ಮೆಕ್ಕಾ, ಮದೀನಾಗೆ ಹೋದರೆ ಸ್ವರ್ಗ ಸಿಗುತ್ತಾ? ಕುಂಭಮೇಳದ ಕುರಿತು Mallikarjun Kharge ವಿವಾದಾತ್ಮಕ ಹೇಳಿಕೆಗೆ ಬಿಜೆಪಿ ನಾಯಕರ ಖಡಕ್ ತಿರುಗೇಟು

Mallikarjun Kharge
Published on

ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್​ ಷಾ ಸೇರಿದಂತೆ ಬಿಜೆಪಿ ನಾಯಕರು ಮಹಾಕುಂಭಮೇಳಕ್ಕೆ ಭೇಟಿ ನೀಡಿ ಪವಿತ್ರಸ್ನಾನ ಮಾಡುತ್ತಿರುವ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಟೀಕಿಸಿದ್ದು, ಗಂಗಾಸ್ನಾನ ಮಾಡುವುದರಿಂದ ಬಡತನ ನಿರ್ಮೂಲನೆಯಾಗುವುದಿಲ್ಲ ಎಂದು ಹೇಳುವ ಮೂಲಕ ವಿವಾದವನ್ನು ಹುಟ್ಟುಹಾಕಿದ್ದಾರೆ.

ಜೈಪುರದಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ಮಾತನಾಡಿದ್ದ ಮಲ್ಲಿಕಾರ್ಜುನ ಖರ್ಗೆ (Mallikarjun Kharge), ಬಿಜೆಪಿ ನಾಯಕರು ಕ್ಯಾಮೆರಾಗಳಿಗಾಗಿ ಗಂಗಾ ನದಿಯಲ್ಲಿ ಸ್ನಾನ ಮಾಡಲು ಪರಸ್ಪರ ಪೈಪೋಟಿ ನಡೆಸುತ್ತಿದ್ದಾರೆ. ಬಿಜೆಪಿ ಹಾಗೂ ಆರ್​ಎಸ್​ಎಸ್​ ನಾಯಕರು ದ್ರೋಹಿಗಳು. ಧರ್ಮದ ಹೆಸರಿನಲ್ಲಿ ಬಡವರ ಶೋಷಣೆ ಮಾಡುತ್ತಿದ್ದಾರೆ. ಈ ರೀತಿಯ ಶೋಷಣೆಯನ್ನು ಕಾಂಗ್ರೆಸ್​ ಎಂದಿಗೂ ಸಹಿಸುವುದಿಲ್ಲ ಎಂದು ಹೇಳಿದ್ದರು. ಇದೀಗ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ತಿರುಗೇಟು ನೀಡಿರುವ ಬಿಜೆಪಿ ನಾಯಕರು ನಿರ್ದಿಷ್ಟ ಸಮುದಾಯವನ್ನು ಸಮಾಧಾನಪಡಿಸಲು ಪ್ರಯತ್ನಿಸುತ್ತಿದೆ ಎಂದು ಕಿಡಿಕಾರಿದೆ.

ಈ ಕುರಿತು ಮಾತನಾಡಿರುವ ಬಿಜೆಪಿ ಎಂಎಲ್​ಸಿ ರವಿಕುಮಾರ್, ಮಲ್ಲಿಕಾರ್ಜುನ್ ಖರ್ಗೆ ಅವರು ಹಿಂದೂ ಧರ್ಮದ ಬಗ್ಗೆ ಮಾತನಾಡುವುದು ಸರಿಯಲ್ಲ. ಹಾಗಾದರೇ ಮೆಕ್ಕಾ, ಮದೀನಾಗೆ ಹೋದರೆ ಸ್ವರ್ಗ ಸಿಕ್ಕಿಬಿಡುತ್ತೆ ಅಂತಾ ಹೇಳೋಕೆ ಖರ್ಗೆ ಅವರಿಗೆ ಧೈರ್ಯ ಇದೆಯಾ ಎಂದು ಪ್ರಶ್ನಿಸಿದ್ದಾರೆ. ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಮಾತನಾಡುವುದು ಕಾಂಗ್ರೆಸ್ಸಿಗೆ ಅಭ್ಯಾಸವಾಗಿಬಿಟ್ಟಿದೆ. ಮಲ್ಲಿಕಾರ್ಜುನ ಖರ್ಗೆಯವರು ಕೂಡಲೇ ಕ್ಷಮೆಯಾಚಿಸಬೇಕು. ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಎಂಎಲ್​ಸಿ ರವಿಕುಮಾರ್​ ಆಗ್ರಹಿಸಿದ್ದಾರೆ.

