ಮಳವಳ್ಳಿ: ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡುವ ಉದ್ದೇಶದಿಂದ ಖಾಸಗಿ ಶಾಲೆಗಳಿಗಿಂದ ಮಿಗಿಲಾದ ಶಿಕ್ಷಣ ನೀಡಲು ಇನ್ನೆರಡು ತಿಂಗಳಲ್ಲಿ ತಾಲೂಕಿನ ಎಲ್ಲ ಸರ್ಕಾರಿ ಶಾಲೆಗಳಿಗೂ ಮಾಹಿತಿ ತಂತ್ರಜ್ಞಾನದ ಡಿಜಿಟಲ್ ಸ್ಪರ್ಶ ನೀಡಲಾಗುವುದು ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಹೇಳಿದರು.

ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ತಾಪಂ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿದ್ದ ಅವರು, ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು ಬಳಿಕ ಮಾತನಾಡಿದರು. ಸರ್ಕಾರಿ ಶಾಲೆಗಳಿಗೆ ಡಿಜಿಟಲ್ ಟಚ್ ನೀಡುವುದರ ಜತೆಗೆ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಲಾಗುವುದು. ಬೇಸಿಗೆ ಬಿಸಿಲಿನ ತಾಪಮಾನದ ಜತೆಗೆ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಾಂಕ್ರಾಮಿಕ ಕಾಯಿಲೆ ಹರಡುವ ಸಾಧ್ಯತೆ ಇದೆ. ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಕ್ರಮವಹಿಸಿ ಎಂದು ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು. ತಿಟ್ಟಮಾರನಹಳ್ಳಿ ಏತ ನೀರಾವರಿ ಯೋಜನೆ ಕಾಮಗಾರಿ ಸಮಸ್ಯೆಗಳನ್ನು ಸರಿಪಡಿಸಲು ಗುತ್ತಿಗೆ ಪಡೆದಿರುವ ಗುತ್ತಿಗೆದಾರ ಸಂಪರ್ಕಕ್ಕೆ ಸಿಗುತ್ತಿಲ್ಲ. ಆತನ ಗುತ್ತಿಗೆ ಟೆಂಡರ್ ಕಪ್ಪುಪಟ್ಟಿಗೆ ಸೇರಿಸಲು ಕ್ರಮ ವಹಿಸುವಂತೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗೆ ಸೂಚಿಸಿದರು. ಹಲಗೂರು , ಬೆಳಕವಾಡಿ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿರುವ ವೈದ್ಯರು ಮತ್ತು ಸಿಬ್ಬಂದಿ ಕೊರತೆ ನೀಗಿಸಲು ಹಾಗೂ ತುರ್ತು ಚಿಕಿತ್ಸಾ ವಾಹನಗಳನ್ನು ಆದ್ಯತೆಗೆ ಅನುಗುಣವಾಗಿ ಪೂರೈಸಲು ಕ್ರಮ ವಹಿಸಲಾಗುವುದು ಎಂದರು. ಮುತ್ತತ್ತಿ ಕಾಡಂಚಿನ ಗ್ರಾಮಗಳಲ್ಲಿ ಮೊಬೈಲ್ ಕ್ಲಿನಿಕ್ ತೆರೆಯಲು ಮೇಲಧಿಕಾರಿಗಳಿಗೆ ವರದಿ ನೀಡವಂತೆ ಸಭೆಯಲ್ಲಿದ್ದ ಆರೋಗ್ಯಾಧಿಕಾರಿಗೆ ಸೂಚಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಉಮಾ ಮಾತನಾಡಿ, ಈಗಾಗಲೇ ತಾಲೂಕಿನಲ್ಲಿ 145 ಸರ್ಕಾರಿ ಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್ ಪ್ರಾರಂಭ ಮಾಡಲಾಗಿದ್ದು, 123 ಶಾಲೆಗಳು ಬಾಕಿ ಉಳಿದಿವೆ ಎಂದು ಮಾಹಿತಿ ನೀಡಿದರು.
ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಸಂತೋಷ್ ಮಾತನಾಡಿ, ತಾಲೂಕಿನಲ್ಲಿ ಒಟ್ಟು 16 ವಸತಿ ಶಾಲೆಗಳಿದ್ದು, ಐದು ಬಾಲಕಿಯರ ಹಾಸ್ಟೆಲ್‌ಗಳಲ್ಲಿ ಒಬ್ಬರು ಕಾಯಂ ವಾರ್ಡನ್ ಕರ್ತವ್ಯ ನಿರ್ವಹಿಸುತ್ತಿದ್ದು, ನಾಲ್ಕು ಹುದ್ದೆಗಳಲ್ಲಿ ಮಹಿಳಾ ವಾರ್ಡನ್ ಹುದ್ದೆ ಅವಶ್ಯಕತೆ ಇದೆ ಎಂದು ಶಾಸಕರ ಗಮನಕ್ಕೆ ತಂದರು.
ಕೃಷಿ ಇಲಾಖೆ ಸಹಾಯಕ ನಿರ್ದೇಶಕ ದೀಪಕ್ ಮಾತನಾಡಿ, ಬಿತ್ತನೆ ಬೀಜ ಮತ್ತು ರಸಗೊಬ್ಬರ ಸಮರ್ಪಕವಾಗಿ ಪೂರೈಕೆಯಾಗಿದ್ದು, ಯಾವುದೇ ರೀತಿಯ ಕೊರತೆ ಉಂಟಾಗಿಲ್ಲ ಎಂದು ಮಾಹಿತಿ ನೀಡಿದರು.
ಅರಣ್ಯ ಇಲಾಖೆ ಅಧಿಕಾರಿಗಳು ಮಾತನಾಡಿ, ಇತ್ತೀಚಿಗೆ ಚಿರತೆ ಮತ್ತು ಆನೆಗಳ ದಾಳಿ ಹೆಚ್ಚಾಗಿದ್ದು, ಚಿರತೆ ಸೆರೆ ಹಿಡಿಯಲು ಬೋನಿನ ಸಂಖ್ಯೆ ಕಡಿಮೆ ಇದೆ. ಆನೆಗಳ ಹಾವಳಿ ಹೆಚ್ಚಾಗಿರುವುದರಿಂದ ಆನೆ ಕಾರ್ಯಪಡೆ ರಚಿಸಬೇಕು ಹಾಗೂ ಬಸವನಹಳ್ಳಿ ಬೆಟ್ಟದ ಭಾಗದಲ್ಲಿ ಆನೆಗಳ ಹಾವಳಿಯಿಂದ ಬೆಳೆ ನಷ್ಟವಾಗಿರುವ ರೈತರಿಗೆ ಪರಿಹಾರ ನೀಡಲು 50 ಲಕ್ಷ ರೂ.ಪರಿಹಾರದ ಅನುದಾನ ಮಂಜೂರು ಮಾಡಿಸುವಂತೆ ಶಾಸಕರ ಗಮನಕ್ಕೆ ತಂದರು. ತಾಲೂಕು ಮಟ್ಟದ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಇಲಾಖಾವಾರು ಪ್ರಗತಿ ಕುರಿತು ವಿವರಿಸಿದರು.
ತಹಸೀಲ್ದಾರ್ ಡಾ.ಲೋಕೇಶ್, ತಾಪಂ ಇಒ ಶ್ರೀನಿವಾಸ್, ಡಿವೈಎಸ್ಪಿ ವಿ. ಕೃಷ್ಣಪ್ಪ, ಗ್ಯಾರಂಟಿ ಯೋಜನೆ ತಾಲೂಕು ಅಧ್ಯಕ್ಷ ಮಹದೇವು ಇದ್ದರು.
ನೌಕರರ ಕೊರತೆ ನೀಗಿಸಲು ಮನವಿ
ಶಿಕ್ಷಣ ಇಲಾಖೆ ಅತಿಥಿ ಶಿಕ್ಷಕರ ನೇಮಕದ ನಡುವೆಯೂ 157 ಶಿಕ್ಷಕರ ಕೊರತೆ, ರೇಷ್ಮೆ ಇಲಾಖೆಯಲ್ಲಿ 50 ಸಿಬ್ಬಂದಿ ಹಾಗೂ ತೋಟಗಾಗಾರಿಕೆ, ಆರೋಗ್ಯ ಸೇರಿದಂತೆ ಬಹುತೇಕ ಇಲಾಖೆಗಳ ಅಧಿಕಾರಿಗಳು ತಮ್ಮ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇರುವುದನ್ನು ಭರ್ತಿಮಾಡಿಕೊಡಲು ಮನವಿ ಮಾಡಿಕೊಂಡರು. ನೌಕರರ ಕೊರತೆಯ ಬಗ್ಗೆ ಪಟ್ಟಿಮಾಡಿ ವರದಿ ನೀಡಿದರೆ ಸಂಬಂಧಪಟ್ಟ ಇಲಾಖೆಗಳ ಜತೆಗೆ ಚರ್ಚಿಸಲಾಗುವುದು ಎಂದು ಅಧಿಕಾರಿಗಳಿಗೆ ಶಾಸಕರು ತಿಳಿಸಿದರು.