ಹದಗೆಟ್ಟ ಕಾರ್ಕಳ ನಗರ ರಸ್ತೆಗಳು

road
ಹೊಂಡಗುಂಡಿಗಳಿಂದ ಸಂಪೂರ್ಣ ಹದಗೆಟ್ಟ ಕಾರ್ಕಳ ಪುರಸಭೆ ವ್ಯಾಪ್ತಿಯ ರಸ್ತೆಗಳು
Published on

ಹರಿಪ್ರಸಾದ್ ನಂದಳಿಕೆ ಕಾರ್ಕಳ

ನಗರದ ರಸ್ತೆಗಳೆಲ್ಲ ಅಲ್ಲಲ್ಲಿ ಹೊಂಡಗುಂಡಿಗಳಿಂದ ಕೂಡಿದ್ದು, ನಿತ್ಯ ವಾಹನ ಸವಾರರ ಸಹಿತ ಜನಸಾಮಾನ್ಯರ ಓಡಾಟಕ್ಕೆ ತೊಂದರೆಯಾಗುತ್ತಿದೆ. ಜಲ್ಲಿ, ಟಾರು ಎದ್ದು ಬೃಹತ್ ಗಾತ್ರದ ಹೊಂಡ ನಿರ್ಮಾಣವಾಗಿ ರಸ್ತೆಯಲ್ಲಿ ಸಂಚಾರ ನಡೆಸುವ ಮಂದಿ ಸಂಕಟ ಅನುಭವಿಸುವಂತಾಗಿದೆ.

ಕಾರ್ಕಳ ಪುರಸಭೆ ವ್ಯಾಪ್ತಿಯ ರಸ್ತೆಗಳಲ್ಲಿ ಮಳೆಗಾಲಕ್ಕೂ ಮುನ್ನವೇ ನಗರದ ರಸ್ತೆಯ ಹಲವೆಡೆ ಹೊಂಡಗುಂಡಿಯಿಂದ ಕೂಡಿತ್ತು. ವಾಹನ ಸವಾರರು, ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಪುರಸಭೆ ರಸ್ತೆ ದುರಸ್ತಿಗೆ ಮುಂದಾಗಿ ತೇಪೆ ಕಾರ್ಯವೂ ನಡೆಸಲಾಗಿತ್ತು. ಆದರೆ ಧಾರಾಕಾರ ಮಳೆ ಪರಿಣಾಮ ರಸ್ತೆ ಡಾಂಬರು ಕಿತ್ತುಹೋಗಿ ಬೃಹತ್ ಹೊಂಡ ನಿರ್ಮಾಣಗೊಂಡು ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಹೊಂಡಗಳ ಅರಿವಿಲ್ಲದ ವಾಹನ ಸವಾರರು ನಿತ್ಯ ಎಡವಟ್ಟು ಮಾಡಿಕೊಳ್ಳುವುದು ಮಾಮೂಲಾಗಿದೆ.

ನಗರದ ಮೂರು ಮಾರ್ಗದಿಂದ ಆನೆಕೆರೆ ಭಾಗಕ್ಕೆ ತೆರಳುವ ರಸ್ತೆಯ ಬಹುತೇಕ ಕಡೆಗಳಲ್ಲಿ ಡಾಂಬರು ಕಿತ್ತು ಹೋಗಿ ಸವಾರರಿಗೆ ಸಂಕಟವಾಗಿದೆ. ಮುಖ್ಯ ಪೇಟೆಯಿಂದ ಉಡುಪಿ ಭಾಗಕ್ಕೆ ತೆರಳುವ ಹೆದ್ದಾರಿ ಶ್ರೀ ವೆಂಕಟರಮಣ ದೇವಸ್ಥಾನದಿಂದ ಸಾಲ್ಮರದವರೆಗೆ ಹಾಗೂ ಕಾಬೆಟ್ಟು ಭಾಗಕ್ಕೆ ತಿರುವಿನ ತನಕ ಅಲ್ಲಲ್ಲಿ ಡಾಂಬರು ಕಿತ್ತು ಹೋಗಿದೆ. ಅನಂತಶಯನದಿಂದ ರಾಘವೇಂದ್ರ ಮಠದ ಕಡೆಗೆ ಹಾದು ಹೋದ ರಸ್ತೆ ಹೊಂಡಮಯವಾಗಿದೆ. ತಾಲೂಕು ಕಚೇರಿ ಜಂಕ್ಷನ್‌ನಿಂದ ಉಡುಪಿ ಭಾಗಕ್ಕೆ ಸಂಚರಿಸುವ ರಸ್ತೆಯ ಬಂಗ್ಲೆಗುಡ್ಡೆ ಮುಖ್ಯ ರಸ್ತೆ, ಮಾರುಕಟ್ಟೆ ಮಾರ್ಗವಾಗಿ ಕಲ್ಲೊಟ್ಟೆ ಸಂಪರ್ಕಿಸಿ ಬಂಡಿಮಠ ಸಂಪರ್ಕಿಸುವ ಪ್ರಮುಖ ರಸ್ತೆ ಸಮಸ್ಯೆ ಸೃಷ್ಟಿಸುತ್ತಿದೆ. ನಿತ್ಯ ಜನ ಸಂಚಾರ ಹೆಚ್ಚಾಗಿರುವ ತಾಲೂಕು ಕಚೇರಿ ಮುಂಭಾಗದ ಅರಣ್ಯ ಇಲಾಖೆ ವಸತಿ ಗೃಹಗಳ ಪಕ್ಕದಲ್ಲೆ ಹಾದು ಹೋಗಿರುವ ಸರ್ವಜ್ಞ ವೃತ್ತದ ಸಂಪರ್ಕ ರಸ್ತೆ ಸಂಪೂರ್ಣ ಹದಗೆಟ್ಟಿದೆ.

ಚರಂಡಿ ಸಮಸ್ಯೆ

ನಗರದ ರಸ್ತೆ ಮಾತ್ರವಲ್ಲದೆ ಪುರಸಭೆ ವ್ಯಾಪ್ತಿಯ 23 ವಾರ್ಡ್‌ಗಳ ಹಲವೆಡೆ ಸಂಪರ್ಕ ರಸ್ತೆ ಬಹುತೇಕ ಹದಗೆಟ್ಟಿವೆ. ಈ ರಸ್ತೆಗಳಲ್ಲಿ ಸಂಚಾರ ಕೂಡ ತ್ರಾಸದಾಯಕ. ಕೆಲವೊಂದು ವಾರ್ಡ್‌ಗಳಲ್ಲಿ ಸರಿಯಾದ ಮಳೆ ನೀರು ಹರಿದು ಹೋಗಲು ಚರಂಡಿ ವ್ಯವಸ್ಥೆಗಳಿಲ್ಲದೆ ಮಳೆ ನೀರು ರಸ್ತೆಯಲ್ಲೇ ಹರಿದು ರಸ್ತೆಗಳಲ್ಲಿ ಕೆಸರು ಕಲ್ಲು ಮಣ್ಣು ಶೇಖರಣೆಯಾಗುತ್ತಿದೆ.

ಸಭೆಯಲ್ಲೂ ಚರ್ಚೆ

ಇತ್ತೀಚೆಗೆ ಪುರಸಭೆ ನೂತನ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಯ ಬಳಿಕ ನಡೆದ ಮೊದಲ ಸಾಮಾನ್ಯ ಸಭೆಯಲ್ಲೂ ನಗರದ ರಸ್ತೆಗಳು ಹದಗೆಟ್ಟ ಬಗ್ಗೆ ಪುರಸಭೆ ಸದಸ್ಯರು ಗಮನಕ್ಕೆ ತಂದು ದುರಸ್ತಿ ಕಾರ್ಯ ನಡೆಸುವ ಬಗ್ಗೆ ಚರ್ಚೆ ಮಾಡಿದ್ದರು. ನೂತನ ಅಧ್ಯಕ್ಷ ಉಪಾಧ್ಯಕ್ಷರಿಗೆ ರಸ್ತೆ ನಿರ್ವಹಣೆಯೇ ಮೊದಲ ಸವಾಲಾಗಿದೆ.

ನಗರದ ಪ್ರಮುಖ ರಸ್ತೆಗಳು ಅಲ್ಲಲ್ಲಿ ಬೃಹತ್ ಗಾತ್ರದ ಹೊಂಡಗುಂಡಿಗಳಿಂದ ಕೂಡಿದ್ದು, ವಾಹನ ಚಲಯಿಸುವುದೇ ಕಷ್ಟಕರ. ಮಳೆಗಾಲದಲ್ಲಿಯಂತೂ ಮಳೆ ನೀರು ನಿಂತು ಹೊಂಡದ ಗೋಚರವಿಲ್ಲದೆ ವಾಹನ ಸವಾರರು ಎಡವಟ್ಟು ಮಾಡಿಕೊಳ್ಳುವುದು ಇಲ್ಲಿ ಮಾಮೂಲಾಗಿದೆ.-ಸಂದೀಪ್ ಪೂಜಾರಿ ವಾಹನ ಸವಾರ

ಸಂಪೂರ್ಣ ಹದಗೆಟ್ಟ ಕೆಲವೊಂದು ಕಡೆಗಳಲ್ಲಿ ಕೂಡಲೇ ತಾತ್ಕಾಲಿಕವಾಗಿ ರಸ್ತೆ ಹೊಂಡ್ನ ಮುಚ್ಚುವ ಕೆಲಸ ಮಾಡುತ್ತೇವೆ. ಮಳೆಗಾಲ ಮುಗಿದ ಕೂಡಲೇ ಹದಗೆಟ್ಟ ರಸ್ತೆಗೆ ಡಾಂಬರು ಹಾಕುವ ಕಾಮಗಾರಿ ನಡೆಯಲಿದೆ. ರಸ್ತೆಗಳ ತುರ್ತು ದುರಸ್ತಿಗೆ ಕ್ರಿಯಾ ಯೋಜನೆ ಸಿದ್ಧಪಡಿಸಿದ್ದೇವೆ. ತಾತ್ಕಾಲಿಕವಾಗಿ ದುರಸ್ತಿಗೊಳಿಸಲಿದ್ದೇವೆ.-ಯೋಗೀಶ್ ದೇವಾಡಿಗ ಕಾರ್ಕಳ ಪುರಸಭೆ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net