BJP Leaders

ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ಚಂದ್ರಶೇಖರ ಬಾವಂಕುಲೆ ಮಾತನಾಡಿ, ಕಾಂಗ್ರೆಸ್‌ ನಿರಂತರವಾಗಿ ಹಿಂದೂಗಳ ನಂಬಿಕೆಗಳು ಮತ್ತು ಸಂಪ್ರದಾಯಗಳನ್ನು ಅಗೌರವಿಸುತ್ತ ಬಂದಿದೆ. ಅಲ್ಲದೆ, ನಿರ್ದಿಷ್ಟ ಸಮುದಾಯವನ್ನು ಸಮಾಧಾನ ಪಡಿಸಲು ಪ್ರಯತ್ನಿಸುತ್ತಿದೆ. ಕೋಟ್ಯಂತರ ಹಿಂದೂಗಳು ಭಕ್ತಿ ಮತ್ತು ಶ್ರದ್ಧೆಯಿಂದ ಭಾಗವಹಿಸುವ ಕುಂಭಮೇಳದಂತಹ ಪವಿತ್ರ ಕಾರ್ಯಕ್ರಮವನ್ನು ಅಪಹಾಸ್ಯ ಮಾಡುವ ಮೂಲಕ ಖರ್ಗೆ ಅವರು ಗಂಗಾ ನದಿಯ ಪಾವಿತ್ರ್ಯತೆ ಮತ್ತು ಕೋಟ್ಯಂತರ ಹಿಂದೂಗಳ ಭಾವನೆಗಳನ್ನು ಅವಮಾನಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.

ಅವರ ಹೇಳಿಕೆಯು ಅಸಂಬದ್ಧ ಮಾತ್ರವಲ್ಲ, ತೀವ್ರ ಆಕ್ರೋಶವನ್ನುಂಟು ಮಾಡುತ್ತದೆ. ಹಿಂದೂಗಳು ಯಾವಾಗಲೂ ಸಹಿಷ್ಣುತೆಯ ಗುಣ ಉಳ್ಳವರಾಗಿದ್ದಾರೆ. ಆದರೆ, ಅವರ ನಂಬಿಕೆಯನ್ನು ಅಪಹಾಸ್ಯ ಮಾಡುವ ಹಕ್ಕನ್ನು ಖರ್ಗೆಗೆ ಕೊಟ್ಟವರು ಯಾರು, ಕಾಂಗ್ರೆಸ್ ಹಿಂದೂಗಳ ಮತಗಳನ್ನು ಹುಡುಕುತ್ತದೆ. ಆದರೆ, ಹಿಂದೂಗಳ ಬಗ್ಗೆ ತಿರಸ್ಕಾರ ಭಾವನೆಯನ್ನು ಹೊಂದಿದೆ . ಹಿಂದೂಗಳು ಏನು ತಪ್ಪು ಮಾಡಿದ್ದಾರೆ, ಆರು ದಶಕಗಳಿಗೂ ಹೆಚ್ಚು ಕಾಲ ಈ ದೇಶವನ್ನು ಆಳಲು ಕಾಂಗ್ರೆಸ್‌ಗೆ ಅವಕಾಶ ಮಾಡಿಕೊಟ್ಟದ್ದು ಅವರ ತಪ್ಪೇ ಎಂದು ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ಚಂದ್ರಶೇಖರ ಬಾವಂಕುಲೆ ಪ್ರಶ್ನಿಸಿದ್ದಾರೆ.

https://www.vijayavani.net/had-to-pay-off-loan-sold-poori-sabzi-sachin-tendulkar-virat-kohlis-ex-teammate-recalls-struggle

https://www.vijayavani.net/class-10-girl-dies-after-monkey-pushes-her-from-rooftop

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net