

ಬೆಂಗಳೂರು: ಮುಂದಿನ ಆರು ತಿಂಗಳ ಒಳಗಾಗಿ ಕಾಂಗ್ರೆಸ್ ಸರ್ಕಾರ ಪತನವಾಗುತ್ತೆ ಎಂಬ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಈ ವಾರದ ಅತ್ಯುತ್ತಮ ಜೋಕ್ ವ್ಯಂಗ್ಯವಾಡಿದ್ಧಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಬರೆದುಕೊಂಡಿರುವ ಅವರು ಮಾಜಿ ಸಿಎಂ ಎಚ್ಡಿಕೆ ಅವರು, ಈಗಾಗಲೇ ಜನರ ಮನಸ್ಸಿನಿಂದ ಗೇಟ್‌ಪಾಸ್ ಆಗಿರುವ ತಮ್ಮ ಪಕ್ಷದ ಭವಿಷ್ಯದ ಬಗ್ಗೆ ಚಿಂತಿಸಲಿ ಎಂದಿದ್ದಾರೆ.
6 ತಿಂಗಳಲ್ಲಿ ಸರ್ಕಾರ ಬೀಳುತ್ತೆ ಎಂಬ ಎಚ್ಡಿಕೆ ಹೇಳಿಕೆ ಈ ವಾರದ ಅತ್ಯುತ್ತಮ ಜೋಕ್. H.D.ಕುಮಾರಸ್ವಾಮಿಯವರು ನಮ್ಮ ಸರ್ಕಾರದ ಭವಿಷ್ಯದ ಬಗ್ಗೆ ಚಿಂತಿಸುವುದು ಬಿಟ್ಟು, ಈಗಾಗಲೇ ಜನರ ಮನಸ್ಸಿನಿಂದ ಗೇಟ್‌ಪಾಸ್ ಆಗಿರುವ ತಮ್ಮ ಪಕ್ಷದ ಭವಿಷ್ಯದ ಬಗ್ಗೆ ಚಿಂತಿಸಲಿ. ಅಧಿಕಾರವಿಲ್ಲದೆ ಅತೃಪ್ತ ಆತ್ಮವಾಗಿರೋ ಎಚ್.ಡಿ.ಕುಮಾರಸ್ವಾಮಿ ಹತಾಶೆಯಿಂದ ಸರ್ಕಾರ ಬೀಳಿಸುವ ಕನಸು ಕಾಣುತ್ತಿದ್ದಾರೆ.
ನಮ್ಮ ಸರ್ಕಾರಕ್ಕೆ ರಾಜ್ಯದ ಜನ ನಾವು ನಿರೀಕ್ಷೆ ಮಾಡದಷ್ಟು ಸಂಪೂರ್ಣ ಜನಾದೇಶ ನೀಡಿದ್ದಾರೆ. ನಾವು ಪೂರ್ಣಾವಧಿ ಆಡಳಿತ ನಡೆಸುವುದು ನಿಶ್ಚಿತ. ನಾವು ಜೆಡಿಎಸ್ನವರಂತೆ ಪರಾವಲಂಬಿ ಜೀವಿಗಳಲ್ಲ. ಇನ್ನೊಬ್ಬರ ಆಸರೆಯಲ್ಲಿ ಸರ್ಕಾರ ರಚಿಸಿಲ್ಲ. ಸ್ವಂತ ಬಲದಿಂದ ಈ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಹೀಗಾಗಿ ಸರ್ಕಾರ ಬೀಳಲಿದೆ ಎಂಬ ಕನಸು ತಿರುಕನ ಕನಸಷ್ಟೇ ಎಂದು ಟೀಕಿಸಿದ್ದಾರೆ.
ದೇಶದಲ್ಲಿ ಸ್ಥಾಪಿತ ಸರ್ಕಾರವನ್ನು ಕೆಡವುವ ಕೆಟ್ಟ ಚಾಳಿ ಆರಂಭಿಸಿದ್ದೇ ಬಿಜೆಪಿಯವರು. ಸಹವಾಸ ದೋಷದಿಂದ ಸನ್ಯಾಸಿ ಕೆಟ್ಟ ಎಂಬಂತೆ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡ ತಕ್ಷಣವೆ ಕುಮಾರಸ್ವಾಮಿಯವರಿಗೂ ಆ ಚಾಳಿ ಅಂಟಿಕೊಂಡಂತಿದೆ. ಹೀಗಾಗಿ ಸರ್ಕಾರ ಬೀಳಿಸುವ ಮಾತನಾಡುತ್ತಿದ್ದಾರೆ. ಆದರೆ ಅದು ಸಾಧ್ಯವಾಗದ ಮಾತು. ಇದು ಕೊನೆಗೆ, ಸಿಗದ ದ್ರಾಕ್ಷಿ ಹುಳಿ ಎಂಬ ನರಿಯ ಕಥೆಯಂತಾಗುತ್ತದೆ ಎಂದು ಮಾಜಿ ಸಿಎಂ ಎಚ್ಡಿಕೆ ಹೇಳಿಕೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿರುಗೇಟು ನೀಡಿದ್ದಾರೆ.