ಚರಂಡಿಗೆ ಕೊಳಚೆ ನೀರು ನೇರ ಸಂಪರ್ಕಪರಿಶೀಲನೆ

karyacharane
ಪಡುಬಿದ್ರಿಯಲ್ಲಿ ಮಳೆ ನೀರು ಹರಿಯುವ ಚರಂಡಿಗೆ ಹೋಟೆಲ್ ಕೊಳಚೆ ನೀರು ಪೈಪ್ ಸಂಪರ್ಕ ಪರಿಶೀಲನೆಗೆ ಗ್ರಾಪಂನಿಂದ ಜೆಸಿಬಿ ಕಾರ್ಯಾಚರಣೆ ನಡೆಸಲಾಯಿತು.
Published on

ಪಡುಬಿದ್ರಿ: ರಾಷ್ಟ್ರೀಯ ಹೆದ್ದಾರಿ 66ರ ಪೇಟೆಯ ಇಕ್ಕೆಲಗಳಲ್ಲಿ ಮಳೆ ನೀರು ಹರಿಯುವ ಚರಂಡಿಗೆ ಹೋಟೆಲ್‌ಗಳಿಂದ ನೇರವಾಗಿ ಕೊಳಚೆ ನೀರು ಹರಿಯಬಿಡುತ್ತಿದ್ದು, ಜನಾಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಪಡುಬಿದ್ರಿ ಗ್ರಾಮ ಪಂಚಾಯಿತಿ ಬುಧವಾರ ಪರಿಶೀಲನೆ ಆರಂಭಿಸಿದೆ. ಜೆಸಿಬಿಯಿಂದ ರಸ್ತೆ ಬದಿ ಅಗೆದು ಕೊಳಚೆ ನೀರು ಸಂಪರ್ಕದ ಪೈಪ್‌ಲೈನ್‌ಗಳನ್ನು ಪರಿಶೀಲಿಸುತ್ತಿದೆ.

ದಶಕಗಳಿಂದ ಹೆದ್ದಾರಿ ಇಕ್ಕೆಲಗಳ ಚರಂಡಿಯಲ್ಲಿ ಕೊಳಚೆ ನೀರು ಹರಿಯಬಿಟ್ಟ ಪರಿಣಾಮ ದುರ್ವಾಸನೆಯಿಂದ ನಾಗರಿಕರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದರು. ಈ ಬಗ್ಗೆ ಹಲವು ವರ್ಷಗಳಿಂದ ಗ್ರಾಮಾಡಳಿತಕ್ಕೆ ದೂರು ನೀಡಿದರೂ, ಪ್ರತಿಷ್ಠಿತರ ಒತ್ತಡಕ್ಕೆ ಮಣಿದು ಯಾವುದೇ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿದ್ದರು.

ಗ್ರಾಮಸ್ಥರು ದೂರು ನೀಡಿದಾಗ ಹೋಟೆಲ್‌ಗಳಿಗೆ ನೋಟಿಸ್ ನೀಡಿ ಸುಮ್ಮನಾಗುತ್ತಿದ್ದ ಗ್ರಾಮಾಡಳಿತದ ವಿರುದ್ಧ ಇತ್ತೀಚೆಗೆ ನಡೆದ ಗ್ರಾಮಸಭೆಯಲ್ಲಿ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ವಾರದೊಳಗೆ ಕ್ರಮ ಕೈಗೊಳ್ಳುವುದಾಗಿ ಪಿಡಿಒ ಭರವಸೆ ನೀಡಿದ್ದರು. ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಸದಸ್ಯರ ನಿರ್ಧಾರದಂತೆ ಜೆಸಿಬಿ ಮೂಲಕ ಪೈಪ್‌ಲೈನ್ ಪರಿಶೀಲಿಸಲು ತೀರ್ಮಾನಿಸಲಾಗಿತ್ತು.

ಕಾರ್ಯಾಚರಣೆ ಆರಂಭ: ಪಿಡಿಒ, ಗ್ರಾಪಂ ಅಧ್ಯಕ್ಷೆ ಶಶಿಕಲಾ ವೈ., ಉಪಾಧ್ಯಕ್ಷ ಹೇಮಚಂದ್ರ ಮತ್ತು ಸದಸ್ಯರ ನೇತೃತ್ವದಲ್ಲಿ ಕೊಳಚೆನೀರು ಹರಿಯ ಬಿಡುವ ಸ್ಥಳಗಳ ಪರಿಶೀಲನೆ ಆರಂಭಿಸಲಾಯಿತು. ಜೆಸಿಬಿಯಿಂದ ಅಗೆದು ಪರಿಶೀಲಿಸುವ ವೇಳೆ ಪಡುಬಿದ್ರಿಯ ಪ್ರತಿಷ್ಠಿತ ಹೋಟೆಲೊಂದು ಸೇರಿದಂತೆ ವಸತಿ ಸಂಕೀರ್ಣವೊಂದರ ಶೌಚಗೃಹದ ಎರಡು ಪೈಪ್ ಸಂಪರ್ಕ ಹಾಗೂ ಇತರ ಹೋಟೆಲ್‌ಗಳಿಂದ ಚರಂಡಿಗೆ ಪೈಪ್ ಅಳವಡಿಸಿ ಕೊಳಚೆ ನೀರು ಹರಿಯ ಬಿಡುತ್ತಿರುವುದು ಪತ್ತೆಯಾಗಿದೆ.

ಕೈಕೊಟ್ಟ ಗುತ್ತಿಗೆದಾರ

ಕೊಳಚೆ ನೀರಿನ ಸಮಸ್ಯೆಗೆ ಮುಕ್ತಿ ನೀಡುವ ಸಲುವಾಗಿ ಗ್ರಾ.ಪಂ. ಗುತ್ತಿಗೆದಾರರೊಬ್ಬರಿಂದ ಜೆಸಿಬಿ ಗೊತ್ತು ಪಡಿಸಲಾಗಿತ್ತು. ಕೊನೆಗಳಿಗೆಯಲ್ಲಿ ಕಾರ್ಯಾಚರಣೆಗೆ ಗೈರಾಗಿ ಗುತ್ತಿಗೆದಾರ ಕೈಕೊಟ್ಟ ಘಟನೆಯೂ ನಡೆಯಿತು. ಅಲ್ಲದೆ ಗ್ರಾಮದ ಇತರ ಜೆಸಿಬಿಯವರು ನಾನಾ ಸಬೂಬು ಹೇಳಿ ತಪ್ಪಿಸಿಕೊಂಡರು. ಕೊನೆಗೆ ಬೇರೆ ಗ್ರಾಮದಿಂದ ಜೆಸಿಬಿ ತಂದು ಕಾರ್ಯಾಚರಣೆ ಆರಂಭಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net