IPL 2024: ಕ್ಯಾಪ್ಟನ್ ಸ್ಥಾನ ತ್ಯಜಿಸಿದ್ರಾ ಧೋನಿ? ಇನ್ಮುಂದೆ ಮಾಹಿ ಪಾತ್ರವೇ ಬೇರೆ!

WhatsApp Image 2024-03-05 at 10.37.47 AM
Published on

ಮುಂಬೈ: ಐಪಿಎಲ್ 2024ರ ಆವೃತ್ತಿಯ ಪಂದ್ಯಗಳ ಆರಂಭಕ್ಕೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್​ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡ ಸಾಲು ಸದ್ಯ ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರೀ ಗೊಂದಲ ಮೂಡಿಸಿದೆ. ಒಂದೆಡೆ ಸಿಎಸ್​ಕೆ ತಂಡದ ಕ್ಯಾಪ್ಟನ್ ಆಗಿ ಎಂ.ಎಸ್​ ಮುಂದುವರೆಯುತ್ತಿದ್ದಾರೆ ಎಂದು ಖುಷಿಪಟ್ಟ ಫ್ಯಾನ್ಸ್​ಗೆ ಈಗ ಈ ಪೋಸ್ಟ್​ ನೋಡಿ ತೀವ್ರ ಬೇಸರವಾಗಿದೆ. ಅಸಲಿಗೆ ಮಾಹಿ ಹೇಳಿದ್ದೇನು ಎಂಬುದು ಹೀಗಿದೆ.

ಕಳೆದ ವರ್ಷವೇ ಸಿಎಸ್​ಕೆ ತಂಡದ ಕ್ಯಾಪ್ಟನ್ ಆಗಿ ಧೋನಿ ಮುಂದುವರೆಯುವುದಿಲ್ಲ ಎಂಬ ಸುದ್ದಿ ವ್ಯಾಪಕವಾಗಿ ಹರಿದಾಡಿತ್ತು. ಆದ್ರೆ, ಈ ಊಹಾಪೋಹಗಳಿಗೆ ತೆರೆಎಳೆದ ಮಾಹಿ, "ನನ್ನ ದೇಹ ಸಪೋರ್ಟ್​ ಮಾಡುವುದು ಕಷ್ಟವಾಗಿದೆ. ಆದರೂ ಮತ್ತೊಂದು ಸೀಸನ್ ಆಡಬೇಕು ಎಂಬ ಬಯಕೆಯಿದೆ" ಎಂದಿದ್ದರು. ಅದರಂತೆ ಇದೀಗ 2024ರ ಆವೃತ್ತಿಯಲ್ಲಿ ಚೆನ್ನೈ ತಂಡದ ನಾಯಕನಾಗಿ ಧೋನಿ ಕಣಕ್ಕಿಳಿಯಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದ್ದೇ ತಡ, ಫ್ಯಾನ್ಸ್​ ಅತೀವ ಸಂತಸ ವ್ಯಕ್ತಪಡಿಸಿದರು.

ಆದ್ರೂ ಕೂಡ ಸಾಮಾಜಿಕ ಜಾಲತಾಣದಲ್ಲಿ ಇದೇ ಧೋನಿ ಅವರ ಕಡೆ ಸೀಸನ್ ಎಂದು ಹಲವರು ಭವಿಷ್ಯ ನುಡಿದಿದ್ದಾರೆ. ಆದ್ರೆ, ಕ್ಯಾಪ್ಟನ್ ಕೂಲ್ ಮಾತ್ರ ಇಲ್ಲಿಯವರೆಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡದೆ, ಸಿಎಸ್​ಕೆ ನಾಯಕನಾಗಿ ತಮ್ಮ ಮೊದಲ ಪಂದ್ಯ ಆರ್​ಸಿಬಿ ವಿರುದ್ಧ ಸೆಣಸಾಡಲು ಸಜ್ಜಾಗುತ್ತಿದ್ದಾರೆ. ಇದೆಲ್ಲದರ ಮಧ್ಯೆ ಈಗ ಎಂ.ಎಸ್. ಧೋನಿ 'ಹೊಸ ಸೀಸನ್-ಹೊಸ ಪಾತ್ರ' ಎಂಬ ಪೋಸ್ಟ್ ಹಂಚಿಕೊಂಡಿದ್ದು, ಸದ್ಯ ಇದು ಅವರ ಅಭಿಮಾನಿಗಳಲ್ಲಿ ಭಾರೀ ಅನುಮಾನಕ್ಕೆ ಎಡಮಾಡಿಕೊಟ್ಟಿದೆ.

ಐಪಿಎಲ್‌ನ ಸಿಎಸ್​ಕೆ ಫ್ರಾಂಚೈಸ್‌ನಲ್ಲಿ ಹೊಸ ಪಾತ್ರದ ಬಗ್ಗೆ ಸುಳಿವು ನೀಡಿರುವ ಧೋನಿ ಏನು ಹೇಳಲು ಹೊರಟಿದ್ದಾರೆ ಎಂಬುದು ಸದ್ಯಕ್ಕೆ ಸ್ಪಷ್ಟವಾಗಿಲ್ಲ. ಆದರೆ ಹೊಸ ಬದಲಾವಣೆಯೊಂದು ಆಗಿರುವುದು ಖಚಿತ. 42 ವರ್ಷದ ಮಾಹಿ ಕ್ಯಾಪ್ಟನ್ ಆಗಿ ಅಖಾಡಕ್ಕೆ ಇಳಿಯುತ್ತಿರುವ ಮಾಹಿ ಮೊದಲ ಏಳು ಪಂದ್ಯಗಳಲ್ಲಿ ಮಾತ್ರ ನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದಾರೆ. ಬಳಿಕ ಮತ್ತೊಬ್ಬರು ಸಿಎಸ್​ಕೆಗೆ ಕ್ಯಾಪ್ಟನ್ ಆಗಲಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿದೆ.

ಸದ್ಯ ಇದು ಎಷ್ಟರ ಮಟ್ಟಿಗೆ ನಿಜ ಎಂಬುದು ಇನ್ನೂ ತಿಳಿದುಬಂದಿಲ್ಲ. ಆದ್ರೆ, "ಹೊಸ ಸೀಸನ್ ಮತ್ತು ಹೊಸ ಪಾತ್ರಕ್ಕಾಗಿ ಕಾಯಲು ಸಾಧ್ಯವಿಲ್ಲ. ಟ್ಯೂನ್ ಆಗಿರಿ" ಎಂದು ಧೋನಿ ತಮ್ಮ ಫೇಸ್‌ಬುಕ್‌ನಲ್ಲಿ ಮಾಡಿದ ಪೋಸ್ಟ್ ನೋಡಿದ್ರೆ ಇದು ನಿಜವೇ ಇರಬಹುದು ಅನಿಸುತ್ತದೆ. ಆದರೆ, ಸ್ವತಃ ಕ್ಯಾಪ್ಟನ್ ಕೂಲ್ ತಮ್ಮ ಪಾತ್ರವೇನು ಎಂಬುದನ್ನು ಬಹಿರಂಗಪಡಿಸುವವರೆಗೂ ನಿರೀಕ್ಷಿಸಬೇಕಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net