಭು ಹಿರೇಮಠ, ಮೋಬೈಲ್​ನಲ್ಲಿ ಉಂಟಾದ ದೋಷ ಪಡಿಸುವುದು ಅಂಗಡಿಯವರ ಕರ್ತವ್ಯ. ಆದರೆ ಸೇವಾ ನ್ಯೂನ್ಯತೆ ಎಸಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಹೀಗಾಗಿ ತೀರ್ಪು ನೀಡಿದ 1 ತಿಂಗಳಲ್ಲಿ ಸಿಟಿ ಮೋಬೈಲ್ಸ್​ ಹಾಗೂ ಸವಿರ್ಸ್​ ಸೆಂಟರ್​ ಮತ್ತು ಉತ್ಪಾದಕ ಸ್ಯಾಮ್​ ಸಂಗ್​ ಕಂಪನಿ ಮೋಬೈಲ್​ ದುರಸ್ತಿ ಮಾಡಿಕೊಡಬೇಕು. ತಪ್ಪಿದ್ದಲ್ಲಿ ಹಳೇ ಮೋಬೈಲ್​ ಬದಲಿಸಿ ಹೊಸದನ್ನು ನೀಡಬೇಕು. ದೂರುದಾರರಿಗೆ ಆದ ಅನನುಕೂಲ ಮತ್ತು ಮಾನಸಿಕ ಹಿಂಸೆಗೆ 10,000 ರೂ., ಪ್ರಕರಣದ ಖರ್ಚು ವೆಚ್ಚ 5,000 ರೂ.ಗಳನ್ನು ಮಲ್ಲಿಕಾರ್ಜುನ ಅವರಿಗೆ ನೀಡಬೇಕು ಎಂದು ಆಯೋಗ ಆದೇಶಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